ಚಿಕ್ಕೋಡಿ : ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬಂಧಿಸಿ ಮಾ.16 ರಂದು ನೀತಿ ಸಂಹಿತೆ ಜಾರಿಯಾಗಿದ್ದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ ಮಾ. 16 ರಿಂದ ಏಪ್ರೀಲ್ 16ರ ವರೆಗೆ 1,16,68,350 ರೂ. ನಗದನ್ನು ವಶಕ್ಕೆ ಪಡೆಯಲಾಗಿರುತ್ತದೆ ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ ಶಿಂಧೆ ತಿಳಿಸಿರುತ್ತಾರೆ.

ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ 32 ಚೆಕ್ ಪೋಸ್ಟಗಳನ್ನು ನಿರ್ಮಿಸಲಾಗಿರುತ್ತದೆ. 148 ಸೆಕ್ಟೆರ ಅಧಿಕಾರಿಗಳು, 96 ಎಸ್.ಎಸ್.ಟಿ, 29 ಎಫ್.ಎಸ್.ಟಿ, 25 ವಿ.ಎಸ್.ಟಿ, 08 ವೀಡಿಯೋ ವೀವೀಂಗ ತಂಡಗಳನ್ನು ರಚಿಸಲಾಗಿದ್ದು ಈ ತಂಡಗಳು ದಿನದ ಇಪ್ಪತ್ತನಾಲ್ಕು ಗಂಟೆಯು ಕಾರ್ಯಪ್ರವೃತ್ತವಾಗಿರುತ್ತವೆ.

ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಏ.16 ರವರೆಗೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ರಚಿಸಲಾದ ವಿವಿಧ ಮಾದರಿ ನೀತಿ ಸಂಹಿತೆ ತಂಡಗಳು 1,16,68,350 ರೂ. ನಗದು, 7,05,036.74 ರೂ. ಮೌಲ್ಯದ 1948.151 ಲೀ. ಮದ್ಯ, 2,21,250 ರೂ. ಮೌಲ್ಯದ 8.813 ಕೆ.ಜಿ. ಮಾದಕ, ಅಮಲು ಪದಾರ್ಥಗಳು ಹಾಗೂ 9,88,205 ರೂ. ಮೌಲ್ಯದ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿರುತ್ತದೆ. ವಿವಿಧ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಒಟ್ಟು 79 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.

ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ಜರುಗಿಸಲು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿ ಸಹಾಯವಾಣಿಗಳನ್ನು ತೆರೆಯಲಾಗಿದ್ದು ಚಿಕ್ಕೋಡಿ ಲೋಕಸಭಾ ಚುನಾವಣಾಧಿಕಾರಿಗಳ ಕಾರ್ಯಾಲಯ 08338-272132,272130, ನಿಪ್ಪಾಣಿ-08338-220030, ಚಿಕೋಡಿ-ಸದಲಗಾ- 08338-272130, ಅಥಣಿ-08289-469501, ಕಾಗವಾಡ-08339-264555, ಕುಡಚಿ-9845986105, ರಾಯಬಾಗ-8867519106, ಹುಕ್ಕೇರಿ-08333-265036, ಯಮಕನಮರಡಿ-08333-200308 ಹಾಗೂ ಚುನಾವಣಾ ಸಹಾಯವಾಣಿ 1950 ಗೆ ಸಾರ್ವಜನಿಕರು ಕರೆ ಮಾಡಿ ಚುನಾವಣೆಗೆ ಸಂಬಂಧಿತ ಮಾಹಿತಿ ಹಾಗೂ ದೂರುಗಳನ್ನು ಸಲ್ಲಿಸಬಹುದಾಗಿರುತ್ತದೆ.

ಲೋಕಸಭಾ ಚುನಾವಣೆಗೆ ಸಂಬಂಧಿಸಿ ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲಿದ್ದು ಸಾರ್ವಜನಿಕರು ಐವತ್ತು ಸಾವಿರಕ್ಕಿಂತ ಹೆಚ್ಚಿನ ನಗದನ್ನು ಸಾಗಣೆ ಮಾಡುವಂತಿಲ್ಲ. ಪ್ರಚಾರ ಸಭೆ ಮತ್ತು ಸಮಾರಂಭ ನಡೆಸಲು ಸಂಬಂಧಪಟ್ಟ ಪ್ರಾಧಿಕಾರದಿಂದ, ಸಹಾಯಕ ಚುನಾವಣಾಧಿಕಾರಿ ಹಾಗೂ ಏಕಗವಾಕ್ಷಿ ವತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗಿರುತ್ತದೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ವೈಯಕ್ತಿಕ ನಿಂಧನೆ, ಧಾರ್ಮಿಕ ನಿಂಧನೆ, ಟೀಕೆ, ಅವಮಾನ, ಅವಹೇಳನಕಾರಿ ಭಾಷಣಗಳನ್ನು ಮಾಡದಂತೆ ಹಾಗೂ ಪ್ರಚಾರ ಕಾರ್ಯಕ್ಕೆ ಬಳಸಲಾಗುವ ವಾಹನಗಳಿಗೆ ಕಡ್ಡಾಯವಾಗಿ ಅನುಮತಿ ಪಡಯಬೇಕಾಗಿರುತ್ತದೆ ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.