ದೆಹಲಿ:

ಚಿತ್ರದುರ್ಗ (ಮೀಸಲು) ಹಾಗೂ ಮಹಾರಾಷ್ಟ್ರದ ಅಮರಾವತಿ (ಮೀಸಲು) ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಇಂದು ಸಂಜೆ ಘೋಷಿಸಿದೆ. ಎರಡು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಚಿತ್ರದುರ್ಗದಿಂದ ಬಿಜೆಪಿ ಹಿರಿಯ ನಾಯಕ, ಮುಧೋಳ ಶಾಸಕರಾಗಿದ್ದ ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಲಾಗಿದೆ. ಗೋವಿಂದ ಕಾರಜೋಳ ಅವರು ಬಾಗಲಕೋಟೆಯ ಮುಧೋಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಆರ್‌ಬಿ ತಿಮ್ಮಾಪುರ ಅವರ ವಿರುದ್ಧ ಸೋಲು ಕಂಡಿದ್ದರು. ಹೀಗಾಗಿ ಅವರು ಈ ಬಾರಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಇಂಗಿತ ವ್ಯಕ್ತಪಡಿಸಿದ್ದರು. ಎಸ್‌ಸಿ ಮೀಸಲು ಕ್ಷೇತ್ರವಾಗಿರುವ ವಿಜಯಪುರದ ಟಕೆಟ್ ಈ ಬಾರಿ ಹಾಲಿ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಸಿಗುವುದು ಅನುಮಾನವಾಗಿತ್ತು. ಈ ಹಿನ್ನೆಲೆಯಲ್ಲಿ ಗೋವಿಂದ ಕಾರಜೋಳ ಅವರು ವಿಜಯಪುರ ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದರು. ಆದರೆ, ಹೈಕಮಾಂಡ್ ಮತ್ತೊಮ್ಮೆ ವಿಜಯಪುರ ಟಿಕೆಟ್ ರಮೇಶ್ ಜಿಗಜಿಣಗಿ ಅವರಗೆ ನೀಡಿದ್ದು, ಇದೀಗ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಗೋವಿಂದ ಕಾರಜೋಳ ಅವರಿಗೆ ನೀಡಲಾಗಿದೆ.

ಹಾಲಿ ಸಂಸದ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ತಪ್ಪಿದೆ. 2019ರಲ್ಲಿ ಕಾಂಗ್ರೆಸ್ ಬೆಂಬಲದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಮರಾವತಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಕಂಡಿದ್ದ ನವನೀತ್ ರಾಣಾ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ನವನೀತ್ ಅವರು ಇತ್ತೀಚೆಗೆ ಬಿಜೆಪಿ ಸೇರಿದ್ದರು. ಅವರು ನಟಿಯೂ ಹೌದು.

ತೀವ್ರ ಪೈಪೋಟಿಯಿಂದ ಕೂಡಿದ್ದ ಚಿತ್ರದುರ್ಗ ಲೋಕಸಭಾ ಮತಕ್ಷೇತ್ರಕ್ಕೆ ಕೊನೆಗೂ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಮಾಜಿ ಉಪ ಮುಖ್ಯಮಂತ್ರಿಯನ್ನು ಕಣಕ್ಕಿಳಿಸುವ ಅಚ್ಚರಿಯ ನಿರ್ಧಾರವನ್ನು ಬಿಜೆಪಿ ತೆಗೆದುಕೊಂಡಿದೆ.

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಟಿಕೆಟ್‌ ನೀಡಲಾಗಿದೆ. ಬಿಜೆಪಿ ಈ ನಿರ್ಧಾರ ಅಚ್ಚರಿ ಮೂಡಿಸಿದೆ. ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರಿಗೆ ಟಿಕೆಟ್‌ ಮಿಸ್‌ ಆಗಿದೆ.

ಮಾರ್ಚ್‌ 4 ರಂದು ಬಿಡುಗಡೆ ಮಾಡಲಾಗಿದ್ದ ಪಟ್ಟಿಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರವೊಂದನ್ನು ಬಿಟ್ಟು ಉಳಿದ ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ರಾಯಚೂರು ಹಾಗೂ ಬೆಳಗಾವಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಚಿತ್ರದುರ್ಗದಲ್ಲಿ ಮಾಜಿ ಸಚಿವ ಜನಾರ್ದನ ಸ್ವಾಮಿ ಹಾಗೂ ಎಂ.ಸಿ. ರಘು ಚಂದನ್‌ ನಡುವೆ ತೀವ್ರ ಪೈಪೋಟಿ ಇತ್ತು. ಈ ನಡುವೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರ ಹೆಸರು ಕೇಳಿಬಂದಿತ್ತು. ಮಾದಾರ ಚನ್ನಯ ಶ್ರೀಗಳು ಸಹ ಇಲ್ಲಿ ಬಿಜೆಪಿಯ ಟಿಕೆಟ್‌ ರೇಸ್‌ನಲ್ಲಿದ್ದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರ ಎಸ್‌ಸಿ ಮೀಸಲು ಆಗಿದ್ದರಿಂದ ಗೋವಿಂದ ಕಾರಜೋಳ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಕಾರಜೋಳ ಎಡಗೈ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಭಾಗದಲ್ಲಿ ಉತ್ತಮ ಜನಪ್ರಿಯತೆಯನ್ನು ಹೊಂದಿದ್ದಾರೆ. ಇವರು ಬಾಗಲಕೋಟೆಯವರಾದರೂ ಕೆಲವು ರಾಜಕೀಯ ಸಮೀಕರಣ ಹಾಗೂ ಲೆಕ್ಕಾಚಾರಗಳನ್ನು ಹಾಕಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಬಿಜೆಪಿಯ ಎಲ್ಲ ಪಟ್ಟಿ ಫೈನಲ್‌; ಜೆಡಿಎಸ್‌ ಮಾತ್ರವೇ ಬಾಕಿ!
ಈ ಮೂಲಕ ಬಿಜೆಪಿ ಪಾಲಿನ 25 ಲೋಕಸಭಾ ಕ್ಷೇತ್ರಗಳಿಗೂ ಟಿಕೆಟ್‌ ಘೋಷಣೆ ಮಾಡಿದಂತೆ ಆಗಿದೆ. ಮೈತ್ರಿ ಒಪ್ಪಂದದಂತೆ ಹಾಸನ, ಮಂಡ್ಯ, ಕೋಲಾರ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಜೆಪಿ ಬಿಟ್ಟುಕೊಡಲಾಗಿದೆ. ಇಲ್ಲಿ ಹಾಸನಕ್ಕೆ ಪ್ರಜ್ವಲ್‌ ರೇವಣ್ಣ ಅಭ್ಯರ್ಥಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಬುಧವಾರ (ಮಾ. 13) ಘೋಷಣೆ ಮಾಡಿದ್ದರು. ಮಂಡ್ಯದಿಂದ ಸ್ವತಃ ಕುಮಾರಸ್ವಾಮಿ ಅವರೇ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಇನ್ನು ಕೋಲಾರದಲ್ಲಿ ಮಲ್ಲೇಶ್‌ ಬಾಬು ಹೆಸರು ಕೇಳಿಬರುತ್ತಿದೆ. ಆದರೆ, ಅಲ್ಲಿನ ಕಾಂಗ್ರೆಸ್‌ ಬೆಳವಣಿಗೆಯನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡುವುದಾಗಿ ಎಚ್‌ಡಿಕೆ ಹೇಳಿದ್ದಾರೆ.