ನವದೆಹಲಿ: ಭಾರತದ ಚುನಾವಣಾ ಆಯೋಗವು (ECI) ಹರಿಯಾಣ ವಿಧಾನಸಭೆ ಚುನಾವಣೆಯ ಮತದಾನದ ದಿನಾಂಕದಲ್ಲಿ ಬದಲಾವಣೆ ಮಾಡಿದೆ. ಚುನಾವಣೆಯನ್ನುಅಕ್ಟೋಬರ್ 1ರ ಬದಲಾಗಿ ಅಕ್ಟೋಬರ್ 5ರಂದು ನಡೆಸಲು ನಿರ್ಧರಿಸಿದೆ.
ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ದಿನವನ್ನೂ ಅಕ್ಟೋಬರ್ 4ರ ಬದಲಾಗಿ ಅಕ್ಟೋಬರ್ 8 ಕ್ಕೆ ನಿಗದಿ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.
ತಮ್ಮ ಗುರು ಜಂಭೇಶ್ವರರ ಸ್ಮರಣಾರ್ಥ ಅಸೋಜ್ ಅಮಾವಾಸ್ಯೆ ಉತ್ಸವದಲ್ಲಿ ಪಾಲ್ಗೊಳ್ಳುವ ಶತಮಾನಗಳ ಹಳೆಯ ಪದ್ಧತಿಯನ್ನು ಆಚರಿಸುವ ಬಿಷ್ಣೋಯ್ ಸಮುದಾಯದ ಮತದಾನದ ಹಕ್ಕು ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು ಗೌರವಿಸಲು ದಿನಾಂಕಗಳನ್ನು ಬದಲಾವಣೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.“ಶತಮಾನಗಳ ಹಳೆಯ ಅಸೋಜ್ ಅಮವಾಸ್ಯೆ ಹಬ್ಬದ ಆಚರಣೆಯಲ್ಲಿ ಭಾಗವಹಿಸಲು ಹರಿಯಾಣದ ಬಿಷ್ಣೋಯ್ ಸಮುದಾಯದವರು ರಾಜಸ್ಥಾನಕ್ಕೆ ಸಾಮೂಹಿಕವಾಗಿ ಹೋಗುತ್ತಾರೆ. ಹೀಗಾಗಿ ರಾಜಕೀಯ ಪಕ್ಷಗಳು ಮತ್ತು ಅಖಿಲ ಭಾರತ ಬಿಷ್ಣೋಯಿ ಮಹಾಸಭಾದಿಂದ ಚುನಾವಣೆ ದಿನಾಂಕವನ್ನು ಬದಲಾವಣೆ ಮಾಡುವಂತೆ ಮನವಿ ಸ್ವೀಕರಿಸಲಾಗಿದೆ ಎಂದು ಚುನಾವಣಾ ಆಯೋಗ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಈ ವರ್ಷ, ಅಸೋಜ್ ಅಮವಾಸ್ಯೆ ಹಬ್ಬವು ಅಕ್ಟೋಬರ್ 2 ರಂದು ಬರುತ್ತದೆ ಮತ್ತು ಸಿರ್ಸಾ, ಫತೇಹಾಬಾದ್ ಮತ್ತು ಹಿಸಾರ್‌ನಲ್ಲಿ ನೆಲೆಸಿರುವ ಸಾವಿರಾರು ಬಿಷ್ಣೋಯ್ ಕುಟುಂಬಗಳು ಆ ದಿನ ರಾಜಸ್ಥಾನಕ್ಕೆ ಪ್ರಯಾಣಿಸಲಿದ್ದು, ಇದು ಅವರ ಮತದಾನದ ಹಕ್ಕು ಚಲಾಯಿಸುವುದರಿಂದ ವಂಚಿತರನ್ನಾಗಿ ಮಾಡುತ್ತದೆ. ಹೀಗಾಗಿ ಚುನಾವಣಾ ದಿನಾಂಕವನ್ನು ಬದಲಿಸಲು ಆಯೋಗವು ನಿರ್ಧರಿಸಿದೆ.ಇದಕ್ಕೂ ಮೊದಲು, ಅಕ್ಟೋಬರ್ 1 ರಂದು ಹರಿಯಾಣದಲ್ಲಿ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಆಯೋಗವು ದಿನಾಂಕ ನಿಗದಿ ಮಾಡಿತ್ತು ಮತ್ತು ಅಕ್ಟೋಬರ್ 4 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಸಮಿತಿಯು ಆಗಸ್ಟ್ 16 ರಂದು ಘೋಷಿಸಿತ್ತು.
ಏತನ್ಮಧ್ಯೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತಗಳ ವಿಧಾನಸಭಾ ಚುನಾವಣೆಯ ಮತದಾನದ ದಿನಾಂಕಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರಕಟಣೆಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಮತದಾರರು ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ತಮ್ಮ ಮತ ಚಲಾಯಿಸಲಿದ್ದಾರೆ.