ಬೆಂಗಳೂರು:
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಸರ್ಕಾರ ಬಜೆಟ್ ನಲ್ಲಿ ಪ್ರಕಟಿಸಿದ್ದು, ದಶಕಗಳ ಕನಸು ನನಸಾಗಿದೆ.

ದಾವಣಗೆರೆಯಲ್ಲಿ ಇದೇ ಫೆ.3&4 ರಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಆಯೋಜಿಸಿದ್ದ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಭರವಸೆಯನ್ನು ಈಡೇರಿಸಿರುವುದಕ್ಕೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಧನ್ಯವಾದ ಸಲ್ಲಿಸಿದ್ದಾರೆ.

ಮಂಡ್ಯ ಮತ್ತು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಉಚಿತ ಬಸ್ ಪಾಸ್ ಬಗ್ಗೆ ಕೆಯುಡಬ್ಲ್ಯುಜೆ ಮಂಡಿಸಿದ್ದ ಹಕ್ಕೊತ್ತಾಯ ಬಗ್ಗೆ ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆದುಕೊಂಡಿರುವುದನ್ನು ಕೆಯುಡಬ್ಲ್ಯುಜೆ ಸ್ಮರಿಸಿದ್ದು, ಅಭಿನಂದನೆ ಸಲ್ಲಿಸಿದೆ.

ಬಸ್ ಪಾಸ್ ಬೇಡಿಕೆ ಈಡೇರಿಸಲು ಸ್ಪಂದಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಎಲ್ಲಾ ಹಂತದಲ್ಲಿಯೂ ಸಹಕಾರ ನೀಡಿದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೂ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು ವಿಶೇಷವಾಗಿ ಸ್ಮರಿಸಿ ಅಭಿನಂದಿಸಿದೆ.

ಬಜೆಟ್ ನಲ್ಲಿ ಘೋಷಣೆ ಮಾಡಿರುವ ಬಸ್ ಪಾಸ್ ಯೋಜನೆಯನ್ನು ಕ್ರಮಬದ್ದವಾಗಿ ಕೂಡಲೇ ಜಾರಿಗೆ ತರಲು ವಾರ್ತಾ ಇಲಾಖೆ ಮುಂದಾಗಬೇಕು ಎಂದು ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು
ವಿನಂತಿಸಿದ್ದಾರೆ.