Join The Telegram | Join The WhatsApp |
ಬೆಂಗಳೂರು-
ಈಗಾಗಲೇ ಹಲವು ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯೋದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈಗ ಮುಂದುವರೆದು ಎಸ್ ಎಸ್ ಸಿ ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯೋದಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ನಡೆಸುವ ಪರೀಕ್ಷೆಗಳು ಕನ್ನಡ ಸೇರಿದಂತೆ ಆಯಾ ಪ್ರಾದೇಶಿಕ ಭಾಷೆಗಳಲ್ಲೇ ಇರಬೇಕೆಂಬ ಕನ್ನಡ ಪರ ಹೋರಾಟಗಾರರ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ಇದೇ ಪ್ರಥಮ ಬಾರಿಗೆ ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಲು ಎಸ್‌ಎಸ್‌ಸಿ ಮುಂದಾಗಿದೆ.
ಇದೀಗ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಸಂಸ್ಥೆಗಳು, ಇಲಾಖೆಗಳು, ಕಚೇರಿಗಳಲ್ಲಿ ನೇಮಕ ಮಾಡಲು ಸಿಬ್ಬಂದಿ ನೇಮಕಾತಿ ಆಯೋಗವು ಮಲ್ಟಿಟಾಸ್ಕಿಂಗ್ ಸ್ಟಾಫ್ (ನಾನ್ ಟೆಕ್ನಿಕಲ್) ಹಾಗೂ ಹವಾಲ್ದಾರ್ ಹುದ್ದೆಗಳ ಪರೀಕ್ಷೆಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. 10880 ಎಂಟಿಎಸ್ ಹುದ್ದೆಗಳಿಗೆ ಹಾಗೂ 529 ಸಿಬಿಐಸಿ ಮತ್ತು ಸಿಬಿಎನ್‌ನ ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಜ.18ರಿಂದ ಫೆ.17ರವರೆಗೆ ಪರೀಕ್ಷೆಗೆ ನೋಂದಣಿ ಪಡೆಯಲು ಅವಕಾಶ ನೀಡಲಾಗಿದೆ.
ಈ ಹುದ್ದೆಗಳಿಗೆ ಏಪ್ರಿಲ್ ತಿಂಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯಲಿದ್ದು, ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಇತರ ಪ್ರಾದೇಶಿಕ ಭಾಷೆಗಳಾಗಿವೆ.
Join The Telegram | Join The WhatsApp |