ಮಂಗಳೂರು : ಮಂಗಳೂರು ನಗರ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೈಲ್ವೆ ಮಾರ್ಗಗಳು ಸದ್ಯ ದಕ್ಷಿಣ ರೈಲ್ವೆಯಡಿ ಕಾರ್ಯ ನಿರ್ವಹಿಸುತ್ತಿದೆ. ಇದರ ಬದಲಿಗೆ ಈ ಮಾರ್ಗಗಳನ್ನು ನೈರುತ್ಯ ರೈಲ್ವೆಯಡಿ ಕಾರ್ಯ ನಿರ್ವಹಿಸುವ ಪ್ರಸ್ತಾವನೆಯನ್ನು ಸಂಸದ ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರ ಮುಂದಿಟ್ಟಿದ್ದಾರೆ.
ಸಂಸತ್ ಅಧಿವೇಶನದ ಪ್ರಶ್ನೋತ್ತರ ಸಂದರ್ಭದಲ್ಲಿ ಅವರು, ಕರಾವಳಿ ಸಹಿತ ಮಂಗಳೂರು-ಬೆಂಗಳೂರು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲು ದಕ್ಷಿಣ ರೈಲ್ವೆ ವಿಭಾಗದ ಮಂಗಳೂರು ನಗರ ಭಾಗದ ರೈಲ್ವೆ ಮಾರ್ಗಗಳನ್ನು ನೈರುತ್ಯ ರೈಲ್ವೆ ವ್ಯಾಪ್ತಿಗೆ ತರುವ ಪ್ರಸ್ತಾಪ ರೈಲ್ವೆ ಇಲಾಖೆ ಬಳಿ ಇದೆಯೇ ಎಂದು ಪ್ರಶ್ನಿಸಿದರು ಇದಕ್ಕೆ ಉತ್ತರ ನೀಡಿದ ಸಚಿವರು, ಬೆಂಗಳೂರು- ಮಂಗಳೂರು ರೈಲ್ವೆ ಮಾರ್ಗ ನಿರ್ಮಾಣವನ್ನು ರಾಜ್ಯ ಸರ್ಕಾರ ಹಾಗೂ ರೈಲ್ವೆ ಸಚಿವಾಲಯದ ಜಂಟಿ ಸಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ರಾಜ್ಯ ಸರಕಾರದ ಪಾಲು ಬರಬೇಕಾಗಿದೆ. ರಾಜ್ಯದ ಅನುದಾನದ ಪಾಲು ಬಂದರೆ ಈ ಮಾರ್ಗದ ಮುಂದಿನ ಹಂತದ ಅಭಿವೃದ್ಧಿ ಕಾಮಗಾರಿ ಮುಂದುವರಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.