ಬೆಂಗಳೂರು :

“ದೇವಸ್ಥಾನ, ದೇವರು, ಭಕ್ತಿ ಏನು ಬಿಜೆಪಿಯವರ ಮನೆ ಆಸ್ತಿಯೇ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಿಡಿ ಕಾರಿದರು.

ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸುವ ಮುನ್ನ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯಿಸಿದರು.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಯ ವೇಳೆ ಮುಖ್ಯಮಂತ್ರಿಗಳು ಮತ್ತು ಕೆಲವು ಮಂತ್ರಿಗಳು ಮಾಂಸ ಸೇವಿಸಿ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ;

“ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದು ಬಿಜೆಪಿಯವರಿಗೆ ತಿಳಿಹೇಳುತ್ತೇನೆ.

ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧ ವೈಯಕ್ತಿಕವಾದುದು. ಸುತ್ತೂರು ಮಠ, ದೇವಸ್ಥಾನದ ಗರ್ಭಗುಡಿಗೆ ಹೋಗುವುದೆಲ್ಲಾ ವೈಯಕ್ತಿಕ ವಿಚಾರ. ಬಿಜೆಪಿಯವರಿಗೆ ಏಕೆ ಹೊಟ್ಟೆ ಉರಿ.

ಬಿಜೆಪಿಯವರು ಅಧಿಕಾರಕ್ಕೆ ಬಂದು 10 ವರ್ಷವಾಗಿದೆ. ಒಂದಷ್ಟು ರಾಜ್ಯಗಳಲ್ಲಿ ಈಗ ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವ ಮುಂಚಿತವಾಗಿಯೂ ಧಾರ್ಮಿಕ ದತ್ತಿ ಇಲಾಖೆ ಇರಲಿಲ್ಲವೇ? ದೇವಸ್ಥಾನಗಳನ್ನು ಕಾಂಗ್ರೆಸ್ ಸರ್ಕಾರಗಳು ಊರ್ಜಿತ ಮಾಡಿಲ್ಲವೇ? ಕೆಂಗಲ್ ಹನುಮಂತಯ್ಯ ಅವರು 2 ರೂಪಾಯಿಗಳಿಗೆ ಭಗವದ್ಗೀತೆಯ ಸಣ್ಣ ಪುಸ್ತಕಗಳನ್ನು ಹಂಚುತ್ತಿದ್ದರು.

ನಾವು ಸರ್ವ ಧರ್ಮಗಳನ್ನು ಸಮಾನತೆಯಿಂದ ನೋಡುವವರು. ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆ ಸೇರಿದಂತೆ ಎಲ್ಲರನ್ನೂ ಗೌರವದಿಂದ ನೋಡುತ್ತೇವೆ. ಯುಪಿಎ ಸರ್ಕಾರ ಜೈನರನ್ನು ಅಲ್ಪಸಂಖ್ಯಾತ ವರ್ಗಕ್ಕೆ ಸೇರ್ಪಡೆ ಮಾಡಿತ್ತು. ಊರಲ್ಲಿ ಹುಟ್ಟುವ ಹೋರಿಗಳೆಲ್ಲಾ ಬಸವ ಆಗಲು ಸಾಧ್ಯವೇ? ಏನೇನೋ ಪ್ರಯತ್ನ ಮಾಡುತ್ತಿದ್ದಾರೆ ಮಾಡಲಿ.

*ನಾವು ಕಬ್ಬಾಳಮ್ಮ ದೇವರಿಗೆ ಬಲಿ ಕೊಡುವುದೇ ಕುರಿ*

ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದು ತಪ್ಪು ಎಂದು ಬಿಜೆಪಿ ಹೇಳುತ್ತಿದೆ ಎಂದಾಗ “ನಮ್ಮ ಕಡೆಯ ಕಬ್ಬಾಳಮ್ಮ ದೇವರಿಗೆ ಬನ್ನಿ. ಆ ದೇವರಿಗೆ ಬಲಿ ಕೊಡುವುದೇ ಕುರಿ. ನಮ್ಮ ತಾತ, ಮುತ್ತಾತರ ಕಾಲದಲ್ಲಿ ಕೋಣ ಕಡಿಯುತ್ತಿದ್ದರು.

ನಮ್ಮ ಮನೆಯಲ್ಲಿ ಕಳ್ಳತನವಾದಾಗ ನಮ್ಮ ಅಜ್ಜಿ ಕೋಣವನ್ನು ಹರಕೆ ಕೊಟ್ಟರು. ದೇವರು ಆನೆ, ಒಂಟೆ, ಹುಲಿಗಳನ್ನು ಬಲಿ ತೆಗೆದುಕೊಳ್ಳುವುದಿಲ್ಲ. ಬದಲಾಗಿ ಕೋಳಿ, ಕುರಿ, ಮೇಕೆ ಬಲಿಕೊಡುತ್ತೇವೆ.

ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತಾರೆ ಎನ್ನುವ ವಿಚಾರವನ್ನೇ ಬಿಜೆಪಿ ತೆಗೆದುಕೊಳ್ಳುತ್ತಿರುವುದು ಸಮಂಜಸವೇ ಎಂದಾಗ “ಮಾತನಾಡಲು ಬಿಜೆಪಿಯವರ ಬಳಿ ಬೇರೆ ಸಂಗತಿಗಳಿಲ್ಲ. ಗ್ಯಾರಂಟಿ ಬಗ್ಗೆಯೂ ಮಾತನಾಡುತ್ತಿಲ್ಲ. ನಮ್ಮ ಗ್ಯಾರಂಟಿಗಳನ್ನು ನೋಡಿ ಮೋದಿ ಗ್ಯಾರಂಟಿ ಎಂದು ಮಾಡಿಕೊಂಡಿದ್ದಾರೆ. ನಮ್ಮ ಸಮೀಕ್ಷೆ ಪ್ರಕಾರ ಸುಮಾರು ಶೇ 86 ರಷ್ಟು ಜನರಿಗೆ ಗ್ಯಾರಂಟಿ ಯೋಜನೆಗಳ ಪ್ರಯೋಜನ ದೊರೆತಿದೆ” ಎಂದರು.

ಕೇಂದ್ರ ಸರ್ಕಾರ ಒಂದೂ ರೂಪಾಯಿಯನ್ನು ಬಾಕಿ ಉಳಿಸಿಕೊಂಡಿಲ್ಲ ಎಂದು ಬಿಜೆಪಿ ಹೇಳುತ್ತಿದೆ ಎಂದಾಗ “ನನ್ನ ಬಳಿ ದಾಖಲೆ ಇದೆ. ಒಂದಷ್ಟು ಕೆಲಸಗಳು ಮುಗಿಯಲಿ ಮಾಧ್ಯಮಗಳಿಗೆ ತಿಳಿಸುತ್ತೇನೆ” ಎಂದರು.