ಚಿಕ್ಕಮಗಳೂರು, ಮಾರ್ಚ್ 03: ರಾಮೇಶ್ವರ ಕಫೆ ಬಾಂಬ್ ಸ್ಫೋಟ ಪ್ರಕರಣವನ್ನು ಎನ್.ಐ.ಎ ಗೆ ವಹಿಸುವ ಬಗ್ಗೆ ಅಗತ್ಯ ಬಿದ್ದರೆ ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಚಿಕ್ಕ ಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಮೇಶ್ವರ ಬಾಂಬ್ ಸ್ಫೋಟ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದೆ. ತನಿಖೆ ನಡೆಯುತ್ತಿದ್ದು, ಆರೋಪಿ ಇನ್ನೂ ಸಿಕ್ಕಿಲ್ಲ ಎಂದರು.

*ಬಾಂಬ್ ಸ್ಫೋಟ ಪ್ರಕರಣ ಸಿಲ್ಲಿ ಘಟನೆಗಳಲ್ಲ*
ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಇದೊಂದು ಸಿಲ್ಲಿ ಘಟನೆ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಬಾಂಬ್ ಸ್ಫೋಟ ಪ್ರಕರಣ ಸಿಲ್ಲಿ ಘಟನೆಗಳಾಗುವುದಿಲ್ಲ. ಜನರ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದರು.

*ಬಿಜೆಪಿ ಕಾಲದಲ್ಲಿ ಸ್ಫೋಟವಾಗಿದ್ದಾಗ ಬೆಂಗಳೂರು ಏನಾಗಿತ್ತು*
ಬ್ರಾಂಡ್ ಬೆಂಗಳೂರು ಈಗ ಬಾಂಬ್ ಬೆಂಗಳೂರು ಆಗಿದೆ ಎಂದು ಬಿಜೆಪಿ ಟೀಕಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರ ಕಾಲದಲ್ಲಿ ಸ್ಫೋಟವಾಗಿದ್ದಾಗ ಬೆಂಗಳೂರು ಏನಾಗಿತ್ತು. 2008 ರಿಂದ 4 ಬಾರಿ ಬಾಂಬ್ ಬ್ಲಾಸ್ಟ್ ಆಗಿದ್ದಕ್ಕೆ ಏನೆಂದು ಕರೆಯಬೇಕು ಎಂದು ಕೇಳಿದರು. ಇದು ಎನ್.ಐ.ಎ, RAW ಅವರ ವೈಫಲ್ಯವಲ್ಲವೇ ಎಂದು ಪ್ರಶ್ನಿಸಿದರು.
ನಾನು ಬಾಂಬ್ ಸ್ಪೋಟವನ್ನು ಖಂಡಿಸುತ್ತೇನೆ. ಬಿಜೆಪಿಯವರು ರಾಜಕೀಯ ಮಾಡಬಾರದು ಎಂದರು. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಹಾಗೂ ಬಿಜೆಪಿ ಕಚೇರಿ ಮುಂದೆಯೇ ಸ್ಫೋಟ ವಾಗಿತ್ತು.ಆಗ ಬಿಜೆಪಿ ಅಧಿಕಾರದಲ್ಲಿದ್ದರು ಎಂದರು.

*ಅಧಿಕಾರ ಹಂಚಿಕೊಳ್ಳಬೇಕು*
ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಬಗ್ಗೆ ಮಾತನಾಡಿ ಅಧಿಕಾರ ಹಂಚಿಕೊಳ್ಳದೇ ಇದ್ದರೆ ಅಧಿಕಾರಕ್ಕೆ ಬರಲು ಶ್ರಮಿಸಿದ ಕಾರ್ಯಕರ್ತರು ಏನು ಮಾಡಬೇಕೆಂದರು. ಕರ್ನಾಟಕದ ಬಜೆಟ್ 3.70 ಕೋಟಿಯಾಗಿದೆ, ಅದಕ್ಕೆ 2 ಕೋಟಿ ವೆಚ್ಚವಾಗಬಹುದು ಎಂದರು.

*ನಿಯಮಾವಳಿಗಳಂತೆ ಬರಪೀಡಿತ ತಾಲ್ಲೂಕುಗಳ ಘೋಷಣೆ*
ಚಿಕ್ಕಮಗಳೂರು ಜಿಲ್ಲೆಯನ್ನು ಬರ ಪೀಡಿತ ತಾಲ್ಲೂಕು ಗಳ ಪಟ್ಟಿಯಿಂದ ಹೊರಗಿಟ್ಟಿರುವ ಬಗ್ಗೆ ಮಾತನಾಡಿ ಬರಪೀಡಿತ ಎಂದು ಘೋಷಣೆ ಮಾಡಲು ಕೆಲವು ನಿಯಮಾವಳಿಗಳು ಇದ್ದು ಅದರಂತೆ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. 17 ತಾಲ್ಲೂಕು ಉಳಿದುಕೊಂಡಿವೆ ಎಂದರು.

*ಮಂಗನ ಕಾಯಿಲೆ: ಆರೋಗ್ಯ ಸಚಿವರ ಬಳಿ ಚರ್ಚೆ*
ಮಂಗನ ಕಾಯಿಲೆಗೆ ಜಿಲ್ಲೆಯಲ್ಲಿ ಮೂವರು ಮೃತಪಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿ, ಆರೋಗ್ಯ ಸಚಿವರ ಬಳಿ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದರು.

*ಲೋಕಸಭೆಗೆ ತಯಾರಿ ಇನ್ನಷ್ಟು ತೀವ್ರಗೊಳಿಸಲಾಗುವುದು*
ಲೋಕಸಭೆಗೆ ತಯಾರಿ ನಡೆದಿದ್ದು,ಸಿದ್ಧತೆ ಇನ್ನಷ್ಟು ತೀವ್ರಗೊಳಿಸುವುದಾಗಿ ತಿಳಿಸಿದರು. ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಅಕ್ರಮ ಭೂ ಒತ್ತುವರಿಗೆ ಸಂಬಂಧಿಸಿದಂತೆ 25 ತಹಶೀಲ್ದಾರ ನೇಮಕಾತಿಯಾಗಿದ್ದು ವರದಿ ನೀಡಿದ್ದಾರೆ ಈ ಬಗ್ಗೆ ಪರಿಶೀಲನಾ ಹಂತದಲ್ಲಿದ್ದು, ಕಂದಾಯ ಸಚಿವರ ಬಳಿ ಮಾತನಾಡುವುದಾಗಿ ಹೇಳಿದರು.

ಆರ್.ಅಶೋಕ್ ಅವರು ಏನಾದರೂ ಮಾಡಿ ಕಾಂಗ್ರೆಸ್ ಗೆ ಮತ ಹಾಕಿ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಮತ ನೀಡಿ ಎಂದು ಕೇಳಿರಬಹುದು, ಏನಾದರೂ ಮಾಡಿ ಎಂದು ಕೇಳುತ್ತಾರೆಯೇ ಎಂದು ಪ್ರಶ್ನಿಸಿದರು.