ನೀಲಂಬೂರು : ಭಾರತ್ ಜೋಡೋ ಯಾತ್ರೆ ಯಶಸ್ವಿಗೊಳಿಸಲು ಅಪಾರ ಕೊಡುಗೆ ನೀಡಿದ ವೇಣುಗೋಪಾಲ್ ರವರು ಜಾತ್ಯಾತೀತ ಹಾಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರಿಸಿರುವ ವ್ಯಕ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ಸೂಚಿಸಿದರು.
ಕೇರಳದ ನೀಲಂಬೂರು ನಗರದಲ್ಲಿ ಆರ್ಯಾಡನ್ ಮೊಹಮ್ಮದ್ ಸಂಸ್ಮರಣಾ ಸಮಿತಿ ಆಯೋಜಿಸಿರುವ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಆರ್ಯಾಡನ್ ಮೊಹಮ್ಮದ್ ಸಂಸ್ಮರಣೆ ಅಂಗವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ರವರಿಗೆ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದ್ದು, ಈ ಪ್ರಶಸ್ತಿಯನ್ನು ನಾನು ಪ್ರದಾನ ಮಾಡುತ್ತಿರುವುದು ಗೌರವದ ವಿಚಾರವಾಗಿದೆ. ನಿಷ್ಠಾವಂತ ಕಾಂಗ್ರೆಸಿಗರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪನೆ ಮಾಡಿ ಜಾತ್ಯಾತೀತ ವ್ಯಕ್ತಿಯಾದ ಕೆ. ಸಿ.ವೇಣುಗೋಪಾಲ್ ಅವರಿಗೆ ನೀಡಿರುವುದು ಸಂತಸ ತಂದಿದೆ ಎಂದರು.
ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿನ ಶ್ರಮ ಸ್ತುತ್ಯಾರ್ಹ:
ಕೆ.ಸಿ.ವೇಣುಗೋಪಾಲ್ ರವರು ಕೇರಳಕ್ಕೆ ಬರುವಂತೆ ನನಗೆ ಬಹಳಷ್ಟು ಬಾರಿ ಆಹ್ವಾನಿಸಿದ್ದರು. ಆದರೆ ಕೆಲಸದೊತ್ತಡದಿಂದ ಇಲ್ಲಿಗೆ ಆಗಮಿಸಲು ಸಾಧ್ಯವಾಗಿರಲಿಲ್ಲ. 2013 ರಿಂದ 2018 ರವರೆಗೆ ನಾನು ಮುಖ್ಯಮಂತ್ರಿಯಾಗಿದ್ದಾಗ, ವೇಣುಗೋಪಾಲ್ ರವರು ರಾಜ್ಯದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಕಾರಣ, ಅವರನ್ನು ಹತ್ತಿರದಿಂದ ಬಲ್ಲೆ. ಸ್ವಭಾವತ: ಜನಕ್ಕೆ ಹತ್ತಿರವಾದ ವ್ಯಕ್ತಿಯಾಗಿದ್ದು, ಹಿರಿಯರನ್ನು , ಕಿರಿಯರನ್ನು ಗೌರವದಿಂದ ಕಾಣುತ್ತಾರೆ. ಇವರೊಬ್ಬ ಸ್ನೇಹಜೀವಿ. ಕಾಂಗ್ರೆಸ್ ಪಕ್ಷವನ್ನು ಚಿಕ್ಕವಯಸ್ಸಿನಲ್ಲಿ ಸೇರಿ, ಪಕ್ಷವನ್ನು ಕಟ್ಟಿದವರು. ಕೇರಳ ವಿಧಾನಸಭೆಯಲ್ಲಿ ಶಾಸಕರಾಗಿ, ಲೋಕಸಭಾ ಹಾಗೂ ರಾಜ್ಯಸಭೆಯ ಸದಸ್ಯರಾಗಿದ್ದವರು. ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದರಲ್ಲಿ ಅವರ ಶ್ರಮ ಸ್ತುತ್ಯಾರ್ಹವಾದುದು ಎಂದರು.ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಸಮಯೋಚಿತ ಸಲಹೆ ನೀಡಿದ್ದನ್ನು ಸ್ಮರಿಸಿದ ಸಿಎಂ:
ನಾನು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಫರ್ಧಿಸಲು ನಿರ್ಧರಿಸಿದ್ದಾಗ , ಮತ್ತೊಂದು ಕ್ಷೇತ್ರದಲ್ಲಿ ನಿಲ್ಲುವಂತೆ ಸಲಹೆ ನೀಡಿದರು. ಆಗ ನಾನು ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧೆ ಮಾಡದಿದ್ದರೆ, ಚುನಾವಣೆಯಲ್ಲಿ ಸೋಲನ್ನು ಅನುಭವಿಸುತ್ತಿದ್ದೆ.ರಾಜಕೀಯ ಚಾಣಕ್ಷರಾದ ವೇಣುಗೋಪಾಲ್ ರಲ್ಲಿ ಜನರನ್ನು ಅರ್ಥಮಾಡಿಕೊಳ್ಳುವ ಗುಣವಿದೆ. ಕಾಂಗ್ರೆಸ್ ನ ವರಿಷ್ಠರು ಹಾಗೂ ಇತರ ಪಕ್ಷಗಳ ನಾಯಕರನ್ನೊಳಗೊಂಡ ಇಂಡಿಯಾ ಮೈತ್ರಿಕೂಟ ಸ್ಥಾಪನೆಗೆ ಸಹಕರಿಸಿದರು. ಎಲ್ಲ ಜಾತಿಧರ್ಮಗಳ ಬಡಜನರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದರು.ಗ್ಯಾರಂಟಿ ಯೋಜನೆ ರೂಪಿಸಲು ಬೆಂಬಲ:
ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ, ಪಂಚ ಗ್ಯಾರಂಟಿಗಳ ಚುನಾವಣಾ ಭರವಸೆಗಳನ್ನು ನಾವು ನೀಡಿದ್ದೆವು. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆಗಳನ್ನು ರೂಪಿಸಲು ವೇಣುಗೋಪಾಲ್ ರವರು ಬೆಂಬಲ ನೀಡಿದರು. ಒಂದು ವರ್ಷದಲ್ಲಿ ಎಲ್ಲ ಗ್ಯಾರಂಟಿಗಳನ್ನು ಜಾರಿ ಮಾಡಿ, 56000 ಕೋಟಿ ರೂ.ಗಳನ್ನು ಇದಕ್ಕಾಗಿ ನಿಗದಿಪಡಿಸಿದ್ದೇವೆ. ಕರ್ನಾಟಕದಲ್ಲಿ ಬಿಜೆಪಿಯಂತಹ ಕೋಮುವಾದಿ ಪಕ್ಷದ ಜೊತೆಗೆ ಜೆಡಿಎಸ್ ಸೇರಿಕೊಂಡಿದೆ. ಈ ಎರಡೂ ಪಕ್ಷವನ್ನು ಸೋಲಿಸಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ನಾವು ದಲಿತರು, ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಕೇರಳದ ನಾರಾಯಣಗುರು ಹಾಗೂ ಕರ್ನಾಟಕದ ಬಸವಣ್ಣನವರು ಮನುವಾದ ವಿರೋಧಿಸಿದ್ದರು. ನಾರಾಯಣಗುರುಗಳು ಒಂದು ಜಾತಿ ಒಂದೇ ದೈವ ಎಂದು ಪ್ರತಿಪಾದಿಸಿದರು.ಅಂತೆಯೇ ಬಸವಣ್ಣನವರು ಸಮಾನತೆಯ ಸಮಾಜ ನಿರ್ಮಾಣವಾಗಬೇಕು ಎಂದಿದ್ದರು.ದೇಶ ಉಳಿಸುವ ಕೆಲಸ ಮಾಡಲಿ:
ಅವರು ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ. ಕಾಂಗ್ರೆಸ್ ಪಕ್ಷ ಕೆಳಮಟ್ಟಕ್ಕೆ ಹೋದಾಗಿನಿಂದಲೂ ಹಿಡಿದು ಈವರೆಗೆ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ. ಅವರ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿ, ಈ ದೇಶವನ್ನು ಉಳಿಸುವ ಕೆಲಸ ಮಾಡಲಿ ಎಂದರು.ಅಸಮಾನತೆಯನ್ನು ಹೋಗಲಾಡಿಸುವವರೆಗೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ:
ದೇಶದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದೆ. ಅಸಮಾನತೆಯನ್ನು ಹೋಗಲಾಡಿಸುವವರೆಗೆ ದೇಶದ ಅಭಿವೃದ್ಧಿ ಹಾಗೂ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಬಸವಣ್ಣ, ನಾರಾಯಣಗುರು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿಪಾದನೆ ಮಾಡಿದ್ದರು. ಕರ್ನಾಟಕದ ಕಾಂಗ್ರೆಸ್ ಇದನ್ನು ಅನುಸರಿಸುತ್ತಿದೆ ಎಂದರು.ಪ್ರಜಾಪ್ರಭುತ್ವ, ಸಂವಿಧಾನ ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವವರನ್ನು ಕಂಡರೆ ಬಿಜೆಪಿ ಗೆ ಆಗುವುದಿಲ್ಲ:
ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಕೂಡ ಇದೆ ವಿಚಾರದಲ್ಲಿ ಬದ್ಧತೆ ಇಟ್ಟುಕೊಂಡಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನ ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವವರನ್ನು ಕಂಡರೆ ಬಿಜೆಪಿ ಗೆ ಆಗುವುದಿಲ್ಲ . ದೇಶದಲ್ಲಿ ಅನೇಕ ಧರ್ಮಗಳು, ಜಾತಿಗಳು, ಭಾಷೆ ಹಾಗೂ ಸಂಸ್ಕೃತಿಗಳು ಇವೆ. ಈ ನೆಲದ ಮಣ್ಣಿನ ಗುಣ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವಂತದ್ದು. ಕೇರಳ ಜಾತ್ಯಾತೀತ ತತ್ವ, ಸಮಾಜವಾದಿ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಮೊದಲಿನಿಂದಲೂ ಕೂಡ ಮುಂಚೂಣಿಯಲ್ಲಿದೆ. ನಾವೆಲ್ಲರೂ ಕೂಡ ಜಾತ್ಯಾತೀತವಾದಿ ಗಳಾಗಬೇಕು. ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಈ ದೇಶದ ಎಲ್ಲಾ ಧರ್ಮಗಳು ಪ್ರೀತಿಯನ್ನು ಸಾರುತ್ತವೆಯೇ ಹೊರತು ಧ್ವೇಷವನ್ನು ಸಾರುವುದಿಲ್ಲ. ಕೇರಳ ಮೊದಲಿನಿಂದಲೂ ಜಾತ್ಯಾತೀತ, ಸಮಾಜವಾದಿ ಹಾಗೂ ಪ್ರಜಾಪ್ರಭುತ್ವ ತತ್ವಗಳಿಗೆ ಬದ್ಧತೆಯಿರುವ ರಾಜ್ಯ . ಇಂಥ ರಾಜ್ಯದಿಂದ ಕೆ ಸಿ.ವೇಣುಗೋಪಾಲ್ ಬಂದಿದ್ದಾರೆ. ಹಾಗಾಗಿಯೇ ಮೊದಲಿನಿಂದಲೂ ಅವರ ರಕ್ತದಲ್ಲಿ ಸಮಾಜವಾದ , ಪ್ರಜಾಪ್ರಭುತ್ವ, ಜಾತ್ಯಾತೀತತೆಯನ್ನು ಮೈಗೂಡಿಸಿಕೊಂಡಿದ್ದಾರೆ ಎಂದರು.ಆರ್ಯಾಡಲ್ ಮೊಹಮ್ಮದ್ ಜೀವನ ಯುವ ಪೀಳಿಗೆಗೆ ಆದರ್ಶ:
ಆರ್ಯಾಡಲ್ ಮೊಹಮ್ಮದ್ ಅವರು 1935 ರಲ್ಲಿ ಜನಿಸಿದ್ದು, 2023ರ ವರೆಗೂ ಕೂಡ ಕ್ರಿಯಾಶೀಲರಾಗಿದ್ದರು. ಅವರು ಸುಮಾರು 34 ವರ್ಷಗಳ ಕಾಲ ಶಾಸಕರಾಗಿದ್ದರು. ಸಚಿವರಾಗಿ ದೀರ್ಘ ಕಾಲ ಸಾರ್ವಜನಿಕ ಜೀವನದಲ್ಲಿದ್ದರು. 17 ನೇ ವರ್ಷದಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರಾಗಿ 23 ನೇ ವರ್ಷಕ್ಕೆ ಸಕ್ರಿಯ ಸದಸ್ಯರಾಗಿ ಬದುಕಿರುವವರೆಗೂ ಕೂಡ ಕಾಂಗ್ರೆಸ್ ನಲ್ಲಿ ಇದ್ದರು ಎನ್ನುವುದು ಹೆಮ್ಮೆಯ ವಿಚಾರ. ಅವರ ಸಾರ್ವಜನಿಕ ಜೀವನ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕ ಹಾಗೂ ಆದರ್ಶ ಎಂದರು.ದೇಶದಲ್ಲಿ ಬಿಜೆಪಿ ಬೆಳೆಯಬಾರದು:
ಬಿಜೆಪಿ ಈ ದೇಶದಲ್ಲಿ ಬೆಳೆಯಬಾರದು. ಅದು ಬೆಂಕಿ ಇಡುವ ಪಕ್ಷ. ಧರ್ಮ, ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಪಕ್ಷ. ಈ ದೇಶದ ರಾಜಕಾರಣದಿಂದ ಬಿಜೆಪಿಯನ್ನು ತೊಲಗಿಸುವುದು ನಮ್ಮೆಲ್ಲರ ಜವಾಬ್ದಾರಿ. ಎಲ್ಲರೂ ಅದಕ್ಕಾಗಿ ಪ್ರಯತ್ನ ಮಾಡೋಣ. ಕೆ.ಸಿ.ವೇಣುಗೋಪಾಲ್, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ , ಸೋನಿಯಾ ಗಾಂಧಿ ಯವರ ನಾಯಕತ್ವದಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡೋಣ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡು ಮುಂದುವರೆಯೋಣ ಎಂದರು.ಕೇರಳ ಸರ್ಕಾರದ ವಿರೋಧ ಪಕ್ಷದ ನಾಯಕರೂ, ಕೇರಳ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ವಿ.ಡಿ.ಸತೀಶನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಸಂಸದರಾದ ಕುಂಜಲಿಕುಟ್ಟಿ, ಅಬ್ದುಲ್ ಸಮದ್, ಮುಹಮದ್ ಹಮ್ದುಲ್ಲಾ ಸಯೀದ್, ವಿಷ್ಣುನಾಥ್ ಸೇರಿ ಕೇರಳ ಯುವ ಕಾಂಗ್ರೆಸ್ ಮುಖಂಡರು ಮತ್ತು ಹಲವು ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.