ವಿಜಯಪುರ: ಇಂಡಿ ತಾಲೂಕಿನ ಲಚ್ಯಾಣದಲ್ಲಿ ಕೊಳವೆ ಬಾವಿಗೆ ಬಿದ್ದು ಸತತ 20 ಗಂಟೆಗಳ ಕಾರ್ಯಾಚರಣೆಯ ನಂತರ ಸುರಕ್ಷಿತವಾಗಿ ಬದುಕುಳಿದು ಬಂದಿರುವ ಸಾತ್ವಿಕ್‌ ಜಿಲ್ಲಾಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.

ಸಾತ್ವಿಕ್‌ನ ಸುರಕ್ಷತೆ ಹಾಗೂ ಚೇತರಿಕೆಗಾಗಿ ಆತನ ತಾಯಿ ಪೂಜಾ ದೇವರಿಗೆ ಹಲವು ಹರಿಕೆ ಹೇಳಿಕೊಂಡಿದ್ದು, ಅವುಗಳನ್ನು ಸಾತ್ವಿಕ್‌ನ ಹೆಸರು ಬದಲಾವಣೆಯೂ ಒಂದಾಗಿದೆ. ಮಗನನ್ನು ಬದುಕಿಸಿಕೊಡುವಂತೆ ದೇವರಲ್ಲಿ ಹರಕೆ ಹೊತ್ತಿದ್ದ ತಾಯಿ ಪೂಜಾ, ಮನೆಯಿಂದ ಮಠದವರೆಗೆ ದೀಡ ನಮಸ್ಕಾರ ಹಾಕಿ, ಮಗುವಿಗೆ ಮರು ನಾಮಕರಣ ಮಾಡುವುದಾಗಿ ಹೇಳಿಕೊಂಡಿದ್ದರು.

ಹೀಗಾಗಿ ಬರುವ 28ರಂದು ಪೂಜಾ ತಮ್ಮ ಮನೆಯಿಂದ ಲಚ್ಯಾಣ ಸಿದ್ದಲಿಂಗ ಮಹಾರಾಜರ ಮಠದವರೆಗೆ ದೀಡ ನಮಸ್ಕಾರ ಹಾಕಿ ಮಠದಲ್ಲಿ ತೊಟ್ಟಿಲು ಕಟ್ಟಿ ಮರುನಾಮಕರಣ ಮಾಡಲಿದ್ದಾರೆ. ಸಿದ್ದಲಿಂಗ ಮಹಾರಾಜರ ಪವಾಡದಿಂದ ನನ್ನ ಮಗ ಬದುಕಿ ಬಂದಿದ್ದಾನೆ. ಹೀಗಾಗಿ ಸಾತ್ವಿಕ್ ಹೆಸರು ಬದಲಿಗೆ ಸಿದ್ದಲಿಂಗ ಎಂಬ ಹೆಸರನ್ನು ನಾಮಕರಣ ಮಾಡುತ್ತೇವೆ. ರಕ್ಷಣೆ ಮಾಡಿದ ಎಲ್ಲ ಸಿಬ್ಬಂದಿಗೆ ಜಿಲ್ಲಾಡಳಿತಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಪೂಜಾ ಹೇಳಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗೂ ಧನ್ಯವಾದ ತಿಳಿಸಿದ್ದಾರೆ.

ಸಾತ್ವಿಕ್‌ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಪಲ್ಸ್, ಉಸಿರಾಟ ನಾರ್ಮಲ್ ಇದೆ. ಎರಡೂ ತೋಳಿಗೆ ಕೊಂಚ ಗಾಯವಾಗಿದ್ದು, ಆಯಿಂಟ್‌ಮೆಂಟ್ ಹಚ್ಚಲಾಗಿದೆ. ವೈದ್ಯರು ಬಾಲಕನ ಎಕ್ಸ್‌ರೇ ಮಾಡಿಸಿದ್ದು, ಸಿಟಿ ಸ್ಕ್ಯಾನ್ ನಾರ್ಮಲ್ ಎಂದಿದ್ದಾರೆ. ಸಿಟಿ ಸ್ಕ್ಯಾನ್ ವೇಳೆ ಮೆದುಳು ಹಾಗೂ ಹೊಟ್ಟೆಯ ಸ್ಕ್ಯಾನ್ ಮಾಡಲಾಗಿದ್ದು, ರಿಪೋರ್ಟ್ ನಾರ್ಮಲ್ ಎಂದಿದ್ದಾರೆ.

ಚಿಕ್ಕಮಕ್ಕಳ ತಜ್ಞರಾದ ಡಾ. ರೇಣುಕಾ ಪಾಟೀಲ, ಡಾ ಸುನೀಲ್ ರೂಡಗಿ, ಡಾ. ಶೈಲಶ್ರೀ ಪಾಟೀಲ, ಡಾ. ರವಿ ಬರಡೊ, ಡಾ‌. ಸಾವಳಗಿ ಸೇರಿ ಐದು ಮಕ್ಕಳ ತಜ್ಞರಿಂದ ಮಗುವಿನ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ನೇತ್ರ, ಎಲುಬು, ಕೀಲು, ನೇತ್ರ ತಜ್ಞರು, ಇ.ಎನ್‌.ಟಿ ತಜ್ಞರು, ಮಕ್ಕಳ ಶಸ್ತ್ರ ಚಿಕಿತ್ಸಕರಿಂದಲೂ ತಪಾಸಣೆ ನಡೆಸಲಾಗಿದೆ.

ಮಗುವಿನ ಎಲ್ಲಾ ರಿಪೋರ್ಟ್ ನಾರ್ಮಲ್ ಆಗಿವೆ. ಸಾತ್ವಿಕ್ ಸಂಪೂರ್ಣ ಆರೋಗ್ಯವಾಗಿದ್ದಾನೆ. ಪಾಲಕರಾದ ಪೂಜಾ – ಸತೀಶ್ ಅವರಿಂದಲೂ ಮಗು ಆರೋಗ್ಯದ ಕುರಿತು ಸಂತಸವಿದೆ. ಆದಾಗ್ಯೂ ನಾವು 48 ತಾಸುಗಳ ಕಾಲ ಅಬ್ಸರ್ವೇಶನ್‌ನಲ್ಲಿ ಇಟ್ಟಿರುತ್ತೇವೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಹಾಗೂ ಡಿ.ಎಚ್.ಓ ಬಸವರಾಜ ಹುಬ್ಬಳ್ಳಿ ಮಾಹಿತಿ ನೀಡಿದ್ದಾರೆ.