ನವದೆಹಲಿ: ದೆಹಲಿ ಮತ್ತು ನೋಯ್ಡಾದ 50 ಕ್ಕೂ ಹೆಚ್ಚು ಶಾಲೆಗಳಿಗೆ ಬುಧವಾರ ಬೆಳಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿ ಮನೆಗೆ ಕಳುಹಿಸಲಾಗಿದೆ
ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಹಲವು ಶಾಲೆಗಳಿಗೆ ಮೇಲ್ ಕಳುಹಿಸಲಾಗಿದೆ.
ಚಾಣಕ್ಯಪುರಿಯಲ್ಲಿರುವ ಸಂಸ್ಕೃತಿ ಶಾಲೆ, ಪೂರ್ವ ದೆಹಲಿಯ ಮಯೂರ್ ವಿಹಾರ್‌ನಲ್ಲಿರುವ ಮದರ್ ಮೇರಿ ಶಾಲೆ ಮತ್ತು ದ್ವಾರಕಾದಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್ ಇಂದು, ಬುಧವಾರ ಮುಂಜಾನೆ ಬಾಂಬ್‌ ಬೆದರಿಕೆ ಮೇಲ್‌ ಸ್ವೀಕರಿಸಿದ ಮೊದಲ ಶಾಲೆಗಳಲ್ಲಿ ಸೇರಿವೆ. ನಂತರ ಕ್ಯಾಂಪಸ್‌ನಲ್ಲಿ ಸ್ಫೋಟಕಗಳಿವೆ ಎಂದು ಹೇಳಿ ಇತರ ಐದು ಶಾಲೆಗಳಿಗೂ ಇದೇ ರೀತಿಯ ಬೆದರಿಕೆಯ ಮೇಲ್‌ಗಳು ಬಂದಿವೆ.
ಶಾಲೆಗಳಲ್ಲಿ ಒಂದಾದ ಮದರ್ ಮೇರಿ ಶಾಲೆಯಲ್ಲಿ ಪರೀಕ್ಷೆಯನ್ನು ನಡೆಸುತ್ತಿದ್ದರು ಮತ್ತು ಬಾಂಬ್‌ ಬೆದರಿಕೆಯ ನಂತರ ಶೋಧ ಕಾರ್ಯ ನಡೆಯುತ್ತಿರುವಾಗ ಅದನ್ನು ಮಧ್ಯದಲ್ಲಿ ನಿಲ್ಲಿಸಬೇಕಾಯಿತು. ಶಾಲೆಯು ತುರ್ತು ಪರಿಸ್ಥಿತಿಯನ್ನು ಘೋಷಿಸಿತು ಮತ್ತು ತಕ್ಷಣ ಎಲ್ಲರಿಗೂ ಆವರಣದಿಂದ ಹೊರಹೋಗುವಂತೆ ಸೂಚಿಸಲಾಯಿತು.

ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಶಾಲೆಯ ಆವರಣವನ್ನು ತೆರವುಗೊಳಿಸಲಾಯಿತು. ಶಾಲೆಗಳಿಂದ ಬಂದ ದೃಶ್ಯಗಳು ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಲು ಶಾಲೆಗಳಿಗೆ ಧಾವಿಸುತ್ತಿರುವುದನ್ನು ತೋರಿಸಿದೆ.
ಬಾಂಬ್ ಪತ್ತೆ ತಂಡ, ಬಾಂಬ್ ನಿಷ್ಕ್ರಿಯ ದಳ ಮತ್ತು ದೆಹಲಿ ಅಗ್ನಿಶಾಮಕ ಸೇವೆಯ ಅಧಿಕಾರಿಗಳು ಶಾಲೆಗಳಿಗೆ ಧಾವಿಸಿದ್ದಾರೆ.
ಶೋಧನೆ ನಡೆಸುತ್ತಿರುವ ತಂಡಕ್ಕೆ ಅನುಮಾನಾಸ್ಪದವಾದದ್ದೇನೂ ಕಂಡುಬಂದಿಲ್ಲ. ದೆಹಲಿ ಪೊಲೀಸರ ಪ್ರಕಾರ, ಬೆದರಿಕೆ ಇಮೇಲ್‌ನ ಐಪಿ ವಿಳಾಸವನ್ನು ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ ಆದರೆ ಇಲ್ಲಿಯವರೆಗೆ ಯಾರು ಇಮೇಲ್ ಕಳುಹಿಸಿದ್ದಾರೆ ಮತ್ತು ಎಲ್ಲಿಂದ ಕಳುಹಿಸಿದ್ದಾರೆ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. “ಇದೊಂದು ಕಿಡಿಗೇಡಿತನದ ಪ್ರಕರಣವೆಂದು ತೋರುತ್ತಿದೆ, ಭಯಭೀತರಾಗಲು ಇಷ್ಟು ದೊಡ್ಡ ಪ್ರಮಾಣದಲ್ಲಿ ಎಲ್ಲಾ ಶಾಲೆಗಳಿಗೆ ಮೇಲ್ ಕಳುಹಿಸಲಾಗಿದೆ. ಸೈಬರ್ ಸೆಲ್ ಘಟಕವು ಇಮೇಲ್ ಮತ್ತು ಐಪಿ ವಿಳಾಸವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.