ಹಿರೇ ಬಾಗೇವಾಡಿ :
ಭಾರತಿಯ ಜನತಾ ಪಕ್ಷದ ಹಿರಿಯ ನಾಯಕ
ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ನೂತನ ರಾಜ್ಯಾಧ್ಯಕ್ಷ
ವಿಜಯೇಂದ್ರ ಅವರ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತೀರಾ ಹಗುರವಾಗಿ ಮಾತನಾಡುತ್ತಿರುವುದು ಪಕ್ಷದ
ಅಸಂಖ್ಯಾತ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗುತ್ತಿದ್ದು,
ಪಕ್ಷದ ಹಿರಿಯ ನಾಯಕರು ಈ ಬಗ್ಗೆ ಅಗತ್ಯ ಗಮನಹರಿಸುವಂತೆ ಬಿಜೆಪಿ ನಾಯಕಿ ಮಂಜುಳಾ ಶ್ರೀಕಾಂತ
ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ
ಹಿರಿಯ ಹಾಗೂ ಅನುಭವಿ ನಾಯಕ ಬಸನಗೌಡ ಪಾಟೀಲ ಯತ್ನಾಳ ಅವರ
ಹಿಂದೂಪರವಾದ ಕಠಿಣ ಹಾಗೂ ಅಭಿವೃದ್ಧಿ ಪರವಾದ ಗಟ್ಟಿ ನಿಲುವಿನ ಬಗ್ಗೆ
ಎಲ್ಲರಲ್ಲೂ ಗೌರವ ಭಾವನೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಯತ್ನಾಳ ಅವರು ಭಾರತೀಯ ಜನತಾ ಪಕ್ಷದ
ಭೀಷ್ಮ ಪಿತಾಮಹರೆಂದೆ ಕರೆಯುವ ಮಾಜಿ ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬಗ್ಗೆ ತೀರಾ ಹಗುರವಾಗಿ ಮಾತನಾಡುತ್ತ
ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುತ್ತಿದ್ದಾರೆ. ಇವರ ಲೇವಡಿತನದ
ಮಾತುಗಳು ಹಾಗೂ ಹಾದಿ -ಬೀದಿಗಳಲ್ಲಿ ನಿಂತು ತಮ್ಮದೆ ಪಕ್ಷದ ನಾಯಕರ ನಿಂದನೆಯು, ಪ್ರತಿನಿತ್ಯ ಮಾಧ್ಯಮ ಹಾಗೂ ಕಾಂಗ್ರೆಸ್ ಪಕ್ಷದವರಿಗೆ ಆಹಾರವಾಗುತ್ತಿರುವುದು ತುಂಬಾ ಕಳವಳ, ವಿಷಾದದ
ಸಂಗತಿಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬಿಜೆಪಿಯಲ್ಲಿ ಹಿರಿಯ ಅಣ್ಣನ ಸ್ಥಾನದಲ್ಲಿರುವ ಯತ್ನಾಳರು ತಾನು ಆಡಿದ್ದೆ ಮಾತು-ನಡೆದಿದೆ ದಾರಿ ಎಂಬ ಹುಂಬತನವನ್ನು ಬಿಟ್ಟು ಪಕ್ಷದ ಒಳಿತಿಗಾಗಿ ಏನಾದರೂ ಒಳ್ಳೆಯದನ್ನು ಮಾಡಿದರೆ ಅವರಿಗೆ ಬಿಜೆಪಿಯ
ಲಕ್ಷಾಂತರ ಕಾರ್ಯಕರ್ತರು ಋಣಿಯಾಗಿರುತ್ತಾರೆ. ಉತ್ತರ
ಕರ್ನಾಟಕದ ಅಭಿವೃದ್ಧಿ ಎಂದರೆ ಅದು ಯತ್ನಾಳ ಅವರ ರಾಜಕೀಯ ಸ್ಥಾನಮಾನ, ತೀರಾ ವೈಯಕ್ತಿಕವಾದ ಹಿತಾಸಕ್ತಿ ಅಲ್ಲ.
ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಲಗಾಲದ ಈ ಅಧಿವೇಶನದಲ್ಲಿ ರೈತರ ಸಮಸ್ಯೆ, ಬರ ಪರಿಹಾರ ನೀಡುವಿಕೆಯಲ್ಲಿನ
ವಿಳಂಬತೆ, ಸಕ್ಕರೆ ಕಾರ್ಖಾನೆ ಗಳಿಂದ ರೈತರಿಗೆ ಬರಬೇಕಾದ ಕಬ್ಬಿನ ಬಾಕಿ ಹಣ,ಹಾಗೂ ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳ ಸ್ಥಳಾಂತರ, ಶಿಕ್ಷಣ ,ಆರೋಗ್ಯ, ನೀರಾವರಿ ಯೋಜನೆಗಳು,ಕೈಗಾರಿಕೆ,
ಯುವಕರಿಗೆ, ಉದ್ಯೋಗ ಒದಗಿಸಬಹುದಾದ ಅವಕಾಶ ಹಾಗೂ ಯೋಜನೆ, ಆರ್ಥಿಕ ಸ್ವಾವಲಂಬನೆ, ಮತ್ತು ಪುರಷ ಪ್ರಾಮಾಣಿಕರಿಗೆ
ಆಗುತ್ತಿರುವ ತೊಂದರೆ, ರಾಜ್ಯದ ಜನತೆಯ ಮೇಲೆ ತೆರಿಗೆ ಹೇರಿಕೆ
ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಗಂಭೀರ ಚರ್ಚೆ ಮಾಡುವ
ಮೂಲಕ ತಾವೊಬ್ಬ ಪ್ರಗತಿ ಪರ ಚಿಂತನೆಯ ಉತ್ತರ ಕರ್ನಾಟಕದ
ನಾಯಕ ಎಂಬ ಅಭಿಮಾನಕ್ಕೆ ಯತ್ನಾಳರು ಭಾಜನರಾಗ ಬಹುದಿತ್ತು.
ಆದರೆ ಹೋದಲ್ಲಿ-ಬಂದಲ್ಲಿ ಬಿಎಸ್‌ವೈ ಅವರ ಕುಟುಂಬವನ್ನೇ ನಿಂದಿಸುತ್ತಾ
ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.