ದೆಹಲಿ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದೆ ಹೇಳಿಕೆ ನೀಡುತ್ತಿರುವ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಹಲವರಿಗೆ ಈ ಸಲ ಟಿಕೆಟ್ ಸಿಗುವುದು ಬಹುತೇಕ ಕಠಿಣವಾಗಿದೆ.

ತೀವ್ರ ಕುತೂಹಲ ಮೂಡಿಸಿರುವ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಒಳಗೊಂಡಂತೆ ಬಿಜೆಪಿಯ ಎರಡನೇ ಪಟ್ಟಿ ಅಂತಿಮಗೊಳಿಸುವ ಸಂಬಂಧ ಸೋಮವಾರ ರಾತ್ರಿ ದೆಹಲಿಯಲ್ಲಿ ತೀವ್ರ ಕಸರತ್ತು ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಒಳಗೊಂಡ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿ ಗಳ ಆಯ್ಕೆ ಕುರಿತು ಬಿರುಸಿನ ಚರ್ಚೆ ನಡೆದಿದ್ದು, ಮಂಗಳವಾರ ಅಥವಾ ಬುಧವಾರ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆಯಿದೆ.

ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಎರಡು ಹಂತಗಳಲ್ಲಿ ಪ್ರಕಟಗೊಳ್ಳಲಿದ್ದು, ಹೆಚ್ಚು ಗೊಂದಲಗಳಿಲ್ಲದ ಸುಮಾರು 15ರಿಂದ 20 ಕ್ಷೇತ್ರಗಳನ್ನು ಮೊದಲ ಪಟ್ಟಿಯಲ್ಲಿ ಘೋಷಿಸುವ ಸಂಭವವಿದೆ. ಚುನಾವಣಾ ಸಮಿತಿ ಸಭೆಯಲ್ಲಿ ರಾಜ್ಯದ ಹಲವು ಕ್ಷೇತ್ರಗಳ ಬಗ್ಗೆ ಒಮ್ಮತಾಭಿಪ್ರಾಯಕ್ಕೆ ಬರಲು ಸಾಧ್ಯವಾಗಿಲ್ಲ. ಈ ಬಗ್ಗೆ ಮಂಗಳವಾರ ಅಥವಾ ಬುಧವಾರ ಸರಣಿ ಸಭೆಗಳು ನಡೆಯಲಿದ್ದು, ಬಳಿಕ ಅಂತಿಮ ನಿರ್ಧಾರಕ್ಕೆ ಬರಬಹುದು ಎನ್ನಲಾಗುತ್ತಿದೆ.
ಹಲವು ಕ್ಷೇತ್ರಗಳಲ್ಲಿ ಪಕ್ಷದ ವರಿಷ್ಠರು ಪ್ರಯೋಗ ನಡೆಸುವ ಮೂಲಕ ಹೊಸಬರಿಗೆ ಅವಕಾಶ ನೀಡುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆದರೆ, ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸಹಮತ ವ್ಯಕ್ತಪಡಿಸದೆ ಹೊಸ ಪ್ರಯೋಗ ಮಾಡುವುದು ಬೇಡ. ಗೆಲ್ಲುವ ಮಾನದಂಡದ ಆಧಾರದ ಮೇಲೆ ಟಿಕೆಟ್ ನೀಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆಗೆ ರಾಜ್ಯದ 22 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಹೆಸರುಗಳು ಸೋಮವಾರ ಅಂತಿಮಗೊಂಡಿದೆ ಎನ್ನಲಾಗಿದೆ.
ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸೋಮವಾರ ಅಭ್ಯರ್ಥಿಗಳನ್ನು ನಿರ್ಧರಿಸಲು ತನ್ನ ಎರಡನೇ ಸಭೆ ನಡೆಸಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಚುನಾವಣಾ ಸಮಿತಿಯು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.

ಕರ್ನಾಟಕದ ಬಿಜೆಪಿ ನಾಯಕರ ಜೊತೆ ಸಭೆ ನಡೆಸಿರುವ ಬಿಜೆಪಿ ವರಿಷ್ಠರು 22 ಅಭ್ಯರ್ಥಿಗಳ ಆಯ್ಕೆಗೆ ಹಸಿರು ನಿಶಾನೆ ತೋರಿದೆ. ಆದರೆ, ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಸೂಚನೆ ಸಿಕ್ಕಿದೆ ಎನ್ನಲಾಗಿದೆ. ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಈ ಕುರಿತು ಮಾಹಿತಿ ನೀಡಿದ್ದಾರೆ. 28 ಕ್ಷೇತ್ರದ ಬಗ್ಗೆ ಚರ್ಚೆ ಮಾಡಲಾಗಿದೆ. ಮಂಗಳವಾರ ಅಥವಾ ಬುಧವಾರ ಟಿಕೆಟ್​ ಘೋಷಣೆಯಾಗಬಹುದು. ಎರಡು ಹಂತದಲ್ಲಿ ಟಿಕೆಟ್​ ಘೋಷಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಹಾಲಿ ಸಂಸದರಿಗೆ ಟಿಕೆಟ್​ ತಪ್ಪುವ ವಿಚಾರದ ಬಗ್ಗೆ ಮಾತನಾಡಿದ ವಿಜಯೇಂದ್ರ ಅವರು, ಈ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಅನುಮಾನ ಎನ್ನಲಾಗಿದೆ. ಅವರ ಬದಲಿಗೆ ಯದುವೀರ್ ಒಡೆಯರ್​ ಟಿಕೆಟ್ ಪಡೆಯಲಿದ್ದಾರೆ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ನಳಿನ್ ಕುಮಾರ್​ ಕಟೀಲು ಅವರಿಗೂ ಟಿಕೆಟ್​ ಕೈ ತಪ್ಪಲಿದೆ. ಅವರ ಬದಲಿಗೆ ಕಿಶೋರ್​ ಬೆಟ್ಯಾಡಿ, ಬ್ರಿಜೇಶ್​​ ಚೌಟ ಅವರಿಗೆ ಟಿಕೆಟ್ ಸಿಗಬಹುದು. ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಭಗವಂತ ಖೂಬಾಗೆ ಟಿಕೆಟ್​ ಸಿಗುವುದು ಅನುಮಾನ. ಉತ್ತರ ಕನ್ನಡದ ಹಾಲಿ ಸಂಸದರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ಗ್ರಾಮಾಂತರಕ್ಕೆ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಮಂಜುನಾಥ ಬಿಜೆಪಿ ಟಿಕೆಟ್ ಪಡೆಯಲಿದ್ದಾರೆ ಎಂಬುದು ಬಹುತೇಕ ನಿಚ್ಚಳವಾಗಿದೆ.
ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಟಿಕೆಟ್ ಬಹುತೇಕ ಖಚಿತ ಆಗಿದೆ. ವಿಜಯಪುರಕ್ಕೆ ಗೋವಿಂದ ಕಾರಜೋಳ ಟಿಕೆಟ್ ಪಡೆಯಲಿದ್ದಾರೆ. ಸ್ಥಳೀಯ ಬಿಜೆಪಿ ನಾಯಕರ ವಿರೋಧದ ನಡುವೆಯೂ ತುಮಕೂರಿನಲ್ಲಿ ವಿ. ಸೋಮಣ್ಣ ಟಿಕೆಟ್ ಪಡೆಯಲಿದ್ದಾರೆ.

ಚಿತ್ರದುರ್ಗದಲ್ಲಿ ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್, ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಶಿವಮೊಗ್ಗದಲ್ಲಿ ಬಿ.ವೈ ರಾಘವೇಂದ್ರ, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಹಾಗೂ ಚಿಕ್ಕೋಡಿಯಲ್ಲಿ ರಮೇಶ್ ಕತ್ತಿ ಟಿಕೆಟ್​ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಳಗಾವಿಗೆ ಜಗದೀಶ ಶೆಟ್ಟರ್​, ಚಿಕ್ಕೋಡಿಗೆ ರಮೇಶ ಕತ್ತಿ ಅಭ್ಯರ್ಥಿಯಾಗಲಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರ ತೇಜಸ್ವಿ ಸೂರ್ಯ ಅವರಿಗೆ, ಬೆಂಗಳೂರು ಸೆಂಟ್ರಲ್​ನಲ್ಲಿ ಪಿ.ಸಿ ಮೋಹನ್ ಟಿಕೆಟ್ ಉಳಿಸಿಕೊಳ್ಳಲಿದ್ದಾರೆ. ಪ್ರಲ್ಹಾದ್ ಜೋಶಿಗೆ ಹುಬ್ಬಳ್ಳಿ- ಧಾರವಾಡ ಮತ್ತೆ ಸಿಗಲಿದೆ.

ಪ್ರಸ್ತಾಪಿತ ಹೆಸರುಗಳು

1. ಶಿವಮೊಗ್ಗ-ಬಿ.ವೈ.ರಾಘವೇಂದ್ರ

2. ಧಾರವಾಡ- ಪ್ರಹ್ಲಾದ ಜೋಶಿ

3. ಉಡುಪಿ-ಚಿಕ್ಕಮಗಳೂರು- ಶೋಭಾ ಕರಂದ್ಲಾಜೆ

4. ವಿಜಯಪುರ- ಗೋವಿಂದ ಕಾರಜೋಳ

5. ಬೆಳಗಾವಿ- ಜಗದೀಶ ಶೆಟ್ಟರ

6. ಹಾವೇರಿ- ಬಸವರಾಜ ಬೊಮ್ಮಾಯಿ

7. ಬೆಂಗಳೂರು ಗ್ರಾಮಾಂತರ-

ಡಾ.ಸಿ.ಎನ್.ಮಂಜುನಾಥ್

8. ಬೆಂಗಳೂರು ಕೇಂದ್ರ – ಪಿ.ಸಿ.ಮೋಹನ್

9. ಬೆಂಗಳೂರು ದಕ್ಷಿಣ- ತೇಜಸ್ವಿ ಸೂರ್ಯ

10.ಚಿಕ್ಕಬಳ್ಳಾಪುರ- ಡಾ.ಕೆ.ಸುಧಾಕರ

11.ತುಮಕೂರು– ವಿ.ಸೋಮಣ್ಣ

12.ಚಿತ್ರದುರ್ಗ- ಎ.ನಾರಾಯಣಸ್ವಾಮಿ

13.ಕಲಬುರಗಿ- ಉಮೇಶ ಜಾಧವ

14.ಮೈಸೂರು- ಯದುವೀರ್ ಒಡೆಯ‌ರ್

15.ಬಳ್ಳಾರಿ- ಬಿ.ಶ್ರೀರಾಮುಲು