ತಿರುಪತಿ: ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆಯಲಿರುವ ವಾರ್ಷಿಕ ಬ್ರಹ್ಮಕಲಶೋತ್ಸವ ಪ್ರಯುಕ್ತ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಗುರುವಾರ ಅಂಕುರಾರ್ಪಣೆ ಕೈಗೊಂಡಿತು.
ಅಂಕುರಾರ್ಪಣಂ ಎಂಬುದು ಉಯ್ಯಾಲೆ ಉತ್ಸವವಾಗಿದ್ದು, ಇದನ್ನು ಬ್ರಹ್ಮಕಲಶೋತ್ಸವದ ಮುನ್ನಾದಿನ ಕೈಗೊಳ್ಳಲಾಗುತ್ತದೆ. ಪಾಲಿಕಾಸ್ ಎಂಬ ಪಾತ್ರೆಗಳನ್ನು ಬಳಸಿಕೊಂಡು ರಾತ್ರಿಯಲ್ಲಿ ಬೀಜ ಬಿತ್ತುವುದನ್ನು ಇದು ಒಳಗೊಂಡಿರುತ್ತದೆ. ಹಬ್ಬವನ್ನು ಯಶಸ್ವಿಯಾಗಿ ಆಚರಿಸಲು ಮತ್ತು ಮೂಲದೇವತೆ ಕೃಪೆಗೆ ಪಾತ್ರರಾಗಲು ಸಂಕಲ್ಪ ಮಾಡುವುದು ಅಂಕುರಾರ್ಪಣೆಯ ಮೂಲತತ್ವವಾಗಿದೆ ಎಂದು ಟಿಟಿಡಿ ತಿಳಿಸಿದೆ.
ಬ್ರಹ್ಮಕಲಶೋತ್ಸವವು ಅ.4ರಿಂದ 12ರ ವರೆಗೆ ನಡೆಯಲಿದ್ದು, ಈ ವೇಳೆಯಲ್ಲಿ ಆಲಯ ಶುದ್ಧಿ, ಧ್ವಜಾರೋಹಣ, ವಾಹನ ಸೇವೆ, ಶ್ರೀವಾರಿ ಕೊಲುವು, ಸ್ನಾಪನಂ ಇತ್ಯಾದಿ ಈ ವೇಳೆ ನಡೆಯಲಿದೆ. ಬ್ರಹ್ಮಕಲಶೋತ್ಸವ ಪ್ರಯುಕ್ತ ತಿರುಮಂಜನಂ ಮಂಗಳವಾರ ನೆರವೇರಿತು. ಬ್ರಹ್ಮಕಲಶೋತ್ಸವಕ್ಕೆ ಸಿಎಂ ಚಂದ್ರಬಾಬು ನಾಯ್ಡು ಆಗಮಿಸಲಿದ್ದಾರೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮಲಾ ರಾವ್ ತಿಳಿಸಿದ್ದಾರೆ.
ಬ್ರಹ್ಮಕಲಶೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಕಳೆದ ವರ್ಷ 12 ರಾಜ್ಯಗಳಿಂದ ತಂಡಗಳನ್ನು ಕರೆಸಲಾಗಿದ್ದು, ಈ ಸಲ 21 ರಾಜ್ಯಗಳಿಂದ ತಂಡಗಳು ಬರಲಿವೆ. ಬ್ರಹ್ಮಕಲಶೋತ್ಸವದ 9 ದಿನ ಭಕ್ತಾದಿಗಳ ಅನುಕೂಲಕ್ಕಾಗಿ ಎಪಿಎಸ್‌ಆರ್‌ಟಿಸಿಯಿಂದ 400 ಬಸ್‌ಗಳ 2 ಸಾವಿರ ಟ್ರಿಪ್‌ಗಳು ಇರಲಿದ್ದು, ಗರುಡ ವಾಹನ ಸೇವಾದಿನದಂದು 3 ಸಾವಿರ ಟ್ರಿಪ್‌ಗಳು ಇರಲಿವೆ. ಭಕ್ತಾದಿಗಳಿಗೆ ಮಾರ್ಗದರ್ಶನ ಮಾಡಲು ವಿವಿಧ ಭಾಷೆಗಳ 12 ಹೆಲ್ಪ್ ಡೆಸ್ಕ್‌ಗಳು ಇರಲಿವೆ ಎಂದು ತಿಳಿಸಿದ್ದಾರೆ.