ಬೆಳಗಾವಿ :
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ವತಿಯಿಂದ ರಾಜ್ಯಾದ್ಯಂತ ಕಳೆದ ಒಂದು ತಿಂಗಳಿಂದ ನಡೆದಿರುವ ಭಗವದ್ಗೀತೆ ಅಭಿಯಾನದ ಮಹಾಸಮರ್ಪಣೆ ಕಾರ್ಯಕ್ರಮ ಡಿ.23ರಂದು ಸಂಜೆ 4 ಗಂಟೆಗೆ ನಗರದ ಲಿಂಗರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಸದೃಢ ಸಮಾಜದ ನಿರ್ಮಾಣಕ್ಕೆ ಆಧ್ಯಾತ್ಮ ವಿದ್ಯೆಯ ಆಕರವಾದ ಭಗವದ್ಗೀತೆಯ ಮೂಲಕ ಸಂಸ್ಕಾರ ನೀಡಿ ಸುಸಂಸ್ಕೃತ ಸಮಾಜದ ನಿರ್ಮಾಣದ ಆಶಯದೊಂದಿಗೆ ಸೊಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು 2007ರ ಅಕ್ಟೋಬರ್ ನಲ್ಲಿ ರಾಜ್ಯಾದ್ಯಂತ ಭಗವದ್ಗೀತಾ ಅಭಿಯಾನವನ್ನು ಪ್ರಾರಂಭಿಸಿದರು. ಈ ಬಾರಿ ರಾಜ್ಯ ಮಟ್ಟದ 17ನೇ ಅಭಿಯಾನ ಬೆಳಗಾವಿ ಕೇಂದ್ರಿತವಾಗಿ ನಡೆದಿದೆ.
ನ.21ರಂದು ಬೆಳಗಾವಿಯಲ್ಲಿ ಅಭಿಯಾನ ಉದ್ಘಾಟನೆಗೊಂಡಿತು. ಅಭಿಯಾನದ ಅಂಗವಾಗಿ ಶ್ಲೋಕ ಪಠಣ, ವಿಚಾರಸಂಕಿರಣ, ಪ್ರವಚನ, ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಭಗವದ್ಗೀತೆ ಶ್ಲೋಕ ಪಠಣ ಸ್ಪರ್ಧೆಗಳು, ಭಗವದ್ಗೀತೆ ಮತ್ತು ಕಾನೂನು, ಭಗವದ್ಗೀತೆ ಮತ್ತು ನಿರ್ವಹಣಾ ಶಾಸ್ತ್ರ, ಹಾಗೂ ಗೀತಾಸಮನ್ವಯ ಎಂಬ ಅತ್ಯಂತ ಮಹತ್ವಪೂರ್ಣವಾದ 3 ವಿಚಾರ ಸಂಕಿರಣ ನಡೆಯಿತು.
ಅಲ್ಲದೇ, ಕಳೆದ ಒಂದು ತಿಂಗಳ ಅವಧಿಯಲ್ಲಿ ಬೆಳಗಾವಿ ನಗರದಲ್ಲಿ 80, ಗ್ರಾಮೀಣ ಭಾಗದಲ್ಲಿ 50ಕ್ಕೂ ಹೆಚ್ಚು ಹಾಗೂ ರಾಜ್ಯದ ವಿವಿಧೆಡೆ 269 ಕೇಂದ್ರಗಳು ಸೇರಿದಂತೆ ಒಟ್ಟು ಸುಮಾರು 400 ಕೇಂದ್ರಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ನಡೆದಿದೆ. ಈಗಾಗಲೇ ನಗರದಲ್ಲಿ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಾಗೂ ತಾಲೂಕುಗಳಲ್ಲಿ 13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಕಲಿಸಿಕೊಡಲಾಗಿದೆ.
ಶುಕ್ರವಾರ ಗೀತಾ ಜಯಂತಿ ದಿನ ಬೆಳಗಾವಿ ನಗರದ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಮಗ್ರ ಗೀತಾಪಠಣ ನಡೆಯಿತು.

*ಮಹಾಸಮರ್ಪಣೆ*
ಸವರ್ಣವಲ್ಲೀ ಸಂಸ್ಥಾನದ ಭಗವದ್ಗೀತಾ ಅಭಿಯಾನ ಟ್ರಸ್ಟ್ ಕರ್ನಾಟಕ ಹಾಗೂ ಬೆಳಗಾವಿಯ ಜನಕಲ್ಯಾಣ ಟ್ರಸ್ಟ್ ಸಹಯೋಗದಲ್ಲಿ ಡಿ.23 ರಂದು ಬೆಳಗಾವಿಯ ಕಾಲೇಜು ರಸ್ತೆಯ ಲಿಂಗರಾಜ ಮೈದಾನದಲ್ಲಿ ರಾಜ್ಯಮಟ್ಟದ ಮಹಾಸಮರ್ಪಣೆ ನಡೆಯಲಿದೆ.
ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕೇಂದ್ರ ಕಾನೂನು, ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ್ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ರಾಜ್ಯಸಭಾ ಸದಸ್ಯ ಹಾಗೂ ಚಿಂತಕ ಸುದಾಂಶು ತ್ರಿವೇದಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಭಗವದ್ಗೀತಾ ಅಭಿಯಾನ ಸಮಿತಿಯ ಗೌರವಾಧ್ಯಕ್ಷ ಡಾ. ಪ್ರಭಾಕರ ಕೋರೆ, ಸಮಿತಿಯ ಅಧ್ಯಕ್ಷ ಗೋಪಾಲ ಜಿನಗೌಡ ಮೊದಲಾದವರು ಉಪಸ್ಥಿತರಿರುವರು.
ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೆಳಗಾವಿ ಜಿಲ್ಲೆಯೂ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಒಟ್ಟು 20 ಸಾವಿರಕ್ಕೂ ಹೆಚ್ಚು ಜನ ಭಗವದ್ಗೀತೆ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಗರದ ವಿವಿಧ ಕಡೆಗಳಿಂದ ಈ ಮಹಾಸಮರ್ಪಣೆಗೆ ಆಗಮಿಸಲಿರುವ ಮಕ್ಕಳಿಗೆ, ಮಾತೆಯರಿಗೆ ಮತ್ತು ಮಹನೀಯರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಸಭಾ ಕಾರ್ಯಕ್ರಮದ ಬಳಿಕ ನೃತ್ಯರೂಪಕ ಪ್ರದರ್ಶನ ನಡೆಯಲಿದೆ.

 

*ಸಿದ್ಧತೆ*
ಲಿಂಗರಾಜ ಮೈದಾನದಲ್ಲಿ ಭಗವದ್ಗೀತೆ ಮಹಾಸಮರ್ಪಣೆ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆದಿದೆ. 60 ಅಡಿಯ ಬೃಹತ್ ವೇದಿಕೆ ಸಿದ್ಧಗೊಳ್ಳುತ್ತಿದೆ. 12 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ, ನೀರು, ಬಾಳೆಹಣ್ಣು, ಲಘು ಉಪಹಾರ ಮೊದಲಾದ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ.

ಭಗವದ್ಗೀತೆ ಅಭಿಯಾನ: ಪಾರ್ಕಿಂಗ್ ಮಾಹಿತಿ

ಬೆಳಗಾವಿ: ಶನಿವಾರ ಸಂಜೆ 4 ಗಂಟೆಯಿಂದ ಬೆಳಗಾವಿಯ ಲಿಂಗರಾಜ ಕಾಲೇಜು ಮೈದಾನದಲ್ಲಿ ಭಗವದ್ಗೀತೆ ಅಭಿಯಾನ ಮಹಾಸಮರ್ಪಣೆ ನಡೆಯಲಿರುವ ಹಿನ್ನೆಲೆಯಲ್ಲಿ 2 ಸ್ಥಳಗಳಲ್ಲಿ ವಾಹನ ಪಾರ್ಕಿಂಗ್ ಮಾಡಲು ಕೋರಲಾಗಿದೆ.

ಬಸ್, ಕಾರು ಮತ್ತಿತರ ವಾಹನಗಳನ್ನು ಸರದಾರ್ ಮೈದಾನದಲ್ಲಿ ಹಾಗೂ ದ್ವಿಚಕ್ರ ವಾಹನಗಳನ್ನು ಸನ್ಮಾನ್ ಪೆಟ್ರೋಲ್ ಬಂಕ್ ಬಳಿ ಮಹಿಳಾ ವಿದ್ಯಾಲಯ( ಮರಾಠಿ)ದ ಮೈದಾನದಲ್ಲಿ ಪಾರ್ಕ್ ಮಾಡಲು ಸಂಘಟಕರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗೆ 6362861375 ನಂಬರ್ ಸಂಪರ್ಕಿಸಬಹುದು.