ಬೆಳಗಾವಿ: ಬೆಳಗಾವಿಯಲ್ಲಿ ಈ ಬಾರಿ ಸಿಹಿ ಗೆಣಸಿಗೆ ಬಂಪರ್ ಬೆಲೆ ಬಂದಿದೆ.
ಇಳುವರಿ ಕುಸಿತದಿಂದ ಬೆಳಗಾವಿಯ ಕೃಷಿ ಉತ್ಪನ್ನ ಮಾರುಕಟ್ಟೆ ಎಪಿಎಂಸಿಯಲ್ಲಿ ಸಿಹಿ ಗೆಣಸಿನ ಆವಕ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಆದ್ದರಿಂದ ಧಾರಣೆ ಏರಿಕೆಯಾಗಿದೆ.
ಸಿಹಿಗೆಣಸು ಕ್ವಿಂಟಾಲ್ ಗೆ ಶನಿವಾರದಂದು ಒಂದುವರೆ ಸಾವಿರದಿಂದ 2300 ಕ್ಕೆ ಮಾರಾಟವಾಗಿದೆ. ಗುಣಮಟ್ಟದ ಗೆಣಸಿಗೆ ಕ್ವಿಂಟಲ್ ಗೆ ₹ 2300 ಲಭಿಸಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಕ್ವಿಂಟಲ್ ಗೆ ₹ 500 ರಿಂದ 1000 ದರಕ್ಕೆ ಮಾರಾಟವಾಗಿತ್ತು.ಬೆಳಗಾವಿ ತಾಲೂಕಿನ ಪಶ್ಚಿಮ ಭಾಗ ಹಾಗೂ ಅದಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಚಂದಗಡ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೆಣಸು ಬೆಳೆಯಲಾಗುತ್ತಿದೆ. ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗೋವಾ, ದೆಹಲಿ ಮುಂತಾದ ರಾಜ್ಯಗಳಿಗೆ ಗೆಣಸು ಪೂರೈಸಲಾಗುತ್ತದೆ.
ಸತತ ಮಳೆಯಿಂದ ಗೆಣಸಿನ ಇಳುವರಿ ಕುಸಿತ ಕಂಡಿದೆ. ಇನ್ನೊಂದೆಡೆ ಉತ್ತರ ಭಾರತದ ರಾಜ್ಯಗಳಲ್ಲಿ ಗೆಣಸಿಗೆ ಬೇಡಿಕೆ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಸರಕು ಮಾರುಕಟ್ಟೆಗೆ ಗೆಣಸು ಬಾರದೇ ಇರುವುದರಿಂದ ದರ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ನವೆಂಬರ್ 13ರಂದು ಕ್ವಿಂಟಲ್ ಗೆ 2200 ರವರೆಗೆ ವರೆಗೆ 2800 ರ ವರೆಗೆ ಮಾರಾಟವಾಗಿದ್ದು ಪ್ರತಿದಿನ ದರದಲ್ಲಿ ವ್ಯತ್ಯಾಸ ಆಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಏರಿಕೆ ಆಗಬಹುದು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದರ ಹೆಚ್ಚಿರುವುದು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿರುವುದಂತೂ ಸ್ಪಷ್ಟವಾಗಿ ಗೋಚರವಾಗಿದೆ.