ಲಂಡನ್‌ : ಸಾರ್ವತ್ರಿಕ ಚುನಾವಣೆಯಲ್ಲಿ ಬ್ರಿಟನ್‌ ಮತದಾರರು ಐತಿಹಾಸಿಕ ತೀರ್ಪು ನೀಡಿದ್ದಾರೆ. ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷವು 14 ವರ್ಷಗಳ ನಂತರ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷದ ವಿರುದ್ಧ ಮೂಲಕ ಪ್ರಚಂಡ ಗೆಲುವು ಸಾಧಿಸಿ ಅಧಿಕಾರಕ್ಕೇರಿದೆ. ಭಾರತೀಯ ಮೂಲದ ರಾಜಕಾರಣಿಯಾದ ಸುನಕ್ ಅವರ ಕನ್ಸರ್ವೇಟಿವ್‌ ಪಕ್ಷವು ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿದ್ದರೂ, ಬ್ರಿಟನ್‌ನ ಭಾರತೀಯ ಸಮುದಾಯಕ್ಕೆ ಸಂತಸ ಪಡುವಂತಹ ಫಲಿತಾಂಶ ಬಂದಿದೆ. 2024 ರ ಬ್ರಿಟನ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಮೂಲದ 26 ಅಭ್ಯರ್ಥಿಗಳು ವಿಜಯಶಾಲಿಯಾಗಿ ಸಂಸತ್ತು ಪ್ರವೇಶಿಸಿದ್ದಾರೆ. ಪ್ರಸ್ತುತ ಹೌಸ್ ಆಫ್ ಕಾಮನ್ಸ್ ನಲ್ಲಿ 15 ಭಾರತೀಯ ಮೂಲದ ಸಂಸದರು ಇದ್ದರು. ಈ ಚುನಾವಣೆಯಲ್ಲಿ ಭಾರತೀಯ ಮೂಲದ ಅಭ್ಯರ್ಥಿಗಳು ಉತ್ತಮ ಪ್ರದರ್ಶನ ತೋರಿದ್ದಾರೆ.

2021 ರ ಜನಗಣತಿಯ ಪ್ರಕಾರ, ಯುನೈಟೆಡ್‌ ಕಿಂಗ್ಡಂನಲ್ಲಿ ತಮ್ಮನ್ನು ತಾವು ಹಿಂದೂಗಳು ಎಂದು ಗುರುತಿಸಿಕೊಳ್ಳುವ ಒಂದು ಮಿಲಿಯನ್ ಜನರಿದ್ದಾರೆ ಮತ್ತು ಇದು ದೇಶದ ಮೂರನೇ ಅತಿದೊಡ್ಡ ಧಾರ್ಮಿಕ ಗುಂಪಾಗಿದೆ.
2019 ರ ಚುನಾವಣೆಯಲ್ಲಿ ಭಾರತ-ವಿರೋಧಿ ನಿಲುವಿನಿಂದಾಗಿ ಭಾರತೀಯ ಮೂಲದ ಮತದಾರರಿಂದ ತಿರಸ್ಕರಿಸಲ್ಪಟ್ಟಿದ್ದ ಲೇಬರ್ ಪಕ್ಷವು ಕೀರ್ ಸ್ಟಾರ್ಮರ್ ಅಡಿಯಲ್ಲಿ ಭಾರತದ ಬಗ್ಗೆ ತನ್ನ ನಿಲುವುನ್ನು ಬದಲಿಸಿತು. ಈ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯ ಭಾರತೀಯ ಮೂಲದ ಅಭ್ಯರ್ಥಿಗಳನ್ನು ಲೇಬರ್‌ ಪಕ್ಷವು ಕಣಕ್ಕಿಳಿಸಿತ್ತು. ಅದು ಫಲ ನೀಡಿದೆ.
ಕನ್ಸರ್ವೇಟಿವ್ ಮತ್ತು ಲೇಬರ್ ಎರಡೂ ಪಕ್ಷಗಳಿಂದ ಹೌಸ್ ಆಫ್ ಕಾಮನ್ಸ್‌ಗೆ ಪ್ರವೇಶಿಸಿದ ಬ್ರಿಟಿಷ್-ಭಾರತೀಯ ಸಂಸದರು ಮತ್ತು ಅವರ ಸ್ಥಾನಗಳ ವಿವರಗಳು ಇಲ್ಲಿವೆ. ಚುನಾಯಿತ ಸಂಸದರು ಕೇರಳದಿಂದ ಪಂಜಾಬ್‌ವರೆಗಿನ ಭಾರತೀಯ ರಾಜ್ಯಗಳ ವ್ಯಾಪ್ತಿಯಲ್ಲಿ ತಮ್ಮ ಬೇರುಗಳನ್ನು ಹೊಂದಿದ್ದಾರೆ.
ರಿಷಿ ಸುನಕ್ : ಲೇಬರ್‌ ಪಕ್ಷದ ಮುಂದೆ ಒಟ್ಟಾರೆ ಸೋಲಿನ ಹೊರತಾಗಿಯೂ ಅಧಿಕಾರ ಕಳೆದುಕೊಂಡ ಪ್ರಧಾನಿ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕ ರಿಷಿ ಸುನಕ್ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಉತ್ತರ ಇಂಗ್ಲೆಂಡ್‌ನ ರಿಚ್‌ಮಂಡ್ ಮತ್ತು ನಾರ್ತಲರ್ಟನ್ ಸ್ಥಾನದಲ್ಲಿ ಪುನರಾಯ್ಕೆಯಾಗಿದ್ದಾರೆ. ಅವರ ಪತ್ನಿ ಅಕ್ಷತಾ ಮೂರ್ತಿ ಕರ್ನಾಟಕದ ಸುಧಾ ಮೂರ್ತಿ ಹಾಗೂ ಇನ್ಫೊಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ದಂಪತಿಯ ಪುತ್ರಿ.
ಪ್ರೀತಿ ಪಟೇಲ್: ಕನ್ಸರ್ವೇಟಿವ್ ಪಕ್ಷದ ಪ್ರೀತಿ ಪಟೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ಎಸ್ಸೆಕ್ಸ್‌ನಲ್ಲಿ ವಿಥಮ್ ಸ್ಥಾನದಿಂದ ಪುನರಾಯ್ಕೆಯಾಗಿದ್ದಾರೆ.
ಪಟೇಲ್ ಅವರು ಗೃಹ ಇಲಾಖೆಯ ರಾಜ್ಯ ಕಾರ್ಯದರ್ಶಿಯಾಗಿ 24 ಜುಲೈ 2019 ರಿಂದ 6 ಸೆಪ್ಟೆಂಬರ್ 2022 ರವರೆಗೆ ಸೇವೆ ಸಲ್ಲಿಸಿದರು ಮತ್ತು ಮೇ 2010 ರಿಂದ ವಿಥಮ್ ಕ್ಷೇತ್ರದಿಂದ ಸಂಸತ್ತಿಗೆ ಪುನಯ್ಕೆಯಾಗುತ್ತ ಬಂದ ಕನ್ಸರ್ವೇಟಿವ್ ಪಕ್ಷದ ಸದಸ್ಯರಾಗಿದ್ದಾರೆ.

ಶಿವಾನಿ ರಾಜಾ : ಕನ್ಸರ್ವೇಟಿವ್ ಅಭ್ಯರ್ಥಿ ಶಿವಾನಿ ರಾಜಾ ಲೀಸೆಸ್ಟರ್ ಪೂರ್ವ ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ಲೀಸೆಸ್ಟರ್‌ನಲ್ಲಿ ಜನಿಸಿದ ಅವರು
ಡಿ ಮಾಂಟ್‌ಫೋರ್ಟ್ ವಿಶ್ವವಿದ್ಯಾಲಯದಿಂದ ಸೌಂದರ್ಯವರ್ಧಕ ವಿಜ್ಞಾನದಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದಿದ್ದಾರೆ.
ಸುಯೆಲ್ಲಾ ಬ್ರೆವರ್‌ಮನ್ : ಕನ್ಸರ್ವೇಟಿವ್ ಪಕ್ಷದ ಸದಸ್ಯೆ ಮತ್ತು ಭಾರತೀಯ ಮೂಲದ ರಾಜಕಾರಣಿ ಸುಯೆಲ್ಲಾ ಬ್ರೆವರ್‌ಮನ್ ಅವರು ಫೇರ್‌ಹ್ಯಾಮ್ ಮತ್ತು ವಾಟರ್‌ಲೂವಿಲ್ಲೆ ಸೀಟಿನಲ್ಲಿ ಜಯ ಸಾಧಿಸಿದ್ದಾರೆ.
ಸುನಕ್ ಅವರ ನಾಯಕತ್ವದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು, ಆದರೆ ಪ್ಯಾಲೆಸ್ಟೈನ್ ಪರ ಪ್ರತಿಭಟನಾಕಾರರೊಂದಿಗೆ ಮೆಟ್ರೋಪಾಲಿಟನ್ ಪೊಲೀಸರು ತುಂಬಾ ಮೃದುವಾಗಿರುತ್ತಾರೆ ಎಂಬ ಬ್ರೇವರ್‌ಮನ್ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ತರುವಾಯ ಅವರು ತಮ್ಮ ಸಚಿವ ಸ್ಥಾನಕಳೆದುಕೊಂಡರು. ಬ್ರಾವರ್‌ಮನ್ ಅವರು 2015 ರಿಂದ 2024 ರವರೆಗೆ ಫೇರ್‌ಹ್ಯಾಮ್‌ನಿಂದ ಸಂಸದರಾಗಿದ್ದರು. ಈಗ ಅಲ್ಲಿಂದಲೇ ಪುನರಾಯ್ಕೆಯಾಗಿದ್ದಾರೆ.
ಗಗನ್ ಮೊಹಿಂದ್ರಾ : ಕನ್ಸರ್ವೇಟಿವ್ ಪಕ್ಷದ ಗಗನ್ ಮೊಹಿಂದ್ರಾ ಅವರು ಸೌತ್ ವೆಸ್ಟ್ ಹರ್ಟ್‌ಫೋರ್ಡ್‌ಶೈರ್‌ನಿಂದ ಮರು ಆಯ್ಕೆಯಾಗಿದ್ದಾರೆ. ಅವರು 2002 ರಲ್ಲಿ ಕನ್ಸರ್ವೇಟಿವ್ ಪಕ್ಷಕ್ಕೆ ಸೇರಿದರು. ಅವರ ತಂದೆ-ತಾಯಿ ಪಂಜಾಬ್‌ನಿಂದ ಬಂದವರು, ಅವರು ಗಗನ್ ಮೊಹಿಂದ್ರಾ ಜನಿಸುವ ಮೊದಲು ಯುನೈಟೆಡ್ ಕಿಂಗ್‌ಡಮ್‌ಗೆ ವಲಸೆ ಬಂದರು. ಅವರ ಅಜ್ಜ ಬ್ರಿಟಿಷ್ ಭಾರತೀಯ ಸೇನೆಯ ಸದಸ್ಯರಾಗಿದ್ದರು.
ಕ್ಲೇರ್ ಕುಟಿನ್ಹೋ : ಪೂರ್ವ ಸರ್ರೆ ಕ್ಷೇತ್ರದಲ್ಲಿ ಕನ್ಸರ್ವೇಟಿವ್ ಪಕ್ಷದಿಂದ ಕ್ಲೇರ್ ಕುಟಿನ್ಹೋ ಗೆಲುವು ಸಾಧಿಸಿದ್ದಾರೆ. ಅವರು 35.6% ಮತಗಳನ್ನು ಪಡೆದರು, ಒಟ್ಟು 17,502 ಮತಗಳನ್ನು ಪಡೆದರು, ಲೇಬರ್ ಪಕ್ಷದ ಥಾಮಸ್ ಬೋವೆಲ್ 10,052 ಮತಗಳನ್ನು ಪಡೆದರು.

ಲೇಬರ್ ಪಕ್ಷದಿಂದ ಗರಿಷ್ಠ ಸಂಖ್ಯೆಯಲ್ಲಿ ಭಾರತೀಯ ಮೂಲದ ಅಭ್ಯರ್ಥಿಗಳ ಗೆಲುವು
ಕನಿಷ್ಕ ನಾರಾಯಣ : ಲೇಬರ್ ಪಕ್ಷದ ಅಭ್ಯರ್ಥಿ ಕನಿಷ್ಕ ನಾರಾಯಣ ಅವರು ಮಾಜಿ ವೆಲ್ಷ್ ಕಾರ್ಯದರ್ಶಿ ಅಲುನ್ ಕೈರ್ನ್ಸ್ ಅವರನ್ನು ಸೋಲಿಸಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಅಲ್ಪಸಂಖ್ಯಾತ ಜನಾಂಗೀಯ ಹಿನ್ನೆಲೆಯಿಂದ ಬಂದ ವೇಲ್ಸ್‌ನ ಮೊದಲ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕನಿಷ್ಕ ನಾರಾಯಣ ಅವರು, ತಮ್ಮ 12 ನೇ ವಯಸ್ಸಿನಲ್ಲಿ ಭಾರತದಿಂದ ಕಾರ್ಡಿಫ್‌ಗೆ ಸ್ಥಳಾಂತರಗೊಂಡವರು. ಅವರು ಆಕ್ಸ್‌ಫರ್ಡ್ ಮತ್ತು ಸ್ಟ್ಯಾನ್‌ಫೋರ್ಡ್‌ನಲ್ಲಿ ಅಧ್ಯಯನ ಮಾಡಿದ್ದಾರೆ. ಅವರ ನಾಗರಿಕ ಸೇವಾ ವೃತ್ತಿಜೀವನದಲ್ಲಿ ಡೇವಿಡ್ ಕ್ಯಾಮರೂನ್ ಅಡಿಯಲ್ಲಿ ಕ್ಯಾಬಿನೆಟ್ ಆಫೀಸ್ ಮತ್ತು ಲಿಜ್ ಟ್ರಸ್ ಅಡಿಯಲ್ಲಿ ಪರಿಸರ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದರು. ಕನಿಷ್ಕ ನಾರಾಯಣ ಅವರು ಖಾಸಗಿ ವಲಯದ ಅನುಭವ ಹೊಂದಿದ್ದಾರೆ ಹಾಗೂ ವ್ಯವಹಾರಗಳಿಗೆ ಆರ್ಥಿಕ ಸಲಹೆ ನೀಡುತ್ತಾರೆ.
ಸೀಮಾ ಮಲ್ಹೋತ್ರಾ : ಸೀಮಾ ಮಲ್ಹೋತ್ರಾ ಅವರು ತಮ್ಮ ಫೆಲ್ತಾಮ್ ಮತ್ತು ಹೆಸ್ಟನ್ ಕ್ಷೇತ್ರದಲ್ಲಿ ಸುಲಭದ ಜಯಗಳಿಸಿದ್ದಾರೆ. ಅವರು 2011 ರಿಂದ ಫೆಲ್ತಮ್ ಮತ್ತು ಹೆಸ್ಟನ್‌ ಸಂಸತ್ ಸದಸ್ಯರಾಗಿದ್ದಾರೆ. ಅವರು ಅಪರಾಧ ಮತ್ತು ಸಮಾಜ ವಿರೋಧಿ ನಡವಳಿಕೆಯನ್ನು ನಿಭಾಯಿಸುವಲ್ಲಿ ಪೊಲೀಸ್ ಮತ್ತು ಸಮುದಾಯ ಗುಂಪುಗಳೊಂದಿಗೆ ಕೆಲಸ ಮಾಡಿದ್ದಾರೆ.
ವ್ಯಾಲೆರಿ ವಾಜ್ : ಲೇಬರ್ ಪಕ್ಷದ ರಾಜಕಾರಣಿ ಮತ್ತು ಸಾಲಿಸಿಟರ್ ಆಗಿರುವ ವ್ಯಾಲೆರಿ ವಾಜ್ ಅವರು ವಾಲ್ಸಾಲ್ ಮತ್ತು ಬ್ಲೋಕ್ಸ್‌ವಿಚ್‌ನಲ್ಲಿ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಅವರು 2010 ರಿಂದ ವಾಲ್ಸಾಲ್ ಸೌತ್‌ನ ಸಂಸತ್ ಸದಸ್ಯರಾಗಿದ್ದಾರೆ.
ನಾಡಿಯಾ ವಿಟ್ಟೋಮ್ : ಭಾರತೀಯ ಮೂಲದ ಲೇಬರ್ ಪಕ್ಷದ ರಾಜಕಾರಣಿ ನಾಡಿಯಾ ವಿಟ್ಟೋಮ್ ಅವರು ನಾಟಿಂಗ್‌ಹ್ಯಾಮ್ ಪೂರ್ವ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಅವರು 2019 ರ ಯುನೈಟೆಡ್ ಕಿಂಗ್‌ಡಮ್ ಸಾರ್ವತ್ರಿಕ ಚುನಾವಣೆಯಲ್ಲಿ ನಾಟಿಂಗ್‌ಹ್ಯಾಮ್ ಪೂರ್ವ ಕ್ಷೇತ್ರದಲ್ಲಿ ಮೊದಲ ಬಾರಿಗೆ ಜಯಗಳಿಸಿದರು. ಅವರು 23 ನೇ ವಯಸ್ಸಿನಲ್ಲಿ ಚುನಾಯಿತರಾದರು.

ಪ್ರೀತ್ ಕೌರ್ : ಲೇಬರ್ ಪಾರ್ಟಿಯ ಪ್ರೀತ್ ಕೌರ್ ಗಿಲ್ ಬರ್ಮಿಂಗ್ಹ್ಯಾಮ್ ಎಡ್ಜ್‌ಬಾಸ್ಟನ್ ಸ್ಥಾನದಿಂದ ಮರು ಆಯ್ಕೆಯಾದರು. ಅವರು ಸಂಸತ್ತಿನ ಮೊದಲ ಬ್ರಿಟಿಷ್ ಸಿಖ್ ಮಹಿಳಾ ಸದಸ್ಯರಾಗಿದ್ದಾರೆ. ವೈ ಕೇರ್ ಮತ್ತು ಪಬ್ಲಿಕ್‌ ಹೆಲ್ತ್‌ ನಲ್ಲಿ ಕಾರ್ಯನಿರ್ವಹಿಸಿದ್ದಾರೆ.
ತನ್ಮನ್ಜೀತ್ ಸಿಂಗ್ ಧೇಸಿ : ಲೇಬರ್ ಪಾರ್ಟಿಯಿಂದ ತನ್ಮನ್ಜೀತ್ ಸಿಂಗ್ ಧೇಸಿ ಸ್ಲೋದಿಂದ ಸಂಸದರಾಗಿ ಮರು ಆಯ್ಕೆಯಾದರು. ಅವರು ಮೊದಲು 2017 ರ ಸಾರ್ವತ್ರಿಕ ಚುನಾವಣೆಯಲ್ಲಿ 17,000 ಬಹುಮತದೊಂದಿಗೆ ಸ್ಲೋ ಸ್ಥಾನವನ್ನು ಗೆದ್ದರು ಮತ್ತು 2019 ರಲ್ಲಿ ಮರು ಆಯ್ಕೆಯಾದರು. ಯಾವುದೇ ಯುರೋಪಿಯನ್ ಪಾರ್ಲಿಮೆಂಟ್‌ ಗೆ ಆಯ್ಕೆಯಾದ ಧೇಸಿ ಮೊದಲ ಪೇಟಧಾರಿ ಸಿಖ್. ಬರ್ಕ್‌ಷೈರ್‌ನಲ್ಲಿ ಜನಿಸಿದ ಅವರು ನಂತರ ಭಾರತಕ್ಕೆ ಸ್ಥಳಾಂತರಗೊಂಡಿದ್ದರು. ನಂತರ ಒಂಬತ್ತನೇ ವಯಸ್ಸಿನಲ್ಲಿ ಮತ್ತೆ ಬ್ರಿಟನ್‌ಗೆ ಹಿಂದಿರುಗುವ ಮೊದಲು ಭಾರತದ ಪಂಜಾಬ್‌ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದಾರೆ.
ಸೋಜನ್ ಜೋಸೆಫ್ : ಲೇಬರ್ ಪಕ್ಷದ ಅಭ್ಯರ್ಥಿ ಸೋಜನ್ ಜೋಸೆಫ್ ಅವರು ಆಶ್‌ಫೋರ್ಡ್ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದಿದ್ದಾರೆ, ಕೊಟ್ಟಾಯಂನಲ್ಲಿರುವ ಅವರ ನಿವಾಸದಲ್ಲಿ ಸಂಭ್ರಮಾಚರಣೆ ನಡೆಸಿದರು. ಅವರು ಬ್ರಿಟಿಷ್ ಸಂಸತ್ತಿಗೆ ಆಯ್ಕೆಯಾದ ಮೊದಲ ಕೇರಳೀಯರಾಗಿದ್ದಾರೆ ಎಂದು ವರದಿಯಾಗಿದೆ.
ದಶಕಗಳಿಂದ ಸಾಂಪ್ರದಾಯಿಕವಾಗಿ ಕನ್ಸರ್ವೇಟಿವ್ ಪಕ್ಷದ ಕ್ಷೇತ್ರವಾದ ಕೆಂಟ್‌ನ ಆಶ್‌ಫೋರ್ಡ್‌ನಲ್ಲಿ ಸೋಜನ್ 1779 ಮತಗಳಿಂದ ಡೇಮಿಯನ್ ಗ್ರೀನ್ ಅವರನ್ನು ಸೋಲಿಸಿದ್ದಾರೆ. ಅವರು ಪ್ರಸ್ತುತ ಐಲ್ಸ್‌ಫೋರ್ಡ್ ಮತ್ತು ಈಸ್ಟ್ ಸ್ಟೋರ್ ವಾರ್ಡ್ ಅನ್ನು ಪ್ರತಿನಿಧಿಸುವ ಬರೋ ಕೌನ್ಸಿಲರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ (NHS) ಮಾನಸಿಕ ಆರೋಗ್ಯ ನರ್ಸ್‌ ಆಗಿ ಕೆಲಸ ಮಾಡಿದ್ದಾರೆ.
ಕೊಟ್ಟಾಯಂ ಮನ್ನನಂ ಕೆ ಇ ಕಾಲೇಜಿನಲ್ಲಿ ಪದವಿ ಪಡೆದಿರುವ ಸೋಜನ್, ಬೆಂಗಳೂರಿನಲ್ಲಿ ನರ್ಸಿಂಗ್ ವ್ಯಾಸಂಗ ಮುಗಿಸಿ 2001ರಲ್ಲಿ ಯುಕೆಗೆ ವಲಸೆ ಬಂದರು. ಅವರು ಬ್ರಿಟನ್‌ನಲ್ಲಿ ತಮ್ಮ ನರ್ಸಿಂಗ್ ವೃತ್ತಿಯನ್ನು ಪ್ರಾರಂಭಿಸಿದರು. ಸೋಜನ್ ಅವರ ಪತ್ನಿ ಬ್ರೈಟಾ ಜೋಸೆಫ್ ಕೂಡ ನರ್ಸ್ ಆಗಿದ್ದಾರೆ.

ಲಿಸಾ ನಂದಿ : ಲೇಬರ್ ಪಾರ್ಟಿಯಿಂದ ಲಿಸಾ ನಂದಿ ಅವರು 2010 ರಿಂದ ಪ್ರತಿನಿಧಿಸುವ ವಿಗಾನ್ ಸ್ಥಾನದಿಂದ ಮರು ಆಯ್ಕೆಯಾಗಿದ್ದಾರೆ.
ಆಕೆಯ ತಂದೆ, ದೀಪಕ್ ನಂದಿ, ಕೋಲ್ಕತ್ತಾದಲ್ಲಿ ಜನಿಸಿದ ಮಾರ್ಕ್ಸ್‌ವಾದಿ ರಾಜಕಾರಣಿ, ಜನಾಂಗೀಯ ಸಮಾನತೆ ಮತ್ತು ಲಿಂಗ ಸಮಾನತೆಯನ್ನು ಪ್ರತಿಪಾದಿಸಿ ಅದಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟವರು.
ನವೆಂದು ಮಿಶ್ರಾ : ಲೇಬರ್ ಪಾರ್ಟಿಯಿಂದ ನವೆಂದು ಮಿಶ್ರಾ ಅವರು ಸ್ಟಾಕ್‌ಪೋರ್ಟ್ ಸ್ಥಾನದಲ್ಲಿ ಪುನಃ ಗೆಲುವು ಸಾಧಿಸಿದ್ದಾರೆ. ಅವರು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಟಾಕ್‌ಪೋರ್ಟ್‌ನ ಸಂಸತ್ ಸದಸ್ಯರಾಗಿ ಆಯ್ಕೆಯಾದರು.
ಮಿಶ್ರಾ ಅವರ ತಾಯಿ ಉತ್ತರ ಪ್ರದೇಶದ ಗೋರಖಪುರದವರು ಮತ್ತು ಅವರ ತಂದೆ ಕಾನ್ಪುರದವರು. ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಮಿಶ್ರಾ ಅವರು ಸ್ಟಾಕ್‌ಪೋರ್ಟ್‌ನಲ್ಲಿ ಟ್ರೇಡ್ ಯೂನಿಸ್ಟ್ ಆಗಿ ಕೆಲಸ ಮಾಡಿದರು ಮತ್ತು ನಂತರ ಯುನಿಸನ್ ಟ್ರೇಡ್ ಯೂನಿಯನ್‌ಗೆ ಸಂಘಟಕರಾದರು.
ಸತ್ವಿರ್ ಕೌರ್ : ಲೇಬರ್ ಪಾರ್ಟಿಯಿಂದ ಸತ್ವಿರ್ ಕೌರ್ ಅವರು ಸೌತಾಂಪ್ಟನ್ ಟೆಸ್ಟ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. ಅವರು 2011ರಲ್ಲಿ ಲೇಬರ್ ಪಕ್ಷಕ್ಕೆ ಸೇರಿದರು.
ಜಾಸ್ ಅಥ್ವಾಲ್ (ಇಲ್ಫೋರ್ಡ್ ಸೌತ್), ಬ್ಯಾಗಿ ಶಂಕರ್ (ಡರ್ಬಿ ಸೌತ್), ಹರ್‌ಪ್ರೀತ್ ಉಪ್ಪಲ್ (ಹಡರ್ಸ್‌ಫೀಲ್ಡ್), ವಾರಿಂದರ್ ಜಸ್ (ವಾಲ್ವರ್‌ಹ್ಯಾಂಪ್ಟನ್ ವೆಸ್ಟ್), ಗುರಿಂದರ್ ಜೋಸನ್ (ಸ್ಮೆಥ್‌ವಿಕ್), ಸೋನಿಯಾ ಕುಮಾರ್ (ಡಡ್ಲಿ), ಸುರೀನಾ ಬ್ರಾಕೆನ್‌ಬ್ರಿಡ್ಜ್ (ವಾಲ್ವರ್‌ಹ್ಯಾಂಪ್ಟನ್ ನಾರ್ತ್ ಈಸ್ಟ್), ಕಿರಿತ್ ಎಂಟ್ವಿಸ್ಲ್ (ಬೋಲ್ಟನ್ ನಾರ್ತ್ ಈಸ್ಟ್), ಮತ್ತು ಜೀವನ್ ಸಂಧರ್ (ಲೌಬರೋ) ಸೇರಿದಂತೆ ಬ್ರಿಟೀಷ್-ಭಾರತೀಯರಲ್ಲಿ ಹಲವಾರು ಹೊಸಬರು ಲೇಬರ್ ಪಾರ್ಟಿಯಲ್ಲಿ ಗೆಲುವು ಸಾಧಿಸಿದ್ದಾರೆ.
ಲಿಬರಲ್ ಡೆಮೊಕ್ರಾಟ್ಸ್ ಪಾರ್ಟಿಯ ಬಾರತೀಯ ಮೂಲದ ಮುನಿರಾ ವಿಲ್ಸನ್ ತನ್ನ ಟ್ವಿಕನ್‌ಹ್ಯಾಮ್ ಕ್ಷೇತ್ರದಲ್ಲಿ ಪುನರಾಯ್ಕೆಯಾಗಿದ್ದಾರೆ. ಅವರು 2019ರಂದಲೂ ಟ್ವಿಕನ್‌ಹ್ಯಾಮ್‌ನ ಸಂಸತ್ ಸದಸ್ಯರಾಗಿದ್ದಾರೆ.