ಬೆಳಗಾವಿ :
ಗಡಿನಾಡು ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಕೆಎಲ್‌ಇ ಸಂಸ್ಥೆಯು ಮತ್ತೊಂದು ಮೈಲ್ಲುಗಲ್ಲಿಗೆ ಸಾಕ್ಷಿಯಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ನೇತೃತ್ವದಲ್ಲಿ ಹಾಗೂ ಆಡಳಿತ ಮಂಡಳಿಯವರ ಇಚ್ಛಾಶಕ್ತಿಯಂತೆ ಆಂಗ್ಲ ಮಾಧ್ಯಮದ ಕೆಎಲ್‌ಇ ಸ್ಕೂಲ್ ಬುಧವಾರ ದಿನಾಂಕ 28 ರಂದು ಮುಂಜಾನೆ 10.30 ಗಂಟೆಗೆ ಉದ್ಘಾಟನೆಗೊಳ್ಳುತ್ತಿದೆ.

ಕೆಎಲ್ ಇ ಸಂಸ್ಥೆ ನೂತನ ಸ್ಕೂಲ್ ಉದ್ಘಾಟನೆ ಬಗ್ಗೆ ಕೆಎಲ್ ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೇಂದ್ರ ವಿದೇಶಾಂಗ ಸಚಿವ ಪದ್ಮ ಶ್ರೀ ಡಾ.ಎಸ್.ಜೈಶಂಕರ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಆಗಮಿಸಲಿದ್ದಾರೆ.
ಗೌರವ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರು ಮತ್ತು ಕರ್ನಾಟಕ ಸರ್ಕಾರದ ದೆಹಲಿ ಎರಡನೇ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ, ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ, ಚಿಕ್ಕೋಡಿ ಪುರಸಭೆಯ ಮಾಜಿ ಅಧ್ಯಕ್ಷ ಪ್ರವೀಣ ಕಾಂಬಳೆ ಆಗಮಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಎಸ್. ಕೌಜಲಗಿ ವಹಿಸಲಿದ್ದಾರೆ ಎಂದು ತಿಳಿಸಿದರು.

ಕೆಎಲ್‌ಇ ಸ್ಕೂಲ್, ಚಿಕ್ಕೋಡಿ,1916 ರಲ್ಲಿ ಸ್ಥಾಪನೆಗೊಂಡ ಕೆಎಲ್‌ಇ ಸಂಸ್ಥೆಯು 108 ವರ್ಷಗಳ ತನ್ನ ಚರಿತ್ರೆಯಲ್ಲಿ ಶೈಕ್ಷಣಿಕ, ಆರೋಗ್ಯ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಜಾಗತಿಕ ಮನ್ನಣೆಗೆ ಪಾತ್ರವಾಗಿದೆ. 1,38,000 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, 18,000 ಸಿಬ್ಬಂದಿ ವರ್ಗದವರು ಸೇವೆ ಸಲ್ಲಿಸುತ್ತಿದ್ದಾರೆ.
ಶಿಕ್ಷಣದ ಇಂದಿನ ಎಲ್ಲ ಬೇಕು-ಬೇಡಿಕೆಗಳನ್ನು ಪೂರೈಸಿರುವ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದ ಗುಣಾತ್ಮಕತೆಯನ್ನು ನೀಡುತ್ತಾ ಬಂದಿದೆ. ಶಿಶುವಿಹಾರದಿಂದ ಸ್ನಾತಕೋತ್ತರ ವರೆಗೆ ಮೌಲಿಕ ಶಿಕ್ಷಣವನ್ನು ನೀಡಿ ಅಗಾಧವಾಗಿ ಬೆಳೆದು ನಿಂತಿದೆ. ಅಸಂಖ್ಯ ಪ್ರತಿಭಾವಂತರನ್ನು ರೂಪಿಸಿದೆ. ರಾಷ್ಟ್ರಕ್ಕೆ ಅದ್ವಿತೀಯ ವೈದ್ಯರನ್ನು, ಅಭಿಯಂತರರನ್ನು, ಸಾಹಿತಿಗಳನ್ನು, ಉದ್ಯಮಿಪತಿಗಳನ್ನು, ಶಿಕ್ಷಕರನ್ನು ನೀಡಿದ ಖ್ಯಾತಿ ಕೆಎಲ್‌ಇ ಸಂಸ್ಥೆಯದು. ಸಂಸ್ಥೆಯ ಬಹುಸಂಖ್ಯೆಯ ಶಿಕ್ಷಣ ಸಂಸ್ಥೆಗಳು ಹಾಗೂ ಆರೋಗ್ಯ ಸೇವಾ ಕೇಂದ್ರಗಳು ಗ್ರಾಮೀಣ ಭಾಗದಲ್ಲಿಯೇ ಇರುವುದನ್ನು ಗಮನಿಸಬಹುದು. ರೈತರ, ಕಾರ್ಮಿಕ ವರ್ಗದ ಮಕ್ಕಳ ಶೈಕ್ಷಣಿಕ ವಿಕಾಸಕ್ಕಾಗಿ ಉನ್ನತ ದರ್ಜೆಯ ಶಿಕ್ಷಣ ಕೇಂದ್ರಗಳನ್ನು ಇಲ್ಲಿ ಸ್ಥಾಪಿಸಲಾಗಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನೇ ಕೇಂದ್ರವಾಗಿಟ್ಟುಕೊಂಡು ಅಂಕಲಿ, ನಿಪ್ಪಾಣಿ, ಹಾವೇರಿ, ಸವದತ್ತಿ, ಅಥಣಿ, ಗದಗ, ಗೋಕಾಕ, ಮಾಲೂರ, ಗಳತಗಾ, ಕೇರೂರ ಅಸಂಖ್ಯ ಗ್ರಾಮೀಣ ಪ್ರದೇಶಗಳಲ್ಲಿಯೇ ಕನ್ನಡ ಮತ್ತು ಆಂಗ್ಲಮಾಧ್ಯಮ ಶಾಲೆಗಳನ್ನು ಹುಟ್ಟುಹಾಕಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಇಲ್ಲೆಲ್ಲ ಕೆಎಲ್‌ಇ ಶಾಲೆಯ ಕಟ್ಟಡಗಳನ್ನು ನೋಡುವುದು ಒಂದು ವಿಸ್ಮಯ. ಅಂತರಾಷ್ಟ್ರೀಯ ಮಟ್ಟದ ಎಲ್ಲ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ.
ಕರ್ನಾಟಕ, ಮಹಾರಾಷ್ಟ್ರ ಮೊದಲ್ಗೊಂಡು 15 ಸಿಬಿಎಸ್‌ಸಿ ಶಾಲೆಗಳನ್ನು, 7 ರಾಜ್ಯ ಪಠ್ಯಕ್ರಮದ ಆಂಗ್ಲಮಾಧ್ಯಮ ಶಾಲೆಗಳನ್ನು ಕೆಎಲ್‌ಇ ಸಂಸ್ಥೆಯು ಮುನ್ನಡೆಸುತ್ತಿದೆ. ಈ ಶಾಲೆಗಳಲ್ಲಿ ಒಟ್ಟು 21,೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲಾ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಅಂತೆಯೇ ಚಿಕ್ಕೋಡಿಯ ಕೆಎಲ್‌ಇ ಸ್ಕೂಲ್ 2020 ರಲ್ಲಿ ಪ್ರಾರಂಭಗೊಂಡಿತು. 5 ಎಕರೆ ನಿವೇಶನದಲ್ಲಿ 1,೦5,೦೦೦ ಚ.ಅಡಿ ವಿಸ್ತೀರ್ಣದಲ್ಲಿ ಪ್ರಸ್ತುತ ಭವ್ಯವಾದ ಶಾಲೆಯ ಕಟ್ಟಡವನ್ನು 18 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅತ್ಯಂತ ವೈವಿಧ್ಯಪೂರ್ಣವಾಗಿರುವ ಈ ಶಾಲಾ ಕಟ್ಟಡದಲ್ಲಿ ವಿಶೇಷವಾದ ಹೈಟೆಕ್ ವರ್ಗಕೋಣೆಗಳಿವೆ. ಅತ್ಯಾಧುನಿಕವಾದ ಕಂಪ್ಯೂಟರ್ ಪ್ರಯೋಗಾಲಯಗಳನ್ನು, ಗ್ರಂಥಾಲಯ, ಕ್ರೀಡಾ ವಿಭಾಗ, ಸಂಗೀತ ತರಬೇತಿ ಹಾಗೂ ಭವ್ಯವಾದ ಉದ್ಯಾನವನವನ್ನು ಹೊಂದಿದೆ. ಸುತ್ತಮುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಬಸ್‌ನ ಸೌಲಭ್ಯವನ್ನು ಒದಗಿಸಲಾಗಿದೆ. ಆವರಣದಲ್ಲಿ ಸಿಸಿಟಿವಿ ಕ್ಯಾಮರಾಗಳು, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಶೌಚಾಲಯಗಳನ್ನು ಒದಗಿಸಲಾಗಿದೆ. ಪ್ರಸ್ತುತ ಶಾಲೆಯಲ್ಲಿ ನರ್ಸರಿಯಿಂದ 8 ನೇ ತರಗತಿಯ ವರೆಗೆ 4 ೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 5೦ ಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.