ಮುನಿಯಪ್ಪ, ರಮೇಶ್‌ ಕುಮಾರ್‌ ಬಣಗಳ ಹಗ್ಗ ಜಗ್ಗಾಟದಿಂದ ಕಗ್ಗಂಟಾಗಿದ್ದ ಕೋಲಾರ ಲೋಕಸಭೆ ಕ್ಷೇತ್ರಕ್ಕೆ ಕೋಲಾರ ಪಾಲಿಕೆಯ ಮಾಜಿ ಮೇಯರ್ ವಿಜಯಕುಮಾರ್ ಪುತ್ರ ಕೆ.ವಿ. ಗೌತಮ್‌ ಅವರನ್ನು ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಹೇಳಿಕೆ ಬಿಡುಗಡೆ ಮಾಡಿದ್ದು, ಕೋಲಾರ ಕ್ಷೇತ್ರದಿಂದ ಕೆ.ವಿ. ಗೌತಮ್‌ ಅವರನ್ನು ಕಣಕ್ಕಿಳಿಸಲು ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಕರ್ನಾಟಕದ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ. ಬಾಕಿ ಇದ್ದ ನಾಲ್ಕು ಕ್ಷೇತ್ರಗಳ ಪೈಕಿ ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರಕ್ಕೆ ಶುಕ್ರವಾರ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದ ಕಾಂಗ್ರೆಸ್‌ಗೆ ಕೋಲಾರದಲ್ಲಿ ಮಾತ್ರ ಸ್ಪಷ್ಟ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಗೌತಮ್ ಬೆಂಗಳೂರು ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬೆಂಗಳೂರು : ತೀವ್ರ ಕೋಲಾಹಲಕ್ಕೆ ಕಾರಣವಾಗಿರುವ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಇದೀಗ ಹೊಸ ತಿರುವು ಪಡೆದುಕೊಂಡಿದ್ದು ಇಬ್ಬರ ನಡುವಿನ ಜಗಳದಲ್ಲಿ ಮೂರನೇ ವ್ಯಕ್ತಿಗೆ ಲಾಭವಾಗಿದೆ. ಮಾಜಿ ಮೇಯರ್ ವಿಜಯಕುಮಾರ್ ಪುತ್ರ ಗೌತಮ್ ಕುಮಾರ್ ಅವರ ಹೆಸರು ಮುಂಚೂಣಿಯಲ್ಲಿದ್ದು ಅವರ ಆಯ್ಕೆ ಅಂತಿಮವಾಗಿದೆ. ಅದರ ಟಿಕೆಟ್ ಗೆ

ಸಚಿವ ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಈ ನಿಟ್ಟಿನಲ್ಲಿ ಮಧ್ಯ ಪ್ರವೇಶ ಮಾಡಿದ ಮುನಿಯಪ್ಪ ತಮ್ಮ ಅಳಿಯ ಚಿಕ್ಕ ಪೆದ್ದಣ್ಣ ಅವರಿಗೆ ಟಿಕೆಟ್ ಕೊಡಿಸಲು ಬಲವಾದ ಲಾಬಿ ನಡೆಸಿದ್ದರು. ಆದರೆ ರಮೇಶ್ ಕುಮಾರ್ ಬಣ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಕೆಲ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಹೈಡ್ರಾಮಾ ನಡೆಸಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿದ್ದರು. ಇದೀಗ ಕೊನೆಗೂ ತೂಗಿ ಅಳೆದಿರುವ ಕಾಂಗ್ರೆಸ್ ಪಕ್ಷ ಗೌತಮ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.