ಬೆಂಗಳೂರು: ಆಹಾರ ಸುರಕ್ಷತೆ ಆಯುಕ್ತಾಲಯ ಸಂಗ್ರಹಿಸಿದ ಬಾಂಬೆ ಮಿಠಾಯಿ (ಕಾಟನ್‌ ಕ್ಯಾಂಡಿ) ಹಾಗೂ ವಿವಿಧ ಬಗೆಯ ಬಣ್ಣ ಬಳಸಿ ತಯಾರಿಸಲಾದ ಗೋಬಿ ಮಂಚೂರಿ ಮಾದರಿಯ ಪರೀಕ್ಷಾ ವರದಿ ಆರೋಗ್ಯ ಇಲಾಖೆಗೆ ಸಲ್ಲಿಕೆಯಾಗಿದ್ದು, ರಾಜ್ಯದಲ್ಲಿಯೂ ಇವು ನಿಷೇಧವಾಗುವ ಸಾಧ್ಯತೆಯಿದೆ.

ಪುದುಚೇರಿ, ತಮಿಳುನಾಡು ಸರ್ಕಾರಗಳು ಬಾಂಬೆ ಮಿಠಾಯಿ ಉತ್ಪಾದನೆ, ಮಾರಾಟ ನಿಷೇಧಿಸಿದೆ. ತಮಿಳುನಾಡಿನ ಸರ್ಕಾರಿ ಪ್ರಯೋಗಾಲಯದಲ್ಲಿ ನಡೆಸಲಾದ ಪರೀಕ್ಷೆಗಳಲ್ಲಿ ಬಾಂಬೆ ಮಿಠಾಯಿಯಲ್ಲಿ ‘ರೊಡಮೈನ್‌-ಬಿ’ ಅಂಶ ಇರುವುದು ದೃಢಪಟ್ಟಿದೆ. ಕರ್ನಾಟಕದ ಆಹಾರ ಸುರಕ್ಷತೆ ಆಯುಕ್ತಾಲಯ ಬಾಂಬೆ ಮಿಠಾಯಿ, ಗೋಬಿ ಮಂಚೂರಿ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯಗಳಿಗೆ ಕಳುಹಿಸಿತ್ತು.

ಬಾಂಬೆ ಮಿಠಾಯಿ ಜತೆಗೆ 170ಕ್ಕೆ ಹೆಚ್ಚು ಗೋಬಿ ಮಂಚೂರಿ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಅವುಗಳಲ್ಲಿ 100 ಕ್ಕೂ ಅಧಿಕ ಮಾದರಿಗಳು ತಿನ್ನಲು ಯೋಗವಲ್ಲ ಎಂದು ವರದಿ ಉಲ್ಲೇಖಿಸಿದೆ. ಬಾಂಬೆ ಮಿಠಾಯಿ ಹಾಗೂ ಕೃತಕ ಬಣ್ಣ ಬಳಸಿ ತಯಾರಿಸುವ ಗೋಬಿ ಮಂಚೂರಿಯನ್ನು ನಿಷೇಧ ಮಾಡುವ ಸಾಧ್ಯತೆಯಿದೆ. ಆರೋಗ್ಯಕ್ಕೆ ಹಿತಕಾರಿಯಾದ ಸಹಜ ಬಣ್ಣ ಬಳಸಿ ತಯಾರಿಸುವ ಗೋಬಿ ಮಂಚೂರಿಗೆ ಅವಕಾಶ ಇರಲಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ವರದಿ ಬಿಡುಗಡೆ ಮಾಡಲಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.