ದೆಹಲಿ:
ಬುಡಕಟ್ಟು ನಾಯಕ ಮತ್ತು ಮಾಜಿ ಕೇಂದ್ರ ಸಚಿವ ವಿಷ್ಣು ದೇವ್ ಸಾಯಿ ಅವರು ಛತ್ತೀಸ್‌ಗಢದ ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿಯ ಆಯ್ಕೆಯಾಗಿದ್ದಾರೆ.

ಅವರು ಇದುವರೆಗೆ ರಾಜ್ಯದಲ್ಲಿ ಪಕ್ಷದ ಅತಿ ಉನ್ನತ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರಿಗೆ ಆಪ್ತರು.
ಸಾಯಿ ಅವರು 2006 ರಲ್ಲಿ ಪಕ್ಷದ ಛತ್ತೀಸ್‌ಗಢ ಘಟಕದ ಅಧ್ಯಕ್ಷರಾಗಿದ್ದರು ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು.
ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿಯೂ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಅವರನ್ನು ಬಿಜೆಪಿ ಕೇಂದ್ರ ನಾಯಕತ್ವವು ಭಾನುವಾರ ಆಯ್ಕೆ ಮಾಡಿದೆ. ಈ ಮೂಲಕ ರಾಜ್ಯದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

ರಾಯ್‌ಪುರದಲ್ಲಿ ಬಿಜೆಪಿಯ ಹೊಸದಾಗಿ ಚುನಾಯಿತರಾದ 54 ಶಾಸಕರ ಪ್ರಮುಖ ಸಭೆಯ ನಂತರ ಛತ್ತೀಸ್‌ಗಢ ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿಯವರನ್ನು ಮುಖ್ಯಮಂತ್ರಿ ಹುದ್ದೆಗೆ ಘೋಷಿಸಲಾಯಿತು.

 

59 ವರ್ಷದ ಸಾಯಿ ಅವರು ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಕುನ್‌ಕುರಿ ಕ್ಷೇತ್ರದಿಂದ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಮೂರು ಬಾರಿ ಛತ್ತೀಸ್‌ಗಢ ಬಿಜೆಪಿ ಅಧ್ಯಕ್ಷರಾಗಿದ್ದರು. (2006ರಿಂದ 2010, 2014ರಲ್ಲಿ ಕೆಲವುತಿಂಗಳು, 2020ರಿಂದ 2022). 2014ರಿಂದ 2019ರವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರದಲ್ಲಿ ಉಕ್ಕು ಸಚಿವರಾಗಿದ್ದರು.

ಛತ್ತೀಸ್‌ಗಢ ಇನ್ನೂ ಮಧ್ಯಪ್ರದೇಶದ ಭಾಗವಾಗಿದ್ದಾಗ ಜನಿಸಿದ್ದರು. ಮಧ್ಯಪ್ರದೇಶದ ತಪ್ಕಾರ ಕ್ಷೇತ್ರದ ಶಾಸಕರಾಗಿ ರಾಜಕೀಯ ಜೀವನ ಆರಂಭಿಸಿದರು. ಪ್ರಸ್ತುತ ಛತ್ತೀಸ್‌ಗಢದ ಬುಡಕಟ್ಟು ಸಮುದಾಯದ ಪ್ರಬಲ ನಾಯಕರಲ್ಲೊಬ್ಬರು. ಬಿಜೆಪಿ ನಾಯಕತ್ವ ಬುಡಕಟ್ಟು ಸಮುದಾಯವನ್ನು ಆದ್ಯತೆಯಾಗಿಸಿಕೊಂಡಿದ್ದು, ವಿಷ್ಣು ದೇವ್‌ ಅವರಿಗೆ ಪಟ್ಟ ಒಲಿದಿದೆ.

ಬುಡಕಟ್ಟು ಸಮುದಾಯದ ಮತಗಳೇ ನಿರ್ಣಾಯಕವಾಗಿದ್ದು, ಮತಗಳು ಪೂರ್ಣ ಪ್ರಮಾಣದಲ್ಲಿ ಬಿಜೆಪಿಯತ್ತ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಲೋಕಸಭಾ ಚುನಾವಣೆಯಲ್ಲೂ ರಾಷ್ಟ್ರ ಮಟ್ಟದಲ್ಲಿ ಬುಡಕಟ್ಟು ಸಮುದಾಯದ ಮತಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಹುದ್ದೆ ನೀಡಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ.

ವಿಷ್ಣು ದೇವ ಸಾಯಿ ಅವರು ಕುಂಕುರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 87,604 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿಯ ಮಾಜಿ ರಾಜ್ಯ ಮುಖ್ಯಸ್ಥರಾದ ದೇವ್ ಸಾಯಿ ಅವರು ಬುಡಕಟ್ಟು ಮುಖವನ್ನು ಆಯ್ಕೆ ಮಾಡಿದರೆ ಮುಖ್ಯಮಂತ್ರಿ ಹುದ್ದೆಗೆ ಪಕ್ಷದ ಮೊದಲ ಆಯ್ಕೆಯಾಗುತ್ತಾರೆ ಎಂದು ಊಹಿಸಲಾಗಿತ್ತು.