ಮಂಗಳೂರು : ಕರಾವಳಿಯಲ್ಲಿ ಕಂಬಳ ಕಲರವ ಮತ್ತೆ ಆರಂಭವಾಗಿದೆ. ಪ್ರತಿ ವಾರಾಂತ್ಯ ತುಳುನಾಡಿನಲ್ಲಿ ಕಂಬಳದ ಕಹಳೆ ಮೊಳಗಲಿದೆ. ಶತಮಾನಗಳ ಹಿಂದೆ ಸಾಂಪ್ರದಾಯಿಕವಾಗಿ ಆರಂಭವಾದ ಕೋಣಗಳ ಓಟ ಇದೀಗ ಹಲವು ಮಾರ್ಪಾಡುಗಳನ್ನು ಕಂಡಿದೆ. ಕಂಬಳ ಕರೆಯಲ್ಲಿ ಕೋಣ ಜೋಡಿಗಳ ಸಂಖ್ಯೆ ಹೆಚ್ಚಿದಂತೆ ನಿರ್ದಿಷ್ಟ ಸಮಯದಲ್ಲಿ ಕೂಟ ಅಂತ್ಯಗೊಳಿಸುವ ಸವಾಲು ಆಯೋಜಕರಿಗಿದೆ. ಹೀಗಾಗಿ ಹೊಸ ತಂತ್ರಜ್ಞಾನದ ಮೊರೆ ಹೋಗುತ್ತಿದೆ ಜಿಲ್ಲಾ ಕಂಬಳ ಸಮಿತಿ. ಈ ಹಿಂದೆ ಸಾಮಾನ್ಯ ಟೈಮರ್ ಬಳಸಿ ಕೋಣಗಳ ಓಟದ ಸಮಯ ಲೆಕ್ಕ ಹಾಕಲಾಗುತ್ತಿತ್ತು. ಬಳಿಕ ಸೆನ್ಸಾರ್ ಟೈಮಿಂಗ್ ಬಳಕೆ ಬಂತು. ಇದರಲ್ಲಿಯೂ ವರ್ಷಾನುವರ್ಷ ಹಲವಾರು ನವೀಕರಣ ಮಾಡಲಾಗಿದೆ. ಕಂಬಳ ಕ್ಷೇತ್ರಕ್ಕೆ ಸೆನ್ಸಾರ್ ಟೈಮಿಂಗ್ ಪರಿಚಯಿಸಿದ ಕಾರ್ಕಳದಲ್ಲಿ ಸ್ಕೈ ವೀವ್ ಸಂಸ್ಥೆ ನಡೆಸುತ್ತಿರುವ ತಂತ್ರಜ್ಞ ರತ್ನಾಕರ್ ನಾಯ್ಕ್ ಅವರು ಇದೀಗ ಮತ್ತೊಂದು ಪ್ರಯೋಗಕ್ಕೆ ಇಳಿದಿದ್ದಾರೆ. ಅದುವೆ ನಿಶಾನೆ ಮಾದರಿಯ ಟೈಮರ್. ಪ್ರತಿಯೊಂದು ವಿಭಾಗದ ಕೋಣಗಳಿಗೆ ಕರೆ ಬಂದ ನಂತರ ಓಟ ಆರಂಭಿಸಲು ಸಮಯ ನಿಗದಿ ಮಾಡಲಾಗಿದೆ. ಆ ಸಮಯದೊಳಗೆ ಕೋಣಗಳನ್ನು ಅಣಿಗೊಳಿಸಿ ಓಟ ಪ್ರಾರಂಭಿಸಬೇಕು. ಆದರೆ ಹಲವು ಬಾರಿ ಇಲ್ಲಿ ಸಮಯಕ್ಕೆ ಸರಿಯಾಗಿ ಕೋಣಗಳನ್ನು ಅಣಿಗೊಳಿಸಲು ಸಾಧ್ಯವಾಗುವುದಿಲ್ಲ. ಇದೇ ಕಾರಣದಿಂದ ಕೂಟ ತಡವಾಗುತ್ತಿದೆ. ಇದೀಗ ಜಿಲ್ಲಾ ಕಂಬಳ ಸಮಿತಿ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ. ಹಗ್ಗ ಹಿರಿಯ ವಿಭಾಗಕ್ಕೆ 10 ನಿಮಿಷ, ಹಗ್ಗ ಕಿರಿಯ ವಿಭಾಗಕ್ಕೆ 7 ನಿಮಿಷ, ನೇಗಿಲು ಹಿರಿಯಕ್ಕೆ 8 ನಿಮಿಷ, ನೇಗಿಲು ಕಿರಿಯಕ್ಕೆ 6 ನಿಮಿಷ ಮತ್ತು ಅಡ್ಡ ಹಲಗೆ ವಿಭಾಗಕ್ಕೆ 10 ನಿಮಿಷಗಳ ಅವಕಾಶ ನೀಡಲಾಗಿದೆ.