ಹುಕ್ಕೇರಿ :
ಭಗವದ್ಗೀತೆ ಒಂದು ಜ್ಞಾನ ಜ್ಯೋತಿ. ಒಂದೊಂದು ಸಾಲು ಕೂಡ ಜ್ಞಾನದ ಒಂದೊಂದು ಕಿಡಿಯನ್ನು ಹೊತ್ತಿಸುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಭಗವದ್ಗೀತೆಯ ಹಿನ್ನೆಲೆಯಲ್ಲಿ ಹುಕ್ಕೇರಿಯಲ್ಲಿ ಶನಿವಾರ ಸಂಜೆ ಅವರು ಪ್ರವಚನ ನೀಡುತ್ತಿದ್ದರು.
ಭಗವದ್ಗೀತೆಯ ಅನುಭವವಾಗಲು ನಾವು ಸಾಕಷ್ಟು ಓದಿರಬೇಕು. ಮನಸ್ಸು ಏನೇನೋ ಲೇಪವನ್ನು ಮೆತ್ತಿಕೊಂಡಿರುತ್ತದೆ. ಆ ಲೇಪವನ್ನು ಕಡಿಮೆ ಮಾಡಿದಾಗ ಜ್ಞಾನದ ಅನುಭವವಾಗುತ್ತದೆ ಎಂದ ಅವರು, ಭಗವದ್ಗೀತೆ ಎಂದರೆ ಭಗವಂತನ ಗೀತೆ ಎಂದರು.
ದಿನಾಲು ಭಗವದ್ಗೀತೆಯ ಒಂದು ಅಧ್ಯಾಯ ಓದಿದರೆ ಮನಸ್ಸಿಗೆ ಖಿನ್ನತೆ ಆವರಿಸುವುದಿಲ್ಲ. ಭಗವದ್ಗೀತೆ ಶ್ರೇಷ್ಠ ಕೃತಿಯಾಗಿದ್ದು, ವಿಶ್ವದಾದ್ಯಂತ ಮಾನ್ಯತೆ ಗಳಿಸಿದೆ. ಭಗವದ್ಗೀತೆ ಎಲ್ಲರ ಮನೆಯಲ್ಲಿರುತ್ತದೆ. ಆದರೆ ಬಹಳಷ್ಟು ಜನರು ಓದಿರುವುದಿಲ್ಲ. ಹಾಗಾಗಿ ಭಗವದ್ಗೀತೆ ಅಭಿಯಾನ ನಡೆಸಲಾಗುತ್ತಿದೆ. ನೂರಾರು ಕೇಂದ್ರಗಳಲ್ಲಿ ಶ್ಲೋಕ ಪಠಣ ನಡೆಯುತ್ತಿದೆ ಎಂದು ಶ್ರೀಗಳು ತಿಳಿಸಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ಸ್ವರ್ಣವಲ್ಲೀ ಶ್ರೀಗಳು ಬಹಳಷ್ಟು ಕಷ್ಟಪಟ್ಟು ಭಗವದ್ಗೀತೆ ಆರಂಭಿಸಿದ್ದಾರೆ. ಇಂದಿಗೂ ಅದನ್ನು ಅದ್ಭುತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅದಕ್ಕೆ ನಮ್ಮೆಲ್ಲರ ಸಹಕಾರ ಇರಲಿದೆ ಎಂದರು.
ಸ್ವರ್ಣವಲ್ಲೀ ಮಠದಲ್ಲಿ ಜಾತಿ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣಲಾಗುತ್ತದೆ. ಎಲ್ಲರಿಗೂ ಭಗವದ್ಗೀತೆ ಕಲಿಸಿಕೊಡಲಾಗುತ್ತಿದೆ. ಇದೊಂದು ಅಪರೂಪದ ಮಠವಾಗಿದೆ ಎಂದೂ ಹುಕ್ಕೇರಿ ಸ್ವಾಮಿಗಳು ಹೇಳಿದರು.
ಶ್ರೀರಾಮ ಸೇನೆಯ ಮುಖಂಡ ಪ್ರಮೋದ ಮುತಾಲಿಕ, ಭಗವದ್ಗೀತೆಯ ಶ್ರೇಷ್ಠ ವಿಚಾರಧಾರೆಯನ್ನು ಜೀವನದಲ್ಲಿ ಆಚರಣೆಗೆ ತಂದರೆ ಸಾರ್ಥಕತೆ ಇರುತ್ತದೆ. ಏನೇ ಬಂದರೂ ಅದನ್ನು ಎದುರಿಸುವ ಶಕ್ತಿಯನ್ನು ಭಗವದ್ಗೀತೆ ನೀಡುತ್ತದೆ. ಭಗವದ್ಗೀತೆಯಲ್ಲಿ ಪ್ರತಿಯೊಂದಕ್ಕೂ ಪರಿಹಾರವಿದೆ. ಅರ್ಜುನನಿಗೆ ಹೇಳುವ ಈ ಪಾಠ ಇಡೀ ಮನುಕುಲಕ್ಕೇ ಪಾಠವಾಗಿದೆ. ಇಂದಿನ ರಾಷ್ಟ್ರದ ದುಸ್ಥಿತಿಗೆ ಭಗವದ್ಗೀತೆ ಉತ್ತರವಾಗಿದೆ. ಇಂತಹ ಭಗವದ್ಗೀತೆಯನ್ನು ಮನೆ ಮನೆಗೆ ತಲುಪಿಸುವ ಕೆಲಸಕ್ಕಾಗಿ ಸ್ವರ್ಣವಲ್ಲೀ ಶ್ರೀಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಅಭಿನವ ಮಂಜುನಾಥ ಮಹಾರಾಜರು, ರಾಮಣ್ಣ ಬಂತಾಯಿ, ರಾಮಚಂದ್ರ ಜೋಶಿ, ಹನುಮಂತ ಇನಾಮದಾರ, ಸರ್ವೇಶ ಜಕಾತಿ, ಪರಮೇಶ್ವರ ಹೆಗಡೆ, ಸುಬ್ರಹ್ಮಣ್ಯ ಭಟ್, ಅನಿರುದ್ಧ ಜೋಶಿ, ಪ್ರಕಾಶ ಮುತಾಲಿಕ, ತಮ್ಮನಗೌಡ ಪಾಟೀಲ, ವೀರೇಶ ತಾರಳಿ, ಅರವಿಂದ ದೇಶಪಾಂಡೆ, ನಿಂಗಪ್ಪ ಕುಂಬಾರ, ಹರೀಶ ದೊಡ್ಡಲಿಂಗಣ್ಣವರ್, ಗೋವಿಂದ ಮುತಾಲಿಕ, ಧೀರೇಂದ್ರ ಕುಲಕರ್ಣಿ, ಬಾಬು ನಾಯಕ, ಮೊದಲಾದವರು ಇದ್ದರು.