ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿಯು 5ನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಬಾಲಿವುಡ್ ನಟಿ ಕಂಗನಾ ರಣಾವತ್ ಸೇರಿ 111 ಜನರಿಗೆ ಟಿಕೆಟ್ ಘೋಷಣೆ ಮಾಡಿದೆ. ಉದ್ಯಮಿ ನವೀನ್ ಜಿಂದಾಲ್, ರಾಮಾಯಣ ಟಿವಿ ಸೀರಿಯಲ್ನಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ಅರುಣ್ ಗೋವಿಲ್ ಸೇರಿ ಹಲವರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಕಂಗನಾ ರಣಾವತ್ ಅವರು ಅರುಣಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ರಾಮಾಯಣ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರದ ಮೂಲಕವೇ ದೇಶಾದ್ಯಂತ ಗಮನ ಸೆಳೆದಿದ್ದ ಅರುಣ್ ಗೋವಿಲ್ ಅವರು ಉತ್ತರ ಪ್ರದೇಶದ ಮೀರತ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇನ್ನು ಭಾನುವಾರವಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದ ನವೀನ್ ಜಿಂದಾಲ್ ಅವರು ಹರಿಯಾಣದ ಕುರುಕ್ಷೇತ್ರದಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಬಿಜೆಪಿಯು ಐದನೇ ಪಟ್ಟಿಯಲ್ಲಿ ಕರ್ನಾಟಕ, ಹರಿಯಾಣ, ಗುಜರಾತ್, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಅಭ್ಯರ್ಥಿಗಳನ್ನು ಹೆಸರಿಸಿದೆ. ಬಿಜೆಪಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೂಡ ನಟರು, ಸೆಲೆಬ್ರಿಟಿಗಳಿಗೆ ಆದ್ಯತೆ ನೀಡಿದೆ.
ಬಿಜೆಪಿಯು ನಾಲ್ಕನೇ ಪಟ್ಟಿಯಲ್ಲಿ ನಟಿ ರಾಧಿಕಾ ಶರತ್ ಕುಮಾರ್ ಅವರಿಗೆ ಟಿಕೆಟ್ ನೀಡಿತ್ತು. ಪುದುಚೇರಿಯ ಹಾಗೂ ತಮಿಳುನಾಡಿನ 14 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿಯು ಬಿಡುಗಡೆ ಮಾಡಿತ್ತು. ತಮಿಳುನಾಡಿನಲ್ಲಿ ಬಿಜೆಪಿ ಬಿಡುಗಡೆ ಮಾಡುತ್ತಿರುವ ಎರಡನೇ ಪಟ್ಟಿ ಇದಾಗಿದೆ. ಪುದುಚೇರಿಯಿಂದ ಎ. ನಮಶ್ಶಿವಾಯಂ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ತಮಿಳುನಾಡಿನಲ್ಲಿ ಬಿಜೆಪಿ ಘೋಷಿಸಿದ ಮೊದಲ ಪಟ್ಟಿಯಲ್ಲಿ ಕೊಯಮತ್ತೂರಿನಿಂದ ಕೆ.ಅಣ್ಣಾಮಲೈ, ಚೆನ್ನೈ ದಕ್ಷಿಣದಿಂದ ತಮಿಳಿಸೈ ಸೌಂದರರಾಜನ್ ಮತ್ತು ನೀಲಗಿರಿಯಿಂದ ಎಲ್.ಮುರುಗನ್ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ತಿಳಿಸಿತ್ತು.