ಬೆಂಗಳೂರು: ಯಾವ ರೈತರನ್ನೂ ತಮ್ಮ ಜಮೀನುಗಳಿಂದ ಒಕ್ಕಲೆಬ್ಬಿಸುವುದಿಲ್ಲ ಹಾಗೂ ರೈತರಿಗೆ ನೋಟಿಸ್ ನೀಡಲಾಗಿದ್ದರೆ, ಅದನ್ನು ವಾಪಸ್ಸು ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ರಾಜ್ಯದ ವಿಜಯಪುರ,ಯಾದಗಿರಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ಎಂದು ರೈತರಿಗೆ ನೋಟಿಸ್ ನೀಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.

ಕಂದಾಯಸಚಿವ ಕೃಷ್ಣಬೈರೇಗೌಡ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್, ವಕ್ಫ್ ಸಚಿವ ಜಮೀರ್ ಅಹ್ಮದ್ ಅವರು ನಿನ್ನೆ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದರು.

*ಒಳಮೀಸಲಾತಿ ಜಾರಿ ಪರಾಮರ್ಶೆಗೆ ಏಕಸದಸ್ಯ ಆಯೋಗ ರಚನೆ

ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಏಕ ಸದಸ್ಯ ಆಯೋಗ ರಚಿಸಲು ತೀರ್ಮಾನಿಸಲಾಗಿದ್ದು, ಒಳಮೀಸಲಾತಿ ಜಾರಿ ಬಗ್ಗೆ ಪರಾಮರ್ಶೆ ನಡೆಸಿ ವರದಿ ನೀಡಲು ಮೂರು ತಿಂಗಳ ಅವಧಿ ನೀಡಲಾಗುವುದು. ಈಗಾಗಲೇ ನೇಮಕಾತಿಗೆ ಮಾಡಿರುವ ಅಧಿಸೂಚನೆಗಳನ್ನು ಹೊರತುಪಡಿಸಿ,ಏಕ ಸದಸ್ಯ ಸದಸ್ಯ ಆಯೋಗದ ವರದಿ ಬರುವವರೆಗೆ ಎಲ್ಲ ಸರ್ಕಾರಿ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸುವುದಿಲ್ಲ ಎಂದು ತಿಳಿಸಿದರು.