ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ದಿನಗಣನೆ ನಡೆದಿರುವಾಗ ಬಿಜೆಪಿ ಮತ್ತು ಜೆಡಿಎಸ್ ಗೆ ಕಾಂಗ್ರೆಸ್ ಬಿಗ್ ಶಾಕ್ ನೀಡಿದೆ.
ಚನ್ನಪಟ್ಟಣ ನಗರಸಭೆಗೆ ಬಿಜೆಪಿಯಿಂದ ಗೆದ್ದಿದ್ದ 7 ಸದಸ್ಯರ ಪೈಕಿ 6 ಮಂದಿ ಮಾಜಿ ಸಂಸದ ಡಿ.ಕೆ. ಸುರೇಶ್ ಸಮ್ಮುಖದಲ್ಲಿ ಮಂಗಳವಾರ ಕಾಂಗ್ರೆಸ್ ಗೆ ಸೇರ್ಪಡೆ ಆಗಿದ್ದಾರೆ. ಈ ಸಂದರ್ಭದಲ್ಲಿ ಬಿಎಂಐಸಿಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಉಪಸ್ಥಿತರಿದ್ದರು.
ಚನ್ನಪಟ್ಟಣ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 6 ಮಂದಿ ನಗರಸಭೆ ಸದಸ್ಯರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು.
ಚನ್ನಪಟ್ಟಣ ನಗರಸಭಾ ಸದಸ್ಯರಾದ ಚಂದ್ರು, ಮಂಗಳಮ್ಮ, ಮನೋಹರ್, ಕಮಲ, ಜಯಮಾಲ, ಕಸ್ತೂರಿ ಕಾಂಗ್ರೆಸ್ ಸೇರಿದವರು.
2021-22 ರಲ್ಲಿ ಇವರು ನಗರಸಭೆಗೆ ಬಿಜೆಪಿಯಿಂದ ಆಯ್ಕೆ ಆಗಿದ್ದರು. ಒಟ್ಟು 31 ಸದಸ್ಯರ ಪೈಕಿ 07 ಮಂದಿ ಬಿಜೆಪಿಯಿಂದ ಗೆದ್ದಿದ್ದರು. 16 ಮಂದಿ ಜೆಡಿಎಸ್ ನಿಂದ ಗೆದ್ದಿದ್ದರು.
ಎರಡು ತಿಂಗಳ ಹಿಂದೆ 13 ಮಂದಿ ಜೆಡಿಎಸ್ ಸದಸ್ಯರು ಆ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು.
ಒಳಮೀಸಲಾತಿ ಜಾರಿಗೆ ಸರಕಾರ ಬದ್ಧ, ಮೂರು ತಿಂಗಳಲ್ಲಿ ವರದಿ: ಡಿಸಿಎಂ ಡಿ.ಕೆ. ಶಿವಕುಮಾರ್
“ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಒಳ ಮೀಸಲಾತಿ ಜಾರಿಗೆ ಬದ್ಧವಾಗಿದ್ದು, ಈ ಸಂಬಂಧ ನಿನ್ನೆ ಸಚಿವ ಸಂಪುಟ ಸಭೆಯಲ್ಲಿ, ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಹೇಳಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಮಾದಿಗ ಸಮುದಾಯಕ್ಕೆ ಒಳಮೀಸಲು ಆದಷ್ಟು ಶೀಘ್ರ ಜಾರಿಗೆ ತರಬೇಕು ಎಂದು ಮಾಜಿ ಸಚಿವ ಎಚ್ ಆಂಜನೇಯ, ಶಿವಣ್ಣ, ರಾಜ್ಯಸಭೆ ಸದಸ್ಯ ಎಲ್ ಹನುಮಂತಯ್ಯ, ಮಾಜಿ ಸಂಸದ ಚಂದ್ರಪ್ಪ ಅವರ ನೇತೃತ್ವದ ನಿಯೋಗವು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ವೇಳೆ ಸಮಿತಿಗೆ ಮೂರು ತಿಂಗಳಿಗಿಂತ ಹೆಚ್ಚು ಕಾಲಾವಕಾಶ ನೀಡಬಾರದು. ಮೂರು ತಿಂಗಳ ನಂತರ ಶೀಘ್ರ ಒಳಮೀಸಲಾತಿ ಜಾರಿಯಾಗಬೇಕು ಎಂದು ನಿಯೋಗವು ಉಪಮುಖ್ಯಮಂತ್ರಿಗಳ ಬಳಿ ಮನವಿ ಮಾಡಿತು.
ನಂತರ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿ ವಿಚಾರವಾಗಿ ನಾವು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೆವು. ಚಿತ್ರದುರ್ಗದ ಸಮಾವೇಶದಲ್ಲೂ ನಾವು ಈ ವಿಚಾರವಾಗಿ ಜನರಿಗೆ ಮಾತು ಕೊಟ್ಟಿದ್ದು, ಅದಕ್ಕೆ ನಾವು ಬದ್ಧರಾಗಿದ್ದೇವೆ. ಒಳಮೀಸಲಾತಿ ವಿಚಾರದಲ್ಲಿ ಜನಸಂಖ್ಯೆ ಆಧಾರದ ಹಾಗೂ ಎಲ್ಲಾ ವರ್ಗಕ್ಕೂ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಈ ತೀರ್ಮಾನ ಮಾಡಲಾಗಿದೆ” ಎಂದು ತಿಳಿಸಿದರು.
“ಕಾಂಗ್ರೆಸ್ ಪಕ್ಷ ಸದಾ ಸಾಮಾಜಿಕ ನ್ಯಾಯಕ್ಕೆ ಸದಾ ಬದ್ಧವಾಗಿದೆ. ಸಂವಿಧಾನ ಆರಂಭದಿಂದ ಇಲ್ಲಿಯವರೆಗೂ ಸಾಮಾಜಿಕ ನ್ಯಾಯ ಕಾಪಾಡುತ್ತಾ ಬಂದಿದೆ. ಸರ್ವರಿಗೂ ಸಮಬಾಳು, ಸಮಪಾಲು ತತ್ವ ಮುಂದುವರಿಸಿಕೊಂಡು ಹೋಗುತ್ತೇವೆ. ನಮ್ಮ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ ಪಕ್ಷಾತೀತವಾಗಿ ನಾಯಕರುಗಳು ಬಂದು ಅಭಿನಂದನೆ ಸಲ್ಲಿಸಿದ್ದಾರೆ” ಎಂದು ಹೇಳಿದರು.
ಸಮಿತಿ ವರದಿ ವಿಳಂಬವಾದರೆ ನೇಮಕಾತಿಯೂ ವಿಳಂಬವಾಗಲಿದೆ ಎಂದು ಕೇಳಿದಾಗ, “ಮೂರು ತಿಂಗಳಲ್ಲಿ ವರದಿ ನೀಡಲು ನಾವು ಸೂಚಿಸಿದ್ದು, ಅವರು ಮೂರು ತಿಂಗಳಲ್ಲಿ ವರದಿ ನೀಡುವ ವಿಶ್ವಾಸವಿದೆ” ಎಂದು ತಿಳಿಸಿದರು.
*ಕುನ್ಹಾ ವರದಿ ನೋಡಿ ನನಗೇ ಕೊರೋನಾ ಬಂದಂತಾಗಿದೆ
ಕೋವಿಡ್ ಅವಧಿಯ ಹಗರಣಗಳ ಸಂಬಂಧ ಕುನ್ಹಾ ಅವರ ವರದಿ ಮೇಲೆ ಉಪಸಮಿತಿ ಸಭೆ ಬಗ್ಗೆ ಕೇಳಿದಾಗ, “ಕುನ್ಹಾ ಅವರ ವರದಿ ನೋಡಿ, ನನಗಗೇ ಕೊರೋನಾ ಬರುವಂತೆ ಕಾಣುತ್ತಿದೆ. ಅಷ್ಟು ಗಾಬರಿಯಾಗಿದೆ. ನಾವು ಅವರಿಂದ ಹೆಚ್ಚಿನ ಮಾಹಿತಿ ಕೇಳಿದ್ದೇವೆ. ವರದಿಯಿಂದಲೇ ಕೋರೋನಾ ಹರಡುವಂತಿದೆ. ಈ ಬಗ್ಗೆ ಆರೋಗ್ಯ ಸಚಿವರು ಮಾತನಾಡುತ್ತಾರೆ” ಎಂದು ತಿಳಿಸಿದರು.
*ನಾನೇ ಅನುದಾನ ಕೊಟ್ಟಿಲ್ಲ
ಜಯನಗರಕ್ಕೆ ಅನುದಾನ ನೀಡಿಲ್ಲ ಎಂಬ ಬಿಜೆಪಿ ಶಾಸಕರ ಆರೋಪದ ಬಗ್ಗೆ ಕೇಳಿದಾಗ, “ನಾನೇ ಅನುದಾನ ಕೊಟ್ಟಿಲ್ಲ. ಅವರು ನಮ್ಮ ಸರ್ಕಾರದ ಮೇಲೆ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲಿ” ಎಂದು ತಿಳಿಸಿದರು.
ಅವರು “ನಮ್ಮ ತೆರಿಗೆ, ನಮ್ಮ ಹಕ್ಕು” ಪ್ರತಿಭಟನೆ ಮಾಡುತ್ತಾರಂತೆ ಎಂದು ಕೇಳಿದಾಗ, “ತಡ ಮಾಡುವುದು ಬೇಡ, ಕೂಡಲೇ ಮಾಡಲಿ. ಅವರು ನನ್ನ ಭೇಟಿಗೆ ಬಂದಿದ್ದರು. ಅವರು ಪ್ರತಿಭಟನೆ ಮಾಡಬೇಕು” ಎಂದು ತಿಳಿಸಿದರು.
ಗಂಗಾ ಮತಸ್ಥರು ಬೀದಿಗೆ ಬರಲು ಡಿ.ಕೆ. ಶಿವಕುಮಾರ್ ಅವರೇ ಕಾರಣ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕುಮಾರಣ್ಣ ಚುನಾವಣೆ ಮಾಡುತ್ತಿದ್ದಾರೆ, ಮಾಡಲಿ. ನಮಗೆ ಕುಮಾರಣ್ಣ, ಗೌಡರ ಬಗ್ಗೆ ಮಾತನಾಡಲು ಸಮಯವಿಲ್ಲ. ನಾವುಂಟು, ಆ ಕ್ಷೇತ್ರ ಹಾಗೂ ಅದರ ಜನತೆಯ ಉದ್ಧಾರವುಂಟು. ನಾವು ಆ ಕೆಲಸ ಮಾಡುತ್ತೇವೆ” ಎಂದು ತಿಳಿಸಿದರು.