ಮಂಗಳೂರು : ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಸೋಮವಾರ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ
ಕೋಟ ಶ್ರೀನಿವಾಸ ಪೂಜಾರಿ ಅವರು ಲೋಕಸಭೆಗೆ ಸ್ಪರ್ಧಿಸಿ ಆಯ್ಕೆಯಾದ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಇದೀಗ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅವರು 1,697 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಿಶೋರ್ ಕುಮಾರ್ ಅವರು ವಿದ್ಯಾರ್ಥಿ ದೆಸೆಯಿಂದಲೇ ಸಂಘ ಪರಿವಾರದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಬಿಜೆಪಿ ಈ ಬಾರಿ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಈ ಉಪಚುನಾವಣೆಯಲ್ಲಿ ಸವಿತಾ ಸಮಾಜಕ್ಕೆ ಸೇರಿರುವ ಕಿಶೋರ್ ಕುಮಾರ್ ಅವರಿಗೆ ಟಿಕೆಟ್ ನೀಡುವ ಮೂಲಕ ಅಚ್ಚರಿ ಮೂಡಿಸಿತ್ತು. ಇದೀಗ ಹಿಂದುಳಿದ ವರ್ಗಕ್ಕೆ ಸೇರಿರುವ ಕಿಶೋರ್ ಕುಮಾರ್ ಆಯ್ಕೆಯಿಂದ ಬಿಜೆಪಿ ಆ ವರ್ಗದ ಬೆಂಬಲ ಗಳಿಸುವಲ್ಲಿ ಯಶಸ್ವಿಯಾಗಿದೆ.
ಕಿಶೋರ್ ಕುಮಾರ್ ಅವರು 3654 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿದ್ದ ರಾಜು ಪೂಜಾರಿ ಅವರು 1957 ಮತ ಪಡೆದಿದ್ದಾರೆ. ಎಸ್ಡಿಪಿಐ ಅಭ್ಯರ್ಥಿ ಅನ್ವರ್ ಸಾದತ್ 195 ಮತ ಪಡೆದರು. ಪಕ್ಷೇತರ ಅಭ್ಯರ್ಥಿ ದಿನಕರ ಉಳ್ಳಾಲ್ 9 ಮತ ಪಡೆದುಕೊಂಡರು. ಒಟ್ಟು 87 ಮತ ತಿರಸ್ಕೃತಗೊಂಡಿತು. ಇಲ್ಲಿ 5906 ಮತಗಳು ಚಲಾವಣೆಗೊಂಡಿದ್ದವು. 5819 ಮತ ಸಿಂಧು ಮತಗಳಿದ್ದವು. ಮತ ಎಣಿಕೆ ಮಂಗಳೂರು ಕೋಡಿಯಾಲ್ ಬೈಲಿನ ಸೆಂಟ್ ಅಲೋಸಿಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.