ಬೆಂಗಳೂರು: ರಾಜ್ಯದಲ್ಲಿ ರೈತರು, ದೇವಸ್ಥಾನಗಳು, ಮಠಗಳು, ಶಾಲೆಗಳ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸಿರುವುದನ್ನು ಪ್ರತಿಭಟಿಸಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ತಾಲೂಕು ಕೇಂದ್ರಗಳಲ್ಲಿ ಬಿಜೆಪಿ ಇಂದು ಪ್ರತಿಭಟನೆ ಹಮ್ಮಿಕೊಂಡಿದೆ. 1974ರ ವಕ್ಫ್ ಆಸ್ತಿ ಕುರಿತ ಗೆಜೆಟ್ ಅಧಿಸೂಚನೆ ಹಿಂಪಡೆಯಲು ಒತ್ತಾಯಿಸಿ ಮತ್ತು ಅಧಿಕಾರ ದುರ್ಬಳಕೆ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಆಂದೋಲನ ರೂಪಿಸಲಾಗುವುದು. ಕರ್ನಾಟಕ ವಕ್ಫ್ ನಲ್ಲಿ ನಡೆದಿರುವ ಖೊಟ್ಟಿ ದಾಖಲೆಗಲ ಸೃಷ್ಟಿ, ಆ ಮೂಲಕ ಮಾಡಿಕೊಂಡಿರುವ ಲಾಭದ ಕುರಿತು ಜಾರಿ ನಿರ್ದೇಶನಾಲಯ(ಇಡಿ)ದಿಂದ ತನಿಖೆ ನಡೆಸಬೇಕು. 50 ವರ್ಷದ ಹಿಂದಿನ ಗೆಜೆಟ್ ನೆಪವೊಡ್ಡಿ 50 ವರ್ಷ ಯಾವುದೇ ಕ್ರಮ ಕೈಗೊಳ್ಳದೆ ಈಗ ಅಲ್ಪಸಂಖ್ಯಾತರ ಮತ ಬ್ಯಾಂಕ್ ರಾಜಕಾರಣಕ್ಕಾಗಿ ತುಷ್ಟೀಕರಣ ನಡೆಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು ಈ ಬಗ್ಗೆ ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ಮುಂದಾಗಿದೆ.