ದೆಹಲಿ :
ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಮಾತ್ರ ಬಾಕಿ. ಸೀಟು ಹಂಚಿಕೆ ಸೇರಿದಂತೆ ಕೆಲ ವಿಚಾರಗಳಲ್ಲಿ ಇಂಡಿಯಾ ಮೈತ್ರಿ ಒಕ್ಕೂಟದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಪರಿಣಾಮ ಒಂದೊಂದೇ ಪಕ್ಷಗಳು ಇಂಡಿಯಾ ಮೈತ್ರಿಯಿಂದ ಹೊರಗುಳಿಯುತ್ತಿದೆ. ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಈಗಾಗಲೇ ಮೈತ್ರಿಯಿಂದ ಹಿಂದೆ ಸರಿದು ಏಕಾಂಗಿ ಹೋರಾಟ ಘೋಷಿಸಿದೆ.

ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಿಜೆಪಿ ಜೊತೆ ಮೈತ್ರಿ ಮಾಡಿದೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಲೋಕ ದಳ(RLD) ಆರ್‌ಎಲ್‌ಡಿ, ಇದೀಗ ಎನ್‌ಡಿಎ ಒಕ್ಕೂಟ ಸೇರಿಕೊಳ್ಳುವ ಮಾತುಗಳು ನಡೆಯುತ್ತಿದೆ.

ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಈಗಾಗಲೇ ಬಿಜೆಪಿ ಜೊತೆ ಆರಂಭಿಕ ಸುತ್ತಿನ ಮಾತುಕತೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಲೋಕಸಭಾ ಚುನಾವಣೆಯಲ್ಲಿ ಆರ್‌ಎಲ್‌ಡಿ ಪಕ್ಷಕ್ಕೆ ನಾಲ್ಕು ಸ್ಥಾನ ನೀಡುವುದಾಗಿ ಬಿಜೆಪಿ ಆಫರ್ ನೀಡಿದೆ. ಕೈರಾನಾ, ಭಾಗ್‌ಪೇಟ್, ಮಥುರಾ ಹಾಹೂ ಅಮೋರಾ ಕ್ಷೇತ್ರಗಳನ್ನು RLDಗೆ ಕೊಡುವುದಾಗಿ ಬಿಜೆಪಿ ಆಫರ್ ಮಾಡಿದೆ ಎಂದು ವರದಿಗಳು ಹೇಳುತ್ತಿದೆ.

ಇಂಡಿಯಾ ಮೈತ್ರಿ ಒಕ್ಕೂಟದಲ್ಲಿ ಸೀಟು ಹಂಚಿಕೆಯಲ್ಲಿ ತಾರತಮ್ಯ ನಡೆಯುತ್ತಿದೆ ಅನ್ನೋ ಆರೋಪ ಗಂಭೀರವಾಗುತ್ತಿದೆ. ಇದೀಗ ರಾಷ್ಟ್ರೀಯ ಲೋಕ ದಳ ಪಕ್ಷಕ್ಕೂ ಇದೇ ಸಮಸ್ಯೆ ಎದುರಾಗಿದೆ.ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ ಪ್ರಮುಖ ಮಿತ್ರಪಕ್ಷವಾಗಿರುವ ರಾಷ್ಟ್ರೀಯ ಲೋಕ ದಳ ಇದೀಗ ಎನ್‌ಡಿಎ ಕೂಟ ಸೇರಿಕೊಳ್ಳಲು ಮನಸ್ಸು ಮಾಡಿದೆ.

ಜಯಂತ್ ಚೌಧರಿ ಹಾಗೂ ಅಖಿಲೇಶ್ ಯಾದವ್ ನಡುವೆ ಸೀಟು ಹಂಚಿಕೆ ಮಾತುಕತೆಯಲ್ಲಿ ಅಸಮಾಧಾನ ತೀವ್ರಗೊಂಡಿದೆ. ಇಂಡಿಯಾ ಮೈತ್ರಿ ಒಕ್ಕೂಟದಲ್ಲಿ ಸಮಾಜವಾದಿ ಪಾರ್ಟಿಗೂ ನಿರೀಕ್ಷಿತ ಸೀಟು ಸಿಕ್ಕಿಲ್ಲ. ಇತ್ತ ಸಮಾಜವಾದಿ ಪಾರ್ಟಿಯ ಮೈತ್ರಿ ಪಕ್ಷ ಆರ್‌ಎಲ್‌ಡಿಗೆ ಒಂದೇ ಒಂದು ಸ್ಥಾನ ಇನ್ನೂ ಖಚಿತವಾಗಿಲ್ಲ. ಇದೇ ವೇಳೆ ಎನ್‌ಡಿಎ ಒಕ್ಕೂಟ ನಾಲ್ಕು ಸ್ಥಾನದ ಆಫರ್ ನೀಡಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಜೊತೆ ಸೇರಿ ಅಖಾಡಕ್ಕಿಳಿಯಲು ಆರ್ ಎಲ್‌ಡಿ ಮುಂದಾಗಿದೆ.

ಬಿಜೆಪಿ ಪ್ರಮುಖ ನಾಯಕರನ್ನು ಭೇಟಿಯಾಗಿರುವ ಜಯಂತ್ ಚೌಧರಿ ಶೀಘ್ರದಲ್ಲೇ ಎನ್‌ಡಿಎ ಒಕ್ಕೂಟ ಸೇರಿಕೊಳ್ಳುವ ಸಾಧ್ಯತೆ ಇದೆ. ಒಂದೆಡೆ ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆ ಮೂಲಕ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಆದರೆ ಈ ಜೋಡೋ ಯಾತ್ರೆ ಒಂದೊಂದು ರಾಜ್ಯ ತಲುಪುತ್ತಿದ್ದಂತೆ ಕೋಲಾಹಲ ಸೃಷ್ಟಿಯಾಗುತ್ತಿದೆ.