ಬೆಂಗಳೂರು :
ಬೆಂಗಳೂರಿನ 15 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಮೇಲ್ ಮೂಲಕ ಈ ಬಾಂಬ್ ಬೆದರಿಕೆ ಬಂದಿದೆ ಎಂದು ಹೇಳಲಾಗಿದ್ದು, ಬೆಳಗ್ಗೆ ಮೇಲ್ ಚೆಕ್ ಮಾಡುವಾಗ ಇದು ಗೊತ್ತಾಗಿದೆ. ಪೊಲೀಸರು ಶಾಲೆಗಳಿಗೆ ದೌಡಾಯಿಸಿದ್ದು, ಬಾಂಬ್ ತಪಾಸಣೆ ದಳಗಳೂ ಆಗಮಿಸಿವೆ.
ಎಲ್ಲಾ ಶಾಲೆಗಳಿಂದ ಮಕ್ಕಳನ್ನು ಹೊರಗೆ ಕಳುಹಿಸಲಾಗಿದೆ. ಇ-ಮೇಲ್ ಮೂಲಕ ಅಪರಿಚಿತರು ಬೆದರಿಕೆ ಹಾಕಿದ್ದು, ಬೆಂಗಳೂರಿನ ಬಸವೇಶ್ವರ ನಗರದ 7 ಶಾಲೆಗೆ ಬೆದರಿಕೆ ಹಾಕಲಾಗಿದೆ. ಅಲ್ಲದೆ, ಸದಾಶಿವನಗರ, ಯಲಹಂಕ ಸೇರಿ ಹಲವು ಕಡೆಗಳಲ್ಲಿರುವ ಶಾಲೆಗೆ ಬೆದರಿಕೆ ಕರೆ ಬಂದಿದೆ ಎಂದು ಹೇಳಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಕೂಡಲೇ ಮಕ್ಕಳನ್ನು ಶಾಲೆಯಿಂದ ಹೊರಗೆ ಕಳುಹಿಸಲಾಯಿತು. ಮಕ್ಕಳನ್ನು ಬಿಡಲು ಆಗಮಿಸಿದ್ದ ಪೋಷಕರು ಕೂಡ ಆತಂಕಕ್ಕೆ ಒಳಗಾದರು.
ಪೊಲೀಸ್ ಕಮಿಷನರ್ ಬಿ. ದಯಾನಂದ ಅವರು ಈ ಬಗ್ಗೆ ಹೇಳಿಕೆ ನೀಡಿ, ಬೆಂಗಳೂರಿನ ಹಲವು ಶಾಲೆಗಳಿಗೆ ಬೆದರಿಕೆ ಕರೆ ಬಂದಿದೆ. ಎಲ್ಲ ಶಾಲೆಗಳಲ್ಲಿ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸುತ್ತಿದೆ. ಈ ಹಿಂದೆಯೂ ಈ ರೀತಿ ಬೆದರಿಕೆ ಕರೆ ಬಂದಿತ್ತು. ಬಹುಶಃ ಇದು ಸುಳ್ಳು ಬಾಂಬ್ ಬೆದರಿಕೆ ಎಂದು ಅನ್ನಿಸುತ್ತಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಹಿನ್ನಲೆಯಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸದಾಶಿವ ನಗರದ ನೀವ್ ಅಕಾಡಮಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಾಂಬ್ ಬೆದರಿಕೆ ಕರೆ ಬಂದ ಸದಾಶಿವನಗರದ ನೀವ್ ಅಕಾಡೆಮಿ ನರ್ಸರಿ ಶಾಲೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ಬೆಳಗ್ಗೆ ಭೇಟಿ ಮಾಡಿ, ಶಾಲೆಯವರು ಹಾಗೂ ಪೊಲೀಸರಿಂದ ಮಾಹಿತಿ ಪಡೆದರು.