
ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳಲು ಉಭಯ ಪಕ್ಷಗಳೊಂದಿಗೆ (ಬಿಜೆಪಿ-ಎಐಎಡಿಎಂಕೆ) ಮಾತುಕತೆ ಆರಂಭವಾಗಿದೆ ಎಂಬ ವಿಚಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಪ್ಪಿಕೊಂಡಿದ್ದಾರೆ.
2026ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದೆ. ಇತ್ತೀಚೆಗೆ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾಗ ರಾಜಕೀಯದ ಬಗ್ಗೆ ಚರ್ಚಿಸಿಲ್ಲ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಹೇಳಿದ್ದರು. ಅದರ ಬೆನ್ನಲ್ಲೇ ಹೊರಬಿದ್ದಿರುವ ಅಮಿತ್ ಶಾ ಅವರ ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಮಹತ್ವ ಪಡೆದಿದೆ.
ವಾಹಿನಿಯೊಂದು ಏರ್ಪಡಿಸಿದ ಶೃಂಗದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಶಾ, ‘ತಮಿಳುನಾಡು ರಾಜಕೀಯ ವಿಚಾರವಾಗಿ ನಮ್ಮ ಸ್ನೇಹಿತ ಎಐಎಡಿಎಂಕೆ ನಾಯಕರೊಂದಿಗೆ ರಾಜ್ಯ ಬಿಜೆಪಿ ನಾಯಕರು ಮಾತುಕತೆ ನಡೆಸುತ್ತಿದ್ದಾರೆ. ಈ ಕುರಿತು ಅಂತಿಮ ನಿರ್ಧಾರಕ್ಕೆ ಬಂದಮೇಲೆ ಬಹಿರಂಗಗೊಳಿಸಲಾಗುವುದು’ ಎಂದರು.
2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಆಡಳಿತವು ಕೊನೆಗಾಣಲಿದ್ದು, ಹೊಸ ಎನ್‌ಡಿಎ ನೇತೃತ್ವದ ಹೊಸ ಸರ್ಕಾರ ರಚನೆಯಾಗಲಿದೆ ಎಂದಿದ್ದಾರೆ.