ಬೆಳಗಾವಿ: ಆಷಾಢ ಏಕಾದಶಿ ನಿಮಿತ್ತ ಪಂಢರಾಪುರದಲ್ಲಿನ ಪ್ರಸಿದ್ಧ ವಿಠ್ಠಲ- ರುಕ್ಮಿಣಿ ದೇವರ ದರ್ಶನ ಪಡೆಯಲು ತೆರಳಿದ್ದ ಬೆಳಗಾವಿಯ ವಿಠ್ಠಲ ಭಕ್ತರಿಗೆ ಮಹಾರಾಷ್ಟ್ರದಲ್ಲಿ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಆಷಾಢ ಏಕಾದಶಿಗೆ ಬೆಳಗಾವಿ ಸೇರಿದಂತೆ ಪಂಢರಾಪುರಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಕರ್ನಾಟಕದ ಭಕ್ತರು ಪ್ರತಿ ವರ್ಷ ತೆರಳಿ ದೇವರ ದರ್ಶನ ಪಡೆಯುತ್ತಾರೆ. ಅದರಂತೆ ಬೆಳಗಾವಿಯ ಭಕ್ತರು ಪಂಢರಾಪುರಕ್ಕೆ ಲಾರಿಯಲ್ಲಿ ತೆರಳಿ ವಿಠ್ಠಲ ದೇವರ ದರ್ಶನ ಪಡೆದು ಬೆಳಗಾವಿಗೆ ಬರುವಾಗ ಅವರಿಗೆ ದಾರಿತಪ್ಪಿದೆ. ಆಗ ಮಹಾರಾಷ್ಟ್ರದ ಗ್ರಾಮವೊಂದರ ಬಳಿ ಹೋದಾಗ ಅಲ್ಲಿ ರಸ್ತೆ ಮೇಲೆ ಕಾರು ನಿಂತಿತ್ತು. ಚಾಲಕನ ಬಳಿ ಕಾರು ತೆಗೆಯುವಂತೆ ಮನವಿ ಮಾಡಿದ್ದಾರೆ. ಆಗ ಕಾರಿನವನು ಜಗಳ ಮಾಡಿದ್ದಾನೆ. ಕೊನೆಗೆ ಚಾಲಕ ಕಷ್ಟಪಟ್ಟು ತನ್ನ ಲಾರಿಯನ್ನು ಚಲಾಯಿಸಿಕೊಂಡು ಬಂದಿದ್ದಾನೆ. ಆದರೆ ಕಾರಿನಲ್ಲಿದ್ದವರು ಅಷ್ಟಕ್ಕೆ ಸುಮ್ಮನಾಗದೆ ಪ್ರಯಾಣಿಸಿ ಲಾರಿಯನ್ನು ತಡೆದು ನಿಲ್ಲಿಸಿ ಹಲ್ಲೆ ಮಾಡಿದ್ದಾರೆ.

ಘಟನೆ ವಿವರ :
ಬೆಳಗಾವಿ ಸಮೀಪದ ತುರಮುರಿ ಗ್ರಾಮದ ಕಾರ್ಮಿಕರ ಮೇಲೆ ಸಣ್ಣ ಕಾರಣಕ್ಕೆ ಅಮಾನುಷವಾಗಿ ಥಳಿಸಲಾಗಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡ ಸುರೇಶ್ ರಾಜುಕರ್ (52), ಪರಶುರಾಮ್ ಜಾಧವ್ (45) ಮತ್ತು ಟ್ರಕ್ ಚಾಲಕ ಶ್ರೀಕಾಂತ್ ಮನ್ವಾಡಕರ್ (50) ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಪರಶುರಾಮ್ ಜಾಧವ್ ಪ್ರಜ್ಞಾಹೀನನಾಗಿದ್ದು, ಮೀರಜ್ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗಾವಿಯ ತುರಮುರಿ ಗ್ರಾಮದ ಸುಮಾರು 35 ವಾರಕರಿ (ವಿಠ್ಠಲ ಭಕ್ತರು)ಆಷಾಢ ಯಾತ್ರೆ(ವಾರಿ)ಗೆ ಪಂಢರಪುರಕ್ಕೆ ತೆರಳಿದ್ದರು. ವಾರಿ ದಾಟಿ ನಾಗಪುರ-ರತ್ನಗಿರಿ ರಾಷ್ಟ್ರೀಯ ಹೆದ್ದಾರಿ ಮೂಲಕ ಮೀರಜ್ ಮಾರ್ಗವಾಗಿ ಬೆಳಗಾವಿಗೆ ಹೊರಟಿದ್ದರು. ಆದರೆ, ಮೀರಜ್‌ಗೆ ಬರುತ್ತಿದ್ದಾಗ, ಈ ವಾರಕರಿಗಳು ಇದ್ದ ಲಾರಿ ದಾರಿ ತಪ್ಪಿಸಿಕೊಂಡಿದ್ದರು. ಕೊನೆಗೂ ಅವರು ಮೀರಜ್ ತಾಲೂಕಿನ ಮಳಗಾಂವ್ ಗ್ರಾಮಕ್ಕೆ
ಹೋಗಿದ್ದಾರೆ. ತುರಮುರಿಯ ಲಾರಿ (ಕೆಎ 22 ಡಿ 8535) ಮಳಗಾಂವ್‌ನ ಕಿರಿದಾದ ರಸ್ತೆಗೆ ಬಂದಿದೆ. ಆ ವೇಳೆ ವಾರಕರಿಯ ಲಾರಿ ಚಾಲಕನೊಂದಿಗೆ ಗ್ರಾಮದ ಕಾರು ಚಾಲಕನೊಬ್ಬ ವಾಗ್ವಾದ ನಡೆಸಿದ್ದಾನೆ. ಆ ನಂತರ ಲಾರಿ ಚಾಲಕ ಶ್ರೀಕಾಂತ್ ಮನ್ಮಡ್ಕರ್ ಮೀರಜ್ ಕಡೆಗೆ ಬರಲು ಪ್ರಾರಂಭಿಸಿದಾಗ ಕಾರಿನವ ಅಡ್ಡಗಟ್ಟಿ ಹೊಡೆದಿದ್ದಾನೆ.
ಮಹಾರಾಷ್ಟ್ರದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.