ನವದೆಹಲಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸೇರಿ ದೇಶ ಮತ್ತು ರಾಜ್ಯಗಳನ್ನು ಅಭಿವೃದ್ಧಿಪಡಿಸಬೇಕೆಂಬುದನ್ನು ಸಂವಿಧಾನ ಸ್ಪಷ್ಟಪಡಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಏ2 ರಂದು ದೆಹಲಿಯಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ಭವನ-1ರ ಕಟ್ಟಡವನ್ನು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಯಾವುದೇ ರಾಜ್ಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಂದ ತೆರಿಗೆಯನ್ನು ವಸೂಲು ಮಾಡುತ್ತವೆ. ಐದು ವರ್ಷಕ್ಕೊಮ್ಮೆ ರಚನೆಯಾಗುವ ಹಣಕಾಸಿನ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತೆರಿಗೆಯ ಪಾಲು ನಿಗದಿಯಾಗುತ್ತದೆ. ಅನುದಾನದಲ್ಲಿ ಕೇಂದ್ರ ಸರ್ಕಾರದ ಅನೇಕ ಕಾರ್ಯಕ್ರಮಗಳೂ ಸೇರಿದ್ದು, ಕೇಂದ್ರ ಪುರಸ್ಕೃತ ಯೋಜನೆಗಳೂ ಇರುತ್ತವೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲು ಇರುತ್ತದೆ ಎಂದರು.

ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ , ಬಾಬಾ ಸಾಹೇಬ್ ಅಂಬೇಡ್ಕರ್ ರವರು ನೀಡಿದ ಸಂವಿಧಾನದ ಅನ್ವಯ ಸೆಂಟ್ರಲ್ ಲಿಸ್ಟ್, ಸ್ಟೇಟ್ ಲಿಸ್ಟ್ ಹಾಗೂ ಕನ್ಕರೆಂಟ್ ಲಿಸ್ಟ್ ಎಂದು ಅಧಿಕಾರ ಹಂಚಿಕೆಯಾಗಿದೆ. ಇದರನ್ವಯ ಕೇಂದ್ರ , ರಾಜ್ಯಗಳು ಕಾನೂನುಗಳನ್ನು ರಚಿಸಿದರೆ, ಕನ್ಕರೆಂಟ್ ಲಿಸ್ಟ್ ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕಾನೂನನ್ನು ರಚಿಸುತ್ತವೆ. ಕೇಂದ್ರಸರ್ಕಾರದ ಕೇಂದ್ರಸ್ಥಾನವಾದ ನವದೆಹಲಿಯಲ್ಲಿ ಪ್ರತಿಯೊಂದು ರಾಜ್ಯಗಳ ಭವನಗಳು ಇರುತ್ತವೆ. ನವದೆಹಲಿಯಲ್ಲಿ ಒಟ್ಟು ಮೂರು ಕರ್ನಾಟಕ ಭವನಗಳಿದ್ದು, ಇಲ್ಲಿಗೆ ಆಗಮಿಸುವ ಮಂತ್ರಿಗಳು, ಸಂಸದರು, ಹಾಲಿ ಹಾಗೂ ಮಾಜಿ ಶಾಸಕರು, ಅಧಿಕಾರಿಗಳಿಗೆ ಅನುಕೂಲ ಕಲ್ಪಿಸಲಾಗಿದೆ.

1967 ರಲ್ಲಿ ಕರ್ನಾಟಕ ಭವನಕ್ಕೆ ಶಂಕುಸ್ಥಾಪನೆಯನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಯವರು ನೆರವೇರಿಸಿದ್ದು, ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಉದ್ಘಾಟನೆ ಮಾಡಿದ್ದರು ಹಾಗೂ ನಿಜಲಿಂಗಪ್ಪನವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು. 51 ವರ್ಷಗಳ ಕಾಲ ಕರ್ನಾಟಕ ಭವನ ಕಾರ್ಯನಿರ್ವಹಿಸಿದೆ. ತಜ್ಞರ ಅಭಿಪ್ರಾಯದಂತೆ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ಕಟ್ಟಲು ತೀರ್ಮಾನಿಸಲಾಗಿತ್ತು. 2018 ರ ಬಜೆಟ್ ನಲ್ಲಿ ಘೋಷಣೆಯಾಗಿ 2019 ರಲ್ಲಿ ಕಾಮಗಾರಿ ಪ್ರಾರಂಭವಾಯಿತು. ಈವರೆಗೆ 8 ವರ್ಷಗಳ ವಿಳಂಬವಾಗಿದೆ. ಸಚಿವರ ಕೊಠಡಿಗಳು ಉತ್ತಮವಾಗಿದ್ದು. ಶಾಸಕರ ಕೊಠಡಿಗೆ ಸಿಟ್ ಔಟ್ ಅಗತ್ಯವಿದ್ದು ಈ ಬಗ್ಗೆ ಸರ್ಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ ಎಂದರು.

ಕರ್ನಾಟಕ ಭವನದಲ್ಲಿ ನಾಳೆಯಿಂದಲೇ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ತಿಳಿಸಿದರು.

*ರಾಯಭಾರಿ ಕಚೇರಿಯಾಗಿ ಕೆಲಸ ಮಾಡಲಿ

ಕರ್ನಾಟಕ ಭವನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಾಯಭಾರಿ ಕಛೇರಿಯಾಗಿ ಕೆಲಸ ಮಾಡಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು.

*ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಅಭಿವೃದ್ಧಿಯಾಗಬೇಕು

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಪರಸ್ಪರ ಅಭಿವೃದ್ಧಿಯಾದಾಗ ದೇಶ ಅಭಿವೃದ್ಧಿಯಾಗುತ್ತದೆ. ಈ ದಿಕ್ಕಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟುಗೂಡಿ ಕೆಲಸ ಮಾಡಲು ಪ್ರಯತ್ನ ಮಾಡಬೇಕು.ನಾವು ಒಕ್ಕೂಟದ ವ್ಯವಸ್ಥೆಯಲ್ಲಿರುವುದರಿಂದ ಒಟ್ಟಾಗಿ ಅಭಿವೃದ್ಧಿಯಾಗುವುದು ಅಗತ್ಯ. ಈ ದಿಕ್ಕಿನತ್ತ ಸಚಿವರು, ಅಧಿಕಾರಿಗಳು ಪ್ರಯತ್ನ ಮಾಡಬೇಕು.

*ಕರ್ನಾಟಕ ಭವನ-2 ರ ನವೀಕರಣದ ಭರವಸೆ‌಼

ಕರ್ನಾಟಕ ಭವನ-2 ರ ನವೀಕರಣ ಮಾಡುವ ಅಗತ್ಯವಿದ್ದು, ನವೀಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಡಾ. ಮಹಾದೇವಪ್ಪ, ರಾಜಣ್ಣ, ಕೆ.ಎಚ್. ಮುನಿಯಪ್ಪ ಮತ್ತಿತರರು ಹಾಜರಿದ್ದರು.