ಕಾರವಾರ : ಉತ್ತರಕನ್ನಡ ಜಿಲ್ಲೆ ಅಂಕೋಲಾದ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಹಾಗೂ ಅದರ ಚಾಲಕ ಅರ್ಜುನ್ ಅವರ ಮೃತದೇಹ ಪತ್ತೆಯಾಗಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.ಮಳೆಯಿಂದ ಗುಡ್ಡ ಕುಸಿತ ಆಗಿತ್ತು. ಈ ಸಂದರ್ಭದಲ್ಲಿ ಚಹಾ ಕುಡಿಯಲು ಲಾರಿಯೊಂದಿಗೆ ನಿಂತಿದ್ದ ಅರ್ಜುನ್ ನದಿ ನೀರು ಪಾಲಾಗಿದ್ದಾರೆ. ಈ ಸಂದರ್ಭದಲ್ಲಿ ಆತನ ಹುಡುಕಾಟಕ್ಕೆ ಎಲ್ಲ ಪ್ರಯತ್ನಗಳು ನಡೆದಿದ್ದರೂ ಆತನ ಮೃತದೇಹ ಮಾತ್ರ ಪತ್ತೆಯಾಗಿರಲಿಲ್ಲ. ಕೇರಳ ಸರಕಾರ ಈ ಬಗ್ಗೆ ಮುತುವರ್ಜಿ ವಹಿಸಿ ಕರ್ನಾಟಕದ ಮೇಲೆ ತೀವ್ರ ಒತ್ತಡ ಹೇರಿತ್ತು. ಈ ಪ್ರಕರಣ ಇಡೀ ದೇಶದಲ್ಲೇ ಗಮನ ಸೆಳೆದಿತ್ತು. ಕೇರಳದ ಮಾಧ್ಯಮಗಳು ಸ್ಥಳಕ್ಕೆ ಆಗಮಿಸಿ ವರದಿ ಮಾಡಿದ್ದವು.

ಘಟನೆ ವಿವರ :
ಶಿರೂರು ಗುಡ್ಡ ಕುಸಿತದ ದುರಂತದಲ್ಲಿ ಕಣ್ಮರೆಯಾಗಿದ್ದ ಕೇರಳದ ಭಾರತ್ ಬೆಂಜ್ ಲಾರಿ ಮೂರನೇ ಹಂತದ ಶೋಧ ಕಾರ್ಯಾಚರಣೆಯ ಆರನೇ ದಿನ ಪತ್ತೆಯಾಗಿದ್ದು ಲಾರಿಯಲ್ಲಿ ಅರ್ಜುನ್ ಮೃತ ದೇಹ ಸಹ ಇರುವುದಾಗಿ ತಿಳಿದು ಬಂದಿದೆ.

ನಿವೃತ್ತ ಸೇನಾಧಿಕಾರಿ ಇಂದ್ರಬಾಲನ್ ಅವರು ನೀಡಿದ್ದ ನಿರ್ದೇಶನದಂತೆ ಶಿರೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಲಕ್ಷ್ಮಣ ನಾಯ್ಕ ಅವರ ಅಂಗಡಿ ಇದ್ದ ಸ್ಥಳದಲ್ಲಿ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ ನಡೆಸಿ ಕೇರಳದ ಭಾರತ್ ಬೆಂಜ್ ಲಾರಿಯನ್ನು ಪತ್ತೆ ಹಚ್ಚುವಲ್ಲಿ ಶೋಧ ಕಾರ್ಯ ನಡೆಸುತ್ತಿರುವ ತಂಡ ಯಶಸ್ವಿಯಾಗಿದೆ.

ಶಿರೂರು ಗುಡ್ಡ ಕುಸಿತ ಸಂಭವಿಸಿ ಎರಡು ತಿಂಗಳು ಕಳೆದರೂ ಸುಮಾರು 71 ದಿನ ಕೇರಳದ ಲಾರಿ ಹುಡುಕಾಟ ರಕ್ಷಣಾ ತಂಡಕ್ಕೆ ದೊಡ್ಡ ಸವಾಲಿನ ಕೆಲಸವಾಗಿತ್ತು. ಕೇರಳ ಸರ್ಕಾರದ ಸಚಿವರು, ಶಾಸಕರು, ಸಂಸದರು ಮತ್ತು ಸಾಕಷ್ಟು ಪ್ರಮಾಣದಲ್ಲಿ ಮಾಧ್ಯಮ ಪ್ರತಿನಿಧಿಗಳು ಘಟನಾ ಸ್ಥಳಕ್ಕೆ ಪ್ರತಿ ಬಾರಿಯ ಕಾರ್ಯಾಚರಣೆ ಸಂದರ್ಭದಲ್ಲಿ ಆಗಮಿಸಿ ಕೇರಳದ ಲಾರಿಯ ಪತ್ತೆಗೆ ಒತ್ತಡ ಹಾಕುತ್ತಿರುವುದು ಕಂಡು ಬಂದಿತ್ತು.

ಎರಡು ತಿಂಗಳ ಹಿಂದೆ ಗುಡ್ಡ ಕುಸಿತದ ದುರಂತದ ವೇಳೆ ಕೇರಳ ಕೊಯಿಕೋಡ್ ಲಾರಿ ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಚಹಾ ಕುಡಿಯಲು ಗಂಗಾವಳಿ ನದಿ ತೀರದ ಹೋಟೆಲ್ ಬಳಿ ಲಾರಿ ನಿಲ್ಲಿಸಿದ್ದರು. ಇದೀಗ ಗಂಗಾವಳಿ ನದಿ ಆಳದಲ್ಲಿ ಮಣ್ಣು, ಕಲ್ಲಿನ ಅಡಿ ನುಜ್ಜುಗುಜ್ಜದ ಸ್ಥಿತಿಯಲ್ಲಿ ಭಾರತ ಬೆಂಜ್ ಕಂಪನಿ ಲಾರಿಯೊಂದಿಗೆ ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಇದು ಅರ್ಜುನ್ ಅವರ ಶವ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಖಚಿತಪಡಿಸಿದ್ದಾರೆ. ಜುಲೈ 16ರಂದು ಗುಡ್ಡ ಕುಸಿತ ವೇಳೆ ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿ ಸಹಿತ ಅರ್ಜುನ್ ಕಣ್ಮರೆಯಾಗಿದ್ದರು.

ಲಾರಿ ಮಾಲಿಕ ಮುನಾಫ್ ಅವರು ಇದು ತಮ್ಮ ಲಾರಿ ಎಂದು ಗುರುತಿಸಿದ್ದು ಅರ್ಜುನ್ ಅವರ ಮೃತದೇಹ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ನುಜ್ಜುಗುಜ್ಜಾದ ಲಾರಿಯಲ್ಲಿ ಅರ್ಜುನ್ ಅವರ ಸಂಪೂರ್ಣ ದೇಹ ಸಿಲುಕಿಕೊಂಡಿದೆ. ದೇಹ ಸಂಪೂರ್ಣ ಹೋಗಿ ಮೂಳೆ ದೊರೆತಿದೆ. ಅವರು ಧರಿಸಿದ ಪ್ಯಾಂಟ್ ಮೂಳೆಗೆ ಸಿಲುಕಿತ್ತು. ಮೂಳೆಯನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಲಾಗಿದೆ. ಶಿರೂರು ಗುಡ್ಡ ಕುಸಿತ ದುರಂತದ ಬಳಿಕ ಗಂಗಾವಳಿ ನದಿಯಲ್ಲಿ ಗ್ಯಾಸ್ ಟ್ಯಾಂಕರ್ ಸಹಿತ ಕೆಲವು ವಾಹನಗಳು ಮುಳುಗಿದ್ದವು. ಇದರಲ್ಲಿ ಇತರ ವಾಹನಗಳ ಅವಶೇಷಗಳು ಪತ್ತೆಯಾಗಿದ್ದವು. ಆದರೆ ಅರ್ಜುನ್ ಮತ್ತು ಲಾರಿಯ ಸುಳಿವು ಸಿಕ್ಕಿರಲಿಲ್ಲ. ಕಾರ್ಯಾಚರಣೆಗೆ ಈಶ್ವರ ಮಲ್ಪೆ ಸೇರಿದಂತೆ ಹಲವು ತಂಡ ಕಾರ್ಯಾಚರಣೆ ನಡೆಸಿದವು. ಕಳೆದ ಆರು ದಿನಗಳಿಂದ ನಾನು ಇಲ್ಲೇ ಇದ್ದೇನೆ. ಕಾರ್ಯಾಚರಣೆ ನೋಡುತ್ತಿದ್ದು ಚಾಲಕ ಅರ್ಜುನ್ ಅವರು ಮರಳಿ ಬರುವುದಿಲ್ಲ ಎನ್ನುವುದು ಗೊತ್ತಿತ್ತು. ಆದರೆ ಕೊನೆಯ ಪಕ್ಷ ಅವರ ಅವಶೇಷವಾದರೂ ದೊರೆಯಬಹುದು ಎಂಬ ನಿರೀಕ್ಷೆ ನಮ್ಮದಾಗಿತ್ತು. ಅದು ನಿಜವಾಗಿದೆ ಎಂದು ಅವರ ಭಾವ ಜಿತಿನ್ ತಿಳಿಸಿದ್ದಾರೆ.

ಈ ದುರ್ಘಟನೆಯಲ್ಲಿ ಶಿರೂರಿನ ಜಗನ್ನಾಥ ನಾಯಕ, ಗಂಗೆ ಕೊಳ್ಳದ ಲೋಕೇಶ್ ನಾಯಕ್ ಅವರನ್ನು ಪತ್ತೆ ಮಾಡಬೇಕಿದೆ. ಈ ದುರ್ಘಟನೆಯಲ್ಲಿ ಇದುವರೆಗೆ 9 ಜನ ಮೃತಪಟ್ಟಿದ್ದಾರೆ.