Join The Telegram | Join The WhatsApp |
ನವದೆಹಲಿ: ಬಿಪೋರ್‌ಜೋಯ್ ಚಂಡಮಾರುತವು ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದ್ದು, ಉತ್ತರ-ಈಶಾನ್ಯಕ್ಕೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ತಿಳಿಸಿದೆ. ಚಂಡಮಾರುತ ಪರಿಣಾಮ ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.
ಚಂಡಮಾರುತವು ಪ್ರಸ್ತುತ ಗೋವಾದಿಂದ ಪಶ್ಚಿಮಕ್ಕೆ 690 ಕಿಮೀ, ಮುಂಬೈನಿಂದ ಪಶ್ಚಿಮ-ನೈಋತ್ಯಕ್ಕೆ 640 ಕಿಮೀ ಮತ್ತು ಪೋರಬಂದರ್‌ನಿಂದ ನೈಋತ್ಯಕ್ಕೆ 640 ಕಿಮೀ ದೂರದಲ್ಲಿ ನೆಲೆಸಿದೆ ಹಾಗೂ ಪ್ರತಿ ಗಂಟೆಗೆ 145 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಚಂಡಮಾರುತವು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸಲು ಕಾರಣವಾಗಬಹುದು ಬಿಪೋರ್ ಜೋಯ್ ಚಂಡಮಾರುತವು ಪೂರ್ವ-ಮಧ್ಯ ಅರೇಬಿಯನ್ ಸಮುದ್ರದಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಮತ್ತಷ್ಟು ತೀವ್ರಗೊಳ್ಳಲಿದ್ದು ಉತ್ತರ-ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ” ಎಂದು IMD ಟ್ವೀಟ್‌ನಲ್ಲಿ ತಿಳಿಸಿದೆ.
ಬಿಪೋರ್‌ಜೋಯ್ ಚಂಡಮಾರುತ ಪ್ರಭಾವದಿಂದ ಹೆಚ್ಚಿನ ಅಲೆಗಳು ಮತ್ತು ಬಲವಾದ ಗಾಳಿಯಿಂದಾಗಿ ಅರೇಬಿಯನ್ ಸಮುದ್ರದ ಕರಾವಳಿಯಲ್ಲಿರುವ ಗುಜರಾತ್‌ನ ವಲ್ಸಾದ್‌ನಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾದ ತಿಥಾಲ್ ಬೀಚ್ ಅನ್ನು ಜೂನ್ 14 ರವರೆಗೆ ಪ್ರವಾಸಿಗರಿಗೆ ಮುಚ್ಚಲಾಗಿದೆ.
“ನಾವು ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹೇಳಿದ್ದೇವೆ ಮತ್ತು ಅವರೆಲ್ಲರೂ ಹಿಂತಿರುಗಿದ್ದಾರೆ. ಅಗತ್ಯವಿದ್ದರೆ ಜನರನ್ನು ಸಮುದ್ರ ತೀರದಲ್ಲಿರುವ ಗ್ರಾಮಕ್ಕೆ ಸ್ಥಳಾಂತರಿಸಲಾಗುವುದು. ಅವರಿಗೆ ಆಶ್ರಯಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾವು ಜೂನ್ 14 ರವರೆಗೆ ಪ್ರವಾಸಿಗರಿಗೆ ತಿಥಾಲ್ ಬೀಚ್ ಅನ್ನು ಮುಚ್ಚಿದ್ದೇವೆ ಎಂದು ವಲ್ಸಾದ್ ತಹಶೀಲ್ದಾರ ಟಿ.ಸಿ. ಪಟೇಲ್ ಹೇಳಿದ್ದಾರೆ.
ಕೇರಳ, ಕರ್ನಾಟಕ, ಗುಜರಾತ್ ಮತ್ತು ಲಕ್ಷದ್ವೀಪ ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ IMD ಸೂಚಿಸಿದೆ. ಕೇರಳದ ಎಂಟು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.
ಚಂಡಮಾರುತವು ಗುಜರಾತ್‌ನ ಕರಾವಳಿ ಪೋರಬಂದರ್ ಜಿಲ್ಲೆಯ ದಕ್ಷಿಣ-ನೈಋತ್ಯಕ್ಕೆ 640 ಕಿಲೋಮೀಟರ್ ದೂರದಲ್ಲಿ ಕೇಂದ್ರೀಕೃತವಾಗಿದೆ.
“ಇದು ಭಾನುವಾರ ಅಥವಾ ಸೋಮವಾರದಂದು ದಕ್ಷಿಣ ಗುಜರಾತ್‌ಗೆ ತಲುಪಬಹುದು. ಪ್ರಸ್ತುತ, ನಾವು ಅಲರ್ಟ್ ಮೋಡ್‌ನಲ್ಲಿದ್ದೇವೆ ಮತ್ತು ಪ್ರಧಾನ ಕಚೇರಿಯಿಂದ ಹೊರಹೋಗದಂತೆ ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕರಾವಳಿ ಗ್ರಾಮದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ನಿರ್ವಹಣಾ ಪಡೆ) ತಂಡಗಳನ್ನು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಇರಿಸಲಾಗಿದೆ. ಅಗತ್ಯವಿದ್ದಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕಾಗುತ್ತದೆ ಎಂದು ಸೂರತ್‌ನ ಕಲೆಕ್ಟರ್ ಬಿಕೆ ವಾಸವ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
Join The Telegram | Join The WhatsApp |