ಬೆಂಗಳೂರು : ಮಾದಿಗರ ಚನ್ನಯ್ಯ ಗುರು ಪೀಠದ ಶ್ರೀ ಬಸವ ಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಅವರನ್ನು ಈ ಬಾರಿ ಲೋಕಸಭೆ ಚುನಾವಣೆಗೆ ಕಣಕ್ಕೆ ಇಳಿಸಲು ಬಿಜೆಪಿ ಸಿದ್ದತೆ ನಡೆಸಿದೆ. ಸ್ವಾಮೀಜಿಯವರು ತಮ್ಮ ಒಪ್ಪಿಗೆಯನ್ನು ಸೂಚಿಸಿದರೆ ಪ್ರತಿಷ್ಠಿತ ಚಿತ್ರದುರ್ಗ ಲೋಕಸಭಾ ಮತಕ್ಷೇತ್ರದಲ್ಲಿ ಸ್ವಾಮೀಜಿ ಸ್ಪರ್ಧೆ ನಡೆಸುವುದು ಬಹುತೇಕ ಖಚಿತ.

ಈ ಹಿಂದೆ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಈ ಸ್ವಾಮೀಜಿಯವರನ್ನು ಲೋಕಸಭೆಗೆ ಕಳಿಸಲು ಪ್ರಯತ್ನಿಸಿತ್ತು. ಆದರೆ, ಸ್ವಾಮೀಜಿ ಒಪಿಗೆ ಸೂಚಿಸಿರಲಿಲ್ಲ. ಈ ಬಾರಿ ಮುಂಚಿತವಾಗಿ ಪ್ರಯತ್ನ ಮುಂದುವರಿಸಿರುವ ಪಕ್ಷ ಎಡಗೈ ಸಮುದಾಯದ ಮತ ಸೆಳೆಯುವ ತಂತ್ರವಾಗಿ ಈ ಪ್ರಭಾವಿ ಸ್ವಾಮೀಜಿಗೆ ಲೋಕಸಭೆಗೆ ಕಳಿಸಲು ಪ್ರಯತ್ನಿಸಿದೆ.

ಸಂಘ ಪರಿವಾರದೊಂದಿಗೆ ನಿಕಟನಂಟು ಹೊಂದಿರುವ ಸ್ವಾಮೀಜಿ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಕಳೆದ ಸಲ ಸಂಘ ಆಸಕ್ತಿ ವಹಿಸಿ ಸ್ವಾಮೀಜಿಯವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದರೂ ಒಪ್ಪದೇ ಇದ್ದರಿಂದ ಕೊನೆ ಕ್ಷಣದಲ್ಲಿ ಈಗ ಕೇಂದ್ರ ಸಚಿವರಾಗಿರುವ ನಾರಾಯಣ ಸ್ವಾಮಿಯವರನ್ನು ಸ್ಪರ್ಧೆಗೆ ಇಳಿಸಿತ್ತು. ಆದರೆ, ಈ ಬಾರಿ ಅವರ ಸ್ಪರ್ಧೆಗೆ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲೂ ಸ್ವಾಮೀಜಿಯವರನ್ನು ಬಿಜೆಪಿ ಚುನಾವಣೆಗೆ ನಿಲ್ಲಿಸುವ ಚಿಂತನೆ ನಡೆಸಿದೆ.

ಒಟ್ಟಾರೆಯಾಗಿ ಗಮನಿಸಿದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎಡಗೈ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ತಂತ್ರವಾಗಿ ಈ ಸ್ವಾಮೀಜಿಗೆ ಗಾಳ ಹಾಕಿ ಹಾಕಲು ಬಿಜೆಪಿ ಮುಂದಾಗಿರುವುದು ಈಗ ಗುಟ್ಟಾಗಿ ಉಳಿದಿಲ್ಲ.