BREAKING ಕಾಂಗ್ರೆಸ್‌ ಶಾಸಕ
ರಾಜಾ ವೆಂಕಟಪ್ಪ ನಾಯಕ
ನಿಧನ

ಯಾದಗಿರಿ :
ಹೃದಯಾಘಾತದಿಂದ ಯಾದಗಿರಿ ಜಿಲ್ಲೆಯ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ರಾಜಧಾನಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಸುರಪುರ ವಿಧಾನಸಭೆ ಕ್ಷೇತ್ರದ ಎಸ್ ಟಿ ಮೀಸಲು ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ರಾಜಾ ವೆಂಕಟಪ್ಪ ನಾಯಕ. ಅವರು ಕಾಂಗ್ರೆಸ್ ಪಕ್ಷದಿಂದಲೇ ಪ್ರತಿ ಬಾರಿ ಗೆದ್ದಿದ್ದಾರೆ. 1994, 1999, 2013, 2023ರ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.

2023ರ ವಿಧಾನಸಭೆ ಚುನಾವಣೆಯಲ್ಲಿ ಅವರು 1,13,559 ಮತಗಳನ್ನು ಪಡೆದು ಜಯಗಳಿಸಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು 10 ದಿನದ ಹಿಂದೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೊದಲು ಲಿವರ್ ಸಮಸ್ಯೆಯಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆಸ್ಪತ್ರೆಗೆ ದಾಖಲಾದ ಬಳಿಕ ಹೃದಯದ ತೊಂದರೆ ಸಹ ಕಾಣಿಸಿಕೊಂಡಿತ್ತು. 4 ದಿನದ ಹಿಂದೆ ವಾರ್ಡ್‌ನಿಂದ ಅವರನ್ನು ಐಸಿಯುಗೆ ದಾಖಲು ಮಾಡಲಾಗಿತ್ತು. ಮಂಗಳವಾರ ನಡೆಯುವ ರಾಜ್ಯಸಭಾ ಚುನಾವಣೆಗೆ ಮತದಾನ ಮಾಡಲು ಅಂಬ್ಯುಲೆನ್ಸ್‌ನಲ್ಲಿ ಕರೆತಂದು ಪುತ್ರನ ಜೊತೆ ಬಂದು ಮತದಾನ ಮಾಡಲು ಅನುಮತಿ ಪಡೆಯಲಾಗಿತ್ತು ಎಂದು ಹೇಳಲಾಗಿದೆ.

ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಆಪ್ತರಾಗಿದ್ದ ವೆಂಕಟಪ್ಪ ನಾಯಕ ಅವರು ಜಿಲ್ಲೆ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಪಕ್ಷ ಕಟ್ಟಲು ಶಕ್ತಿ ಮೀರಿ ಶ್ರಮಿಸಿದ್ದಾರೆ.
ರಾಜಾ ವೆಂಕಟಪ್ಪ ನಾಯಕ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಕಂಬನಿ ಮಿಡಿದಿದ್ದು ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಆಸ್ಪತ್ರೆಗೆ ತೆರಳಲಿದ್ದಾರೆ. ಸೋಮವಾರ (ಫೆ. 26) ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಶಾಸಕ ವೆಂಕಟಪ್ಪ ನಾಯಕ ಅವರ ಅಂತಿಮ ದರ್ಶನ ಪಡೆದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂತಾಪ ನುಡಿಗಳು:

ಬಹಳ ಸಂಭಾವಿತ ರಾಜಕಾರಣಿ. ಕ್ಷೇತ್ರದ ಅಭಿವೃದ್ಧಿ, ಜನರ ಸಮಸ್ಯೆಗಳ ಬಗ್ಗೆಯೇ ಹೆಚ್ಚೆಚ್ಚು ಕಾಳಜಿ ವಹಿಸಿದ್ದರು. ಸೋತಾಗಲೂ ಜನರ ನಡುವೆಯೇ ಇದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ವೇರ್ ಹೌಸಿಂಗ್ ಕಾರ್ಪೊರೇಷನ್ ಅಧ್ಯಕ್ಷರಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎನ್ನುವ ಬೇಸರ ನನಗಿದೆ. ಮೊನ್ನೆ ಸ್ವಲ್ಪ ಗುಣಮುಖರಾಗುತ್ತಿದ್ದರು. ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎನ್ನುವ ನಿರೀಕ್ಷೆ ಇರಲಿಲ್ಲ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ.

ಶಾಸಕರ ನಿಧನದ ಹಿನ್ನೆಲೆಯಲ್ಲಿ ಸೋಮವಾರದ ಅಧಿವೇಶನವನ್ನು ಸಂತಾಪ ಸೂಚಕವಾಗಿ ಒಂದು ದಿನ ಮುಂದೂಡಲಾಗುವುದು. ಮಂಗಳವಾರ ರಾಜ್ಯಸಭಾ ಚುನಾವಣೆ ಇರುವುದರಿಂದ ಬುಧವಾರಕ್ಕೆ ಅಧಿವೇಶನ ಮುಂದೂಡಬೇಕಾಗುತ್ತದೆ ಎಂದು ಸಿಎಂ ತಿಳಿಸಿದರು.

ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ:

ಬೆಂಗಳೂರು :
ಸುರಪುರ ವಿಧಾನಸಭೆ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.

“ರಾಜಾ ವೆಂಕಟಪ್ಪ ನಾಯಕ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ಪಕ್ಷದ ನಿಷ್ಠಾವಂತ ನಾಯಕರಾದ ಇವರು ಕೆಲ ದಿನಗಳ ಹಿಂದಷ್ಟೇ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.

ಅವರ ಆತ್ಮಕ್ಕೆ ಶಾಂತಿ ಸಿಗಲಿ, ಈ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಕರುಣಿಸುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

*ವಿಧಿಲೀಲೆ ರಾಜ ವೆಂಕಟಪ್ಪ ನಾಯಕ ಅವರನ್ನು ನಮ್ಮಿಂದ ದೂರ ಮಾಡಿದೆ: ಡಿಸಿಎಂ ಡಿ.ಕೆ. ಶಿವಕುಮಾರ್*

*ಬೆಂಗಳೂರು, ಫೆ. 26:*

“ರಾಜ್ಯಸಭೆ ಚುನಾವಣೆ ಮತದಾನದ ವೇಳೆಗೆ ಬರುತ್ತೇನೆ ಎಂದು ಹೇಳಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರನ್ನು ವಿಧಿ ನಮ್ಮಿಂದ ದೂರ ಮಾಡಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ ಶಾಸಕರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಶಿವಕುಮಾರ್ ಅವರು ಮಾಧ್ಯಮಗಳ ಜತೆ ಮಾತನಾಡಿ ಸಂತಾಪ ಸೂಚಿಸಿದರು.

ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;

“ಇಂದು ನನ್ನ ಜೀವನದ ದುಃಖದ ದಿನ. ಮೂರ್ನಾಲ್ಕು ದಿನಗಳ ಹಿಂದೆ ನಾನು, ಜಿ.ಸಿ ಚಂದ್ರಶೇಖರ್, ಸೋಮಶೇಖರ್ ಅವರ ಜತೆಗೂಡಿ ಆಸ್ಪತ್ರೆಗೆ ಬಂದು ರಾಜಾ ವೆಂಕಟಪ್ಪ ನಾಯಕ ಅವರ ಆರೋಗ್ಯ ವಿಚಾರಿಸಿದ್ದೆ. ಅವರು ಐಸಿಯುನಿಂದ ವಾರ್ಡ್ ಗೆ ಶಿಫ್ಟ್ ಆಗಿದ್ದರು. ಅವರು ಕಾಗದದ ಮೇಲೆ ಬರೆದು ನನ್ನ ಜತೆ ಮಾತನಾಡಿದ್ದರು. ರಾಜ್ಯಸಭೆ ಮತದಾನದ ವೇಳೆಗೆ ಬರುತ್ತೇನೆ ಎಂದು ಹೇಳಿದ್ದರು.

ಅವರು ವಾಪಸ್ ಬರುತ್ತಾರೆ ಎಂದು ಭಾವಿಸಿದ್ದೆ. ಆದರೆ ಇಂದು ಮಧ್ಯಾಹ್ನ ಭಗವಂತ ಅವರನ್ನು ಕರೆದುಕೊಂಡಿದ್ದಾನೆ. ನಾವು ಮಾಡಿದ ಸಮೀಕ್ಷೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಇವರೇ ಮೊದಲ ಅಭ್ಯರ್ಥಿ ಎಂದು ಕೂಡ ವರದಿಯಲ್ಲಿ ವ್ಯಕ್ತವಾಗಿತ್ತು. ವಿಧಿಲೀಲೆ ಅವರನ್ನು ನಮ್ಮಿಂದ ದೂರ ಮಾಡಿದೆ.

ಬಹಳ ಸರಳತೆಯ ನಾಯಕರಾಗಿದ್ದ ಅವರು ಯಾರ ಮನಸ್ಸನ್ನೂ ನೋಯಿಸುತ್ತಿರಲಿಲ್ಲ. ಆಮೂಲಕ ಜನರ ಮನ ಗೆದ್ದಿದ್ದರು. ನನಗೆ ಆತ್ಮೀಯ ಸ್ನೇಹಿತರೂ ಆಗಿದ್ದರು. ಅವರನ್ನು ನಾವು ಕಳೆದುಕೊಂಡಿದ್ದೇವೆ.

ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರು ಹಾಗೂ ಕ್ಷೇತ್ರದ ಜನರಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದರು.

 

 

ಸುರಪುರದ ಶಾಸಕರು, ಬಹುಕಾಲದ ನನ್ನ ರಾಜಕೀಯ ಒಡನಾಡಿ ರಾಜ ವೆಂಕಟಪ್ಪ ನಾಯಕ ಅವರ ನಿಧನದ ಸುದ್ದಿ ಅತೀವ ನೋವುಂಟುಮಾಡಿದೆ. ಮೂರು ದಿನದ ಹಿಂದೆಯಷ್ಟೇ ಅವರನ್ನು ಭೇಟಿಮಾಡಿ ಆರೋಗ್ಯ ವಿಚಾರಿಸಿದ್ದೆ.

ಜನಾನುರಾಗಿ ವ್ಯಕ್ತಿತ್ವದ ರಾಜಾ ವೆಂಕಟಪ್ಪ ನಾಯಕ ಅವರ ಅಗಲಿಕೆ ವೈಯಕ್ತಿಕವಾಗಿ ಮತ್ತು ರಾಜ್ಯ ರಾಜಕಾರಣಕ್ಕೆ ತುಂಬಿಬಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.