ಬೆಳಗಾವಿ : ಎಂ.ಕೆ.ಹುಬ್ಬಳ್ಳಿ ಗ್ರಾಮದ ಗದ್ದಿಕೆರೆಯಲ್ಲಿ ಬಾಲಕನ ಶವ ಸೋಮವಾರ ಪತ್ತೆಯಾಗಿದೆ. ಈಜಲು ಹೋದಾಗ ಕೆರೆಯಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ.

ಎಂ.ಕೆ. ಹುಬ್ಬಳ್ಳಿ ಗ್ರಾಮದಲ್ಲಿ 9 ನೇ ತರಗತಿ ಓದುತ್ತಿದ್ದ ರಿಹಾನ್ ಮುಗುಟ ಸಾಬ್ ನಗಾರಸಿ (15 )ಮೃತಪಟ್ಟ ಬಾಲಕ. ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ಈಜಲು ಹೋಗಿದ್ದ. ಆದರೆ, ಮನೆಗೆ ಮರಳಿ ಬಂದಿರಲಿಲ್ಲ. ಕೆರೆಯ ದಡದಲ್ಲಿ ಬಾಲಕನ ಬಟ್ಟೆ ಮತ್ತು ಚಪ್ಪಲಿ ಪತ್ತೆಯಾಗಿದ್ದವು. ಇದರಿಂದ ಅನುಮಾನಗೊಂಡ ನಾಗರಿಕರು ಸೋಮವಾರ ಕೆರೆಯ ಬಳಿ ಬಂದು ನೋಡಿದಾಗ ಅನುಮಾನ ಬಂದಿದೆ. ಪೊಲೀಸರು, ಅಗ್ನಿಶಾಮಕ ದಳ ಮತ್ತು ರಾಜ್ಯ ವಿಪತ್ತು ಸ್ಪಂದನ ಪಡೆಯ ಸಿಬ್ಬಂದಿಯ ಕಾರ್ಯಾಚರಣೆಯಿಂದ ಕೊನೆಗೂ ಬಾಲಕನ ಶವ ಪತ್ತೆಯಾಗಿದೆ. ಈತ ಯಾವಾಗ ಈಜಲು ಹೋಗಿದ್ದ ಎಂಬ ಮಾಹಿತಿ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.