ಬೆಂಗಳೂರು : ಕೊನೆಗೂ ಈ ಸಲ ಕನ್ನಡಮ್ಮನ ನೊಗ ಹೊರುವ ಸಾಹಿತಿ ಹೆಸರು ಘೋಷಣೆಯಾಗಿದೆ. ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಗೊ ರು ಚನ್ನಬಸಪ್ಪ(ಗೊ ರು ಚ) ಆಯ್ಕೆಯಾಗಿದ್ದಾರೆ.

ಮಂಡ್ಯದಲ್ಲಿ ಇಂದು (ನ.20) ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ ಗೊ ರು ಚನ್ನಬಸಪ್ಪ ಅವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಜನಪದ ತಜ್ಞರು, ವಿದ್ವಾಂಸರು ಹಾಗೂ ಹಿರಿಯ ಸಾಹಿತಿಗಳಾದ ಗೊ ರು ಚ ಅವರು ಈ ಹಿಂದೆ 1992 ರಿಂದ 1995ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅವರು ಅಧ್ಯಕ್ಷರಾಗಿದ್ದಾಗಲೇ 1994ರಲ್ಲಿ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದಿತ್ತು.

ಮಹಾದೇವಿ, ಸದಾಶಿವ ಶಿವಾಚಾರ್ಯ, ಕರ್ನಾಟಕ ಪ್ರಗತಿಪಥ, ಚೆಲುವಾಂಬಿಕೆ, ಕುನಾಲ, ಸಾಕ್ಷಿ ಕಲ್ಲು, ಬೆಳ್ಳಕ್ಕಿ ಹಿಂಡು ಬೆದರ್ಯಾವೊ, ಬಾಗೂರು ನಾಗಮ್ಮ, ಗ್ರಾಮ ಗೀತೆಗಳು, ವಿಭೂತಿ, ಕರ್ನಾಟಕ ಜನಪದ ಕಲೆಗಳು, ಬಾಗೂರು ನಾಗಮ್ಮ, ಗ್ರಾಮಗೀತೆಗಳು, ಕರ್ನಾಟಕ ಜನಪದ ಕಲೆಗಳು, ಹೊನ್ನ ಬಿತ್ತೇವು ನೆಲಕೆಲ್ಲ ಗೊ ರು ಚನ್ನಬಸಪ್ಪ ಅವರ ಪ್ರಮುಖ ಕೃತಿಗಳು. ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ಗೊ ರು ಚ ಮಹತ್ವದ ಪಾತ್ರ ವಹಿಸಿದ್ದರು.

ಗೊ ರು ಚ ಅವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸುದೀರ್ಘ ಕಾಲ ಕಾರ್ಯನಿರ್ವಹಿಸಿದ್ದರು. ‘ಜಾನಪದ ಜಗತ್ತು’, ‘ಪಂಚಾಯತ್ ರಾಜ್ಯ’, ‘ಕನ್ನಡ ಸಾಹಿತ್ಯ ಪರಿಷತ್ತಿನ ಪತ್ರಿಕೆ’ ಮೊದಲಾದ ಪತ್ರಿಕೆಗಳಿಗೆ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.

ಗೊ ರು ಚನ್ನಬಸಪ್ಪ ಅವರು 18 ಮೇ 1930ರಲ್ಲಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗೊಂಡೇದಹಳ್ಳಿಯಲ್ಲಿ ರುದ್ರಪ್ಪಗೌಡ ಮತ್ತು ಅಕ್ಕಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಇವರಿಗೆ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.

87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಡಿಸೆಂಬರ್ 20, 21 ಮತ್ತು 22ರಂದು ಮಂಡ್ಯದ ಸ್ಯಾಂಜೋ ಆಸ್ಪತ್ರೆ ಹಿಂಭಾಗದ ಮೈದಾನದಲ್ಲಿ ನಡೆಯಲಿದೆ.