ಬೆಳಗಾವಿ : ಬೆಳಗಾವಿ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ತೊಂದರೆಗೊಳಗಾದ ಮನೆಗಳಿಗೆ ಮೇಯರ್ ಸವಿತಾ ಕಾಂಬಳೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ನಾಗರಿಕರು ಪಾಲಿಕೆ ಮಳೆ ತುರ್ತು ಕಾರ್ಯಾಚರಣೆಗಳಿಗೆ ಸ್ಪಂದಿಸುತಿಲ್ಲ, 10-12 ದಿನಗಳಿಂದ ತಗ್ಗಿನ ಪ್ರದೇಶದಲ್ಲಿರುವ ನಿವಾಸಗಳಿಗೆ ಸತತ ನೀರು ನುಗ್ಗುತ್ತಿದೆ. ನಾಲೆ, ಗಟಾರುಗಳನ್ನು ಸ್ವಚ್ಛಗೊಳಿಸಿದ್ದರೆ ನೀರು ಮನೆಗಳಿಗೆ ನುಗುತ್ತಿರಲಿಲ್ಲ, ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಫೋಟ್೯ ರಸ್ತೆಯಲ್ಲಿರುವ ಚರಂಡಿ ಹಾಗೂ ನಾಲಾಗಳಲ್ಲಿನ ಹೂಳು ತೆಗೆಯಲು ತಕ್ಷಣದಿಂದ ಕ್ರಮಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹರಿದುಬಂದ ಮಳೆ ನೀರು ಚರಂಡಿ ನೀರಿನೊಂದಿಗೆ ಸೇರಿ ಶಿವಾಜಿ ನಗರದ ಸುತ್ತಲಿನ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ್ದು, ಪ್ರತಿ ಮಳೆಗಾಲದಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗುತ್ತಿದ್ದರೂ ಇದನ್ನು ತಡೆಗಟ್ಟಲು ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲವೆಂದು ಸಾರ್ವಜನಿಕರು ಮೇಯರ್ ಬಳಿ ಅಸಮಾಧಾನ ತೋಡಿಕೊಂಡರು.

ಬಳಿಕ ಮಾತನಾಡಿದ ಮೇಯರ್ ಎರಡು ದಿನಗಳಿಂದ ಬೆಳಗಾವಿ ನಗರದಲ್ಲಿ ಮಳೆ ಹೆಚ್ಚಾಗಿ ಆಗುತ್ತಿದೆ. ಇದರಿಂದ ತಗ್ಗು ಪ್ರದೇಶಗಳಿರುವ ಮನೆಗಳಿಗೆ ನೀರು ಹೋಗಿ ಜನರಿಗೆ ತೊಂದರೆಯಾಗುತ್ತಿದೆ. ನಗರದ ಪ್ರಮುಖ ಕಡೆಗಳಲ್ಲಿ ಪಾಲಿಕೆಯಿಂದ ಕಾಳಜಿ ಕೇಂದ್ರ ತೆರೆಯಲಾಗಿದೆ. ಮಳೆಯ ನೀರು ತಗ್ಗುವವರೆಗೂ ಸ್ಥಳಾಂತರವಾಗುವಂತೆ ಜನರಿಗೆ ಮನವಿ ಮಾಡಿದರಲ್ಲದೆ, ಮನೆ ಹಾನಿಯಾದವರಿಗೆ ಪಾಲಿಕೆಯಿಂದ ಪರಿಹಾರ ಕೊಡಿಸುವ ಕ್ರಮದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.