ಬೆಂಗಳೂರು: ಬೆಂಗಳೂರಿನ ಹಲವಾರು ಹೋಟೆಲ್‌ಗಳು, ದರ್ಶಿನಿಗಳು ಹಾಗೂ ಇತರೆಡೆಗಳಲ್ಲಿ ನೀಡಲಾಗುತ್ತಿರುವ ಇಡ್ಲಿಗಳಲ್ಲಿ ಕ್ಯಾನ್ಸರ್‌ ಕಾರಕ (cause cancer) ಅಂಶಗಳು ಪತ್ತೆಯಾಗಿವೆ ಎಂಬ ಅಂಶಗಳು ಬೆಳಕಿಗೆ ಬಂದಿದೆ. ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್‌ ಕಾರಕ ಅಂಶ (Carcinogenicity) ಪತ್ತೆಯಾಗಿದೆ ಎಂದು ಆಹಾರ ಇಲಾಖೆಯ ವರದಿ ಬಹಿರಂಗಪಡಿಸಿದೆ.
ಇಡ್ಲಿಯನ್ನು ಬೇಯಿಸಲು ಬಳಸಲಾಗುವ ಸ್ಟೀಮರ್‌ಗಳಲ್ಲಿ ಪ್ಲಾಸ್ಟಿಕ್‌ ಅನ್ನು ಬಳಸಲಾಗುತ್ತಿದ್ದು, ಇದರ ಬಳಕೆಯಿಂದ ಕ್ಯಾನ್ಸರ್‌ ಕಾರಕ ರಾಸಾಯನಿಕಗಳು ಹೊಮ್ಮುತ್ತಿವೆ ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ (Food Safety Department) ನಡೆಸಿದ ಪರೀಕ್ಷೆಯಿಂದ ತಿಳಿದುಬಂದಿದೆ. ಸಾರ್ವಜನಿಕರಿಂದ ಪ್ಲಾಸ್ಟಿಕ್‌ ಬಳಕೆಯ ಬಗ್ಗೆ ದೂರುಗಳು ಬಂದ ಹಿನ್ನೆಲೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಸುಮಾರು 500 ಆಹಾರ ಮಳಿಗೆಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ 35 ಕಡೆ ಸ್ಟೀಮರ್‌ಗಳಲ್ಲಿ ಪ್ಲಾಸ್ಟಿಕ್‌ ಹಾಳೆಗಳನ್ನು ಬಳಕೆ ಮಾಡಿರುವುದು ಪತ್ತೆಯಾಗಿತ್ತು. ಈ ಬೆನ್ನಲ್ಲೇ 35 ಮಳಿಗೆದಾರರಿಗೆ ನೋಟಿಸ್‌ ನೀಡಲಾಗಿತ್ತು.

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು ಕರ್ನಾಟಕದಾದ್ಯಂತ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಬೀದಿ ವ್ಯಾಪಾರಿಗಳ ತಪಾಸಣೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇಡ್ಲಿಗೆ ಬಳಸುವ ಪ್ಲಾಸ್ಟಿಕ್‌ ನಲ್ಲಿ ಶಾಖ ಹೆಚ್ಚಾದಂತೆ ಪಿಎಫ್‌ಎಎಸ್ ಕೆಮಿಕಲ್ ಎಂಬ ಹಾನಿಕಾರಕ ಅಂಶ ಹೊರ ಸೂಸುತ್ತದೆ ಎಂದು ವರದಿ ಬಹಿರಂಗಪಡಿಸಿದೆ ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.