ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಶುಕ್ರವಾರ ಬೆಳಗ್ಗೆ ತಮಗೆ ತಾವೇ ಬಾರುಕೋಲಿನಿಂದ ಹೊಡೆದುಕೊಂಡಿದ್ದಾರೆ.
ವೀಡಿಯೊದಲ್ಲಿ, ಅಣ್ಣಾಮಲೈ ಅವರು ಹಸಿರು ಲುಂಗಿಯಲ್ಲಿ ಶರ್ಟ್ ಇಲ್ಲದೆ, ಕೈಯಲ್ಲಿ ದೊಡ್ಡ ಚಾವಟಿಯೊಂದಿಗೆ ನಿಂತಿದ್ದಾರೆ. ಅವರು ಆರು ಬಾರಿ ತಮ್ಮನ್ನು ತಾವೇ ಚಾವಟಿಯಿಂದ ಹೊಡೆದುಕೊಂಡಿದ್ದಾರೆ. ಏಳನೇ ಬಾರಿಗೆ ಚಾವಟಿಯಿಂದ ಹೊಡೆದುಕೊಳ್ಳುವಾಗ ಅವರ ಬೆಂಬಲಿಗನೊಬ್ಬ ಓಡಿಹೋಗಿ ನಿಲ್ಲಿಸಿದ್ದಾನೆ.
2026 ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಸೋಲಿಸುವ ಗುರಿಯೊಂದಿಗೆ ಆಡಳಿತಾರೂಢ ಡಿಎಂಕೆ ವಿರುದ್ಧ 48 ದಿನಗಳ ಉಪವಾಸ ಮತ್ತು ಬರಿಗಾಲಲ್ಲಿ ನಡೆದಾಡುವ ಪ್ರತಿಜ್ಞೆಯೊಂದಿಗೆ ದೊಡ್ಡ ಪ್ರತಿಭಟನೆಗೆ ಚಾಲನೆ ನೀಡಲು ಆರು ಬಾರಿ ಚಾವಟಿಯಲ್ಲಿ ಹೊಡೆದುಕೊಂಡಿದ್ದಾರೆ.
“ತಮಿಳು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಯಾರಾದರೂ ಇದನ್ನು ಅರ್ಥಮಾಡಿಕೊಳ್ಳುತ್ತಾರೆ. ನಮ್ಮನ್ನು ನಾವೇ ಹೊಡೆದುಕೊಳ್ಳುವುದು … ನಮ್ಮನ್ನು ನಾವೇ ಶಿಕ್ಷಿಸಿಕೊಳ್ಳುವುದು … ಇದು ಈ ಸಂಸ್ಕೃತಿಯ ಭಾಗವಾಗಿದೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
“ಇದು (ಪ್ರತಿಭಟನೆ) ಯಾವುದೇ ವ್ಯಕ್ತಿ ವಿರುದ್ಧವಲ್ಲ … ಆದರೆ ರಾಜ್ಯದಲ್ಲಿ ನಡೆಯುತ್ತಿರುವ ನಿರಂತರ ಅನ್ಯಾಯದ ವಿರುದ್ಧವಾಗಿದೆ. ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದಿರುವುದು ಕೇವಲ ಟಿಪ್ಪಿಂಗ್ ಪಾಯಿಂಟ್. ನೀವು ನೋಡಿದರೆ ಕಳೆದ 3 ವರ್ಷಗಳಿಂದ ಏನಾಗುತ್ತಿದೆ… ಸಾಮಾನ್ಯ ಜನರ ವಿರುದ್ಧ, ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಿರಂತರ ಅನ್ಯಾಯ ನಡೆಯುತ್ತಿದೆ ಮತ್ತು ಭ್ರಷ್ಟಾಚಾರ ತಾಂಡವಾಡುತ್ತಿದೆ. ಆದ್ದರಿಂದ, ನಿನ್ನೆ ನಾನು ಈ ಮಾರ್ಗವನ್ನು ಆಯ್ಕೆ ಮಾಡಿದ್ದೇವೆ ಎಂದು ಪ್ರಕಟಿಸಿದ್ದೇನೆ …” ಎಂದು ಹೇಳಿದರು.ಈ ವಾರ ಚೆನ್ನೈನ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯೊಬ್ಬಳ ಮೇಲೆ ನಡೆದ ಭೀಕರ ಲೈಂಗಿಕ ದೌರ್ಜನ್ಯ ಮತ್ತು ಆಕೆಯ ಪುರುಷ ಸ್ನೇಹಿತನನ್ನು ಥಳಿಸಿದ ನಂತರ ಅಣ್ಣಾಮಲೈ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಸಂಬಂಧ ರಸ್ತೆ ಬದಿ ಆಹಾರ ಮಳಿಗೆ ನಡೆಸುತ್ತಿದ್ದ 37 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಆದಾಗ್ಯೂ, ಈ ದಾಳಿಯು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಡಿಎಂಕೆ ಮತ್ತು ಬಿಜೆಪಿ ಮತ್ತು ಎಐಎಡಿಎಂಕೆ ನಡುವೆ ನಿರೀಕ್ಷಿತ ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಯಿತು.