ಕಲಬುರಗಿ : “ತಾಲೂಕು ಕೇಂದ್ರಗಳು ಸೇರಿದಂತೆ ಎಲ್ಲೆಲ್ಲಿ ಮಿನಿ ವಿಧಾನಸೌಧಗಳಿವೆ ಅವುಗಳ ಹೆಸರನ್ನು ಪ್ರಜಾಸೌಧಗಳು ಎಂದು ಬದಲಾವಣೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು
ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, “ಈ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಹಾಗೂ ಆಡಳಿತ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಲಾಗುವುದು” ಎಂದು ತಿಳಿಸಿದರು.
*ಸೆ.22 ರಂದು ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ:*
“ಇದೇ ಸೆಪ್ಟೆಂಬರ್ 22 (ಭಾನುವಾರದಂದು) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು” ಎಂದು ತಿಳಿಸಿದರು.
“ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಅನ್ನು ಕೇವಲ ಐದು ದಿನಗಳಲ್ಲಿ ಮರು ಸ್ಥಾಪಿಸಿ, ನೀರನ್ನು ಹಾಗೂ ರೈತರನ್ನು ಉಳಿಸಿದ್ದೇವೆ. ಗೇಟ್ ದುರಸ್ತಿಗೆ ಶ್ರಮಿಸಿದ ಎಲ್ಲ ಅಧಿಕಾರಿಗಳು, ಇಂಜಿನಿಯರು ಹಾಗೂ ಕಾರ್ಮಿಕರು ಸೇರಿ ಸುಮಾರು 108 ಜನರಿಗೆ ಅಂದು ಸತ್ಕರಿಸಿ, ಗೌರವಿಸಲಾಗುವುದು” ಎಂದು ತಿಳಿಸಿದರು.
“ಇಷ್ಟೊತ್ತಿಗಾಗಲೇ ನಾವು ಗಂಗೆ ಪೂಜೆ ಮಾಡಿ ಬಾಗಿನ ಅರ್ಪಿಸಬೇಕಾಗಿತ್ತು. ನಾನು ಒಂದು ವಾರ ವಿದೇಶದಲ್ಲಿ ಇದ್ದ ಕಾರಣ ಇದು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿಗಳು ನೀವು ಬಂದ ಮೇಲೆ ಬಾಗಿನ ಅರ್ಪಿಸೋಣ ಎಂದು ಹೇಳಿದ್ದರು” ಎಂದರು.
*ಮಹಾನಗರ ಪಾಲಿಕೆಗಳಾಗಿ ರಾಯಚೂರು ಮತ್ತು ಬೀದರ್ ಘೋಷಣೆ*
“ಆಡಳಿತ ವಿಕೇಂದ್ರೀಕರಣದ ಭಾಗವಾಗಿ ರಾಯಚೂರು ಮತ್ತು ಬೀದರ್ ಅನ್ನು ಮಹಾನಗರ ಪಾಲಿಕೆಗಳನ್ನಾಗಿ ಘೋಷಣೆ ಮಾಡಲಾಗುತ್ತಿದೆ. ಬೀದರ್ ಜಿಲ್ಲಾ ಕೇಂದ್ರದಲ್ಲಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ, ಒಂದು ಲಕ್ಷದ ಇಪ್ಪತ್ತು ಸಾವಿರ ಚದರ ಅಡಿ ವಿಸ್ತೀರ್ಣದ ಜಿಲ್ಲಾ ಆಡಳಿತ ಸೌಧವನ್ನು ಪೂರ್ಣಗೊಳಿಸಲು ಸರ್ಕಾರ ಪಣ ತೊಟ್ಟಿದೆ. ಕಲ್ಯಾಣ ಕರ್ನಾಟಕದ ಪ್ರತಿ ಜಿಲ್ಲೆಗಳ 20ರಷ್ಟು ಭೂಭಾಗವನ್ನು ಅರಣ್ಯೀಕರಣ ಮಾಡಲಾಗುವುದು” ಎಂದರು.
*ಅನುಭವ ಮಂಟಪದಿಂದ ಅಂಜನಾದ್ರಿ ಬೆಟ್ಟದ ತನಕ ಪ್ರವಾಸೋದ್ಯಮ ಅಭಿವೃದ್ಧಿ*
ಅನುಭವ ಮಂಟಪದಿಂದ ಅಂಜನಾದ್ರಿ ಬೆಟ್ಟದ ತನಕ ಇರುವ ಎಲ್ಲಾ ಸ್ಮಾರಕಗಳನ್ನು ಅಭಿವೃದ್ಧಿಪಡಿಸಲಾಗುವುದು. ಸಚಿವರಾದ ಎಚ್ ಕೆ ಪಾಟೀಲ್ ಅವರು ಪ್ರವಾಸೋದ್ಯಮದ ವಿಚಾರವಾಗಿ ಸಲ್ಲಿಸಿದ ಎಲ್ಲಾ ಪ್ರಸ್ತಾವನೆಗಳನ್ನು ಅಂಗೀಕರಿಸಲಾಗಿದೆ. ಈ ಸ್ಮಾರಕಗಳ ಪಟ್ಟಿಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು” ಎಂದು ತಿಳಿಸಿದರು.
“ಅಕ್ಷರ, ಆವಿಷ್ಕಾರ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಹಾಗೂ ಈ ಭಾಗದಲ್ಲಿ ಬಂಡವಾಳ ಆಕರ್ಷಣೆಗೆ ಒತ್ತು ನೀಡಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು. ವಸತಿ ಯೋಜನೆ, ಆಶ್ರಯ ಮತ್ತು ಆರೋಗ್ಯ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಲಾಗುವುದು” ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ಭರ್ತಿ ಬಗ್ಗೆ ಕೇಳಿದಾಗ “ಈ ವಿಚಾರದಲ್ಲೂ ಸರ್ಕಾರ ಹಂತ ಹಂತವಾಗಿ ಕ್ರಮ ತೆಗೆದುಕೊಳ್ಳುತ್ತಿದೆ. ನಮ್ಮ ಕಡೆಗಿಂತ ಈ ಭಾಗದಲ್ಲಿ ಹೆಚ್ಚು ಕೆಲಸಗಳು ಬೇಗ ಆಗುತ್ತಿವೆ” ಎಂದರು.
ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಉದ್ಯೋಗ ಮೀಸಲಾತಿ ಸಮಸ್ಯೆ ಬಗ್ಗೆ ಕೇಳಿದಾಗ “ಈಗಾಗಲೇ ಸರ್ಕಾರ ಕ್ರಮ ತೆಗೆದುಕೊಂಡಿದೆ. ಒಂದಷ್ಟು ತಾಂತ್ರಿಕ ಅಡಚಣೆಗಳನ್ನು ನಿವಾರಿಸಿದೆ” ಎಂದು ಹೇಳಿದರು.
ಎಲ್ಲರ ಮೇಲೂ ಸದಾ ಆರೋಪ ಮಾಡುವುದೇ ಬಿಜೆಪಿ ಕೆಲಸ :
“ಎಲ್ಲರ ಮೇಲೂ ಸದಾ ಆರೋಪ ಮಾಡುವುದೇ ಬಿಜೆಪಿ ಕೆಲಸ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.ಕಲಬುರ್ಗಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯಿಸಿದರು.
ನಾಗಮಂಗಲ, ಮಂಗಳೂರು ಸೇರಿದಂತೆ ಒಂದಷ್ಟು ಕಡೆ ಗಣಪತಿ ವಿಸರ್ಜನೆ ಗಲಾಟೆಗಳಲ್ಲಿ ಪಿಎಫ್ ಐ, ಬಾಂಗ್ಲಾ ವಲಸಿಗರ ಕೈವಾಡವಿದೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಗಣಪತಿ ವಿಸರ್ಜನೆ ವೇಳೆ ಉಂಟಾಗಿರುವ ಗಲಭೆಗಳ ವಿರುದ್ಧ ನಮ್ಮ ಸರ್ಕಾರ ಕೂಡಲೇ ಕ್ರಮ ತೆಗೆದುಕೊಂಡಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕೆಲಸ ಸರ್ಕಾರ ಮಾಡುತ್ತದೆ. ಪೊಲೀಸ್ ಇಲಾಖೆ ಯಾವ ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತದೆ. ಈ ವಿಚಾರದಲ್ಲಿ ರಾಜಕಾರಣ ಮಾತನಾಡುವವರು ಮಾತನಾಡಲಿ” ಎಂದರು.
ಪರಪ್ಪನ ಅಗ್ರಹಾರದ ಮೇಲೆ ಪೊಲೀಸ್ ದಾಳಿ, ಗುತ್ತಿಗೆದಾರ ಚೆಲುವರಾಜು ಅವರಿಂದ ಶಾಸಕ ಮುನಿರತ್ನ ಅವರ ಮತ್ತೊಂದು ಆಡಿಯೋ ಬಿಡುಗಡೆ ಬಗ್ಗೆ ಕೇಳಿದಾಗ “ನಾನು ಅಮೆರಿಕದಲ್ಲಿದ್ದ ಕಾರಣಕ್ಕೆ ಯಾವ ವಿಚಾರಗಳ ಬಗ್ಗೆಯೂ ಮಾಹಿತಿ ಇಲ್ಲ. ಎಲ್ಲದರ ಬಗ್ಗೆ ತಿಳಿದು ಮಾತನಾಡುತ್ತೇನೆ” ಎಂದು ಹೇಳಿದರು.
ಅಮೆರಿಕ ಪ್ರವಾಸದ ಬಗ್ಗೆ ಕೇಳಿದಾಗ “ಅಮೆರಿಕದ ಚುನಾವಣಾ ಪದ್ಧತಿ, ಅಲ್ಲಿನ ಯುವಕರ ಉತ್ಸಾಹ, ಆಸಕ್ತಿ ಸೇರಿದಂತೆ ಅನೇಕ ವಿಚಾರಗಳನ್ನು ನಾವು ಕಲಿಯಬೇಕಿದೆ. ಅಮೆರಿಕಗೆ ಕುಟುಂಬ ಸಮೇತ ಖಾಸಗಿ ಪ್ರವಾಸಕ್ಕೆ ಹೋಗಿದ್ದೆ” ಎಂದು ಹೇಳಿದರು.
“ಅಮೆರಿಕ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಕಮಲ ಹ್ಯಾರಿಸ್ ಸೇರಿದಂತೆ ನಾನು ಯಾರನ್ನೂ ಭೇಟಿಯಾಗಿಲ್ಲ. ಇದೆಲ್ಲವೂ ಸುಳ್ಳು ಸುದ್ದಿ. ನಾನು ಹೋದ ಸಮಯದಲ್ಲೇ ಚುನಾವಣಾ ರ್ಯಾಲಿ ನಡೆಯುತ್ತಿತ್ತು. ಅದು ಹೇಗೆ ನಡೆಯುತ್ತದೆ ಎಂದು ವೀಕ್ಷಿಸಿದೆ” ಎಂದರು.
ಒಕ್ಕಲಿಗ ಸಮುದಾಯಕ್ಕೆ ಅಪಮಾನ; ಸಮುದಾಯದ ನಾಯಕರು, ಸ್ವಾಮೀಜಿಗಳು ಮಾತಾಡಬೇಕು:
“ಒಕ್ಕಲಿಗ ಸಮುದಾಯದ ಕುರಿತು ಮುನಿರತ್ನ ಅವರು ಆಡಿರುವ ಮಾತಿನ ಬಗ್ಗೆ ಸಮುದಾಯದ ಮುಖ್ಯಸ್ಥರು, ಸ್ವಾಮೀಜಿಗಳು, ಹಿರಿಯರು, ನಾಗರೀಕರು ಮಾತನಾಡಬೇಕು. ಅದರ ಬಗ್ಗೆ ಅಶೋಕ್ ಹಾಗೂ ಬಿಜೆಪಿ ನಾಯಕರು ಮಾತನಾಡಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.ಅಮೇರಿಕ ಪ್ರವಾಸದಿಂದ ಮರಳಿದ ನಂತರ ಮಂಗಳವಾರ ಮುಂಜಾನೆ ಸದಾಶಿವನಗರದ ನಿವಾಸದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ಶಾಸಕ ಮುನಿರತ್ನ ಅವರು ದಲಿತರು ಮತ್ತು ಒಕ್ಕಲಿಗ ಸಮುದಾಯದ ಬಗ್ಗೆ ಮಾಡಿರುವ ಅವಹೇಳನದ ಬಗ್ಗೆ ಕೇಳಿದಾಗ, “ದೊಡ್ಡ ದೊಡ್ಡ ನಾಯಕರಿದ್ದಾರೆ, ಅವರು ಮಾತಾಡಬೇಕು. ಇಂತಹ ವಿಚಾರದಲ್ಲಿ ಬಿಜೆಪಿಯವರೇ ಪ್ರತಿಕ್ರಿಯೆ ನೀಡಬೇಕು. ಮುನಿರತ್ನ ಮಾತನಾಡಿರುವುದು ಸರಿಯೋ ತಪ್ಪೋ? ಒಳ್ಳೆಯದೋ, ಕೆಟ್ಟದ್ದೋ ಎಂಬುದನ್ನು ತಿಳಿಸಬೇಕು. ಸರಿಯಿದ್ದರೆ ಸರಿ, ತಪ್ಪಿದ್ದರೆ ತಪ್ಪು ಎಂದು ಹೇಳಬೇಕು” ಎಂದರು.
ಪೊಲೀಸರ ಬಂಧನಕ್ಕೆ ಮುಂಚಿತವಾಗಿ ನನ್ನ ವಿಚಾರದಲ್ಲಿ ಅಣ್ಣ- ತಮ್ಮರ ಆಟ ಶುರುವಾಗಿದೆ ಎನ್ನುವ ಮುನಿರತ್ನ ಹೇಳಿಕೆ ಬಗ್ಗೆ ಕೇಳಿದಾಗ, “ನನಗೆ ಈ ವಿಚಾರ ಗೊತ್ತೇ ಇಲ್ಲ, ತಿಳಿದು ಮಾತಾಡ್ತೀನಿ. ನನಗೆ ಇನ್ನು ಸರಿಯಾಗಿ ಮಾಹಿತಿ ಗೊತ್ತಿಲ್ಲ. ಸಾಂವಿಧಾನಿಕ ಹುದ್ದೆ ಹೊಂದಿರುವ ಆರ್ ಅಶೋಕ್, ವಿಜಯೇಂದ್ರ, ಕೇಂದ್ರ ಸಚಿವರು ಇದ್ದಾರೆ. ಅವರು ದೊಡ್ಡ ನಾಯಕರಿದ್ದಾರೆ. ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು” ಎಂದರು.
*ರಾಹುಲ್ ಗಾಂಧಿ ಅವರ ಭೇಟಿಗೆ ಯಾರ ಅನುಮತಿ ಬೇಕು?*
ಅಮೆರಿಕದಲ್ಲಿ ರಾಹುಲ್ ಗಾಂಧಿ ಅವರ ಭೇಟಿ ಹಾಗೂ ಚರ್ಚೆಯ ವಿಚಾರದ ಬಗ್ಗೆ ಕೇಳಿದಾಗ, “ನಮ್ಮ ಪಕ್ಷದ ನಾಯಕರನ್ನು ಭೇಟಿಯಾಗಲು ಯಾರ ಅನುಮತಿ ಕೇಳಬೇಕು? ರಾಹುಲ್ ಗಾಂಧಿ ಅವರ ಬಳಿ ಏನು ಮಾತನಾಡಿದೆ ಎಂದು ನಿಮಗೆ (ಮಾಧ್ಯಮದವರಿಗೆ) ಹೇಳಲಾಗುತ್ತದೆಯೇ? ನನ್ನ ತಮ್ಮ, ಹೆಂಡತಿ ಮತ್ತು ಸ್ವಾಮೀಜಿಯವರ ಬಳಿ ಏನು ಮಾತನಾಡುತ್ತೇನೆ ಎಂಬುದನ್ನು ನಿಮ್ಮ ಬಳಿ ಹೇಳಲು ಆಗುತ್ತದೆಯೇ?” ಎಂದರು.
ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆ ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ, “ಸರ್ಕಾರ, ಪೊಲೀಸ್ ಇಲಾಖೆಯು ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೊ ಅದನ್ನು ಮಾಡುತ್ತದೆ” ಎಂದರು.