ಬೆಂಗಳೂರು: “ಸಿಎಂ ಕುರ್ಚಿ ಖಾಲಿಯಿಲ್ಲ. ಈ ಕುರ್ಚಿ ಖಾಲಿ ಇದ್ದಿದ್ದರೆ ಮಾತನಾಡಬಹುದಿತ್ತು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ನಡೆಯುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿ ಎನ್ನುವ ಆರ್.ವಿ.ದೇಶಪಾಂಡೆಯವರ ಹೇಳಿಕೆ ಬಗ್ಗೆ ಕೇಳಿದಾಗ ಹೀಗೆ ಉತ್ತರಿಸಿದರು.

“ಹಿರಿಯರಾದ ದೇಶಪಾಂಡೆ ಅವರು ಆಸೆ ಪಡುವುದು ತಪ್ಪಲ್ಲ. ಆದರೆ ಮಾಧ್ಯಮಗಳ ಮುಂದೆ ಮಾತನಾಡಬಾರದಿತ್ತು. ಹಿರಿಯರಾದ ಅವರಿಗೆ ಏನು ಗೌರವ ನೀಡಲಾಗುವುದೋ ಅದನ್ನು ನೀಡೋಣ” ಎಂದರು.

ನ್ಯಾಯಲಯದಲ್ಲಿ ಸಿದ್ದರಾಮಯ್ಯ ಅವರ ವಿರುದ್ದವಾಗಿ ತೀರ್ಪು ಬಂದರೆ ಮುಂದಿನ ನಡೆ ಏನು ಎಂದು ಕೇಳಿದಾಗ “ಯಾವುದೇ ವ್ಯತಿರಿಕ್ತವಾಗುವುದಿಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ. ಕೆಲಸ ಮಾಡುತ್ತಾರೆ” ಎಂದರು.

*ಕಾಂಗ್ರೆಸ್ ಬಗ್ಗೆ ಸಂಸದ ಸುಧಾಕರ್ ಪ್ರಮಾಣ ಪತ್ರ ನೀಡಲಿ*

ಕೋವಿಡ್ ವರದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಂಸದ ಡಾ.ಕೆ.ಸುಧಾಕರ್ ಅವರು, ಕಾಂಗ್ರೆಸ್ ಅವರು ಸತ್ಯಹರಿಶ್ಚಂದ್ರರೇ ಎನ್ನುವ ಹೇಳಿಕೆ ಬಗ್ಗೆ ಕೇಳದಾಗ “ಕಾಂಗ್ರೆಸ್ ಅಲ್ಲಿ ಇದ್ದು ಈಗ ಬಿಜೆಪಿಗೆ ಹೋಗಿರುವ ಸಂಸದ ಸುಧಾಕರ್ ಅವರು ತಮ್ಮ ಹೇಳಿಕೆಯ ಬಗ್ಗೆ ಮೊದಲು ಪ್ರಮಾಣ ಪತ್ರ ನೀಡಲಿ. ಅವರ ರಕ್ತ, ಆಚಾರ, ವಿಚಾರ ಎಲ್ಲವೂ ಕಾಂಗ್ರೆಸ್ ಇತ್ತು. ಈಗ ನಾಲ್ಕೈದು ವರ್ಷದಿಂದ ಬದಲಾಗಿದೆ” ಎಂದರು.

“ನಾನು ಕೋವಿಡ್ ಹಗರಣದ ವರದಿಯನ್ನು ಓದಿಲ್ಲ. ಕೇವಲ ಮಾಧ್ಯಮಗಳ ವರದಿಯನ್ನು ಮಾತ್ರ ಓದಿದ್ದೇನೆ. ವರದಿ ಪರಿಶೀಲನೆ ನಂತರ ಪ್ರತಿಕ್ರಿಯಿಸುತ್ತೇನೆ” ಎಂದು ಹೇಳಿದರು.

ಯಡಿಯೂರಪ್ಪ ಅವರ ವಿರುದ್ದ ದಾಖಲಾಗಿರುವ ಪೋಕ್ಸೋ ಪ್ರಕರಣದ ಶೀಘ್ರ ತನಿಖೆಗೆ ರಾಜ್ಯ ಮಹಿಳಾ ಆಯೋಗ ಸೂಚಿಸಿರುವ ಬಗ್ಗೆ ಕೇಳಿದಾಗ “ಇರ ಬಗ್ಗೆ ನನಗೆ ಮಾಹಿತಿಯಿಲ್ಲ” ಎಂದರು.

ಎತ್ತಿನಹೊಳೆ ಯೋಜನೆ 2027 ಕ್ಕೆ ಪೂರ್ಣ, ಸೆ.6ಕ್ಕೆ ಮೊದಲ ಹಂತದ ಕಾಮಗಾರಿಗಳ ಲೋಕಾರ್ಪಣೆ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು :
“ಎತ್ತಿನಹೊಳೆ ಯೋಜನೆ 2027 ಕ್ಕೆ ಪೂರ್ಣಗೊಳ್ಳಲಿದೆ. ಪ್ರಸ್ತುತ ಪಂಪ್ ಮಾಡಿದ ನೀರನ್ನು 132 ಕಿ.ಮೀ ದೂರದ ವಾಣಿವಿಲಾಸ ಸಾಗರಕ್ಕೆ ಹರಿಸಲಾಗುತ್ತದೆ. ಅರಣ್ಯ ಭೂಮಿ ತಕರಾರು ಬಗೆಹರಿಸಿ ಮುಂದಿನ 140 ಕಿ.ಮೀ ಕಾಮಗಾರಿ ಪೂರ್ಣಗೊಳಿಸಿ, ತುಮಕೂರಿಗೆ ನೀರು ಹರಿಸಲಾಗುವುದು. ಮೊದಲ ಹಂತದ ಕಾಮಗಾರಿಗಳನ್ನು ಸೆ.6ರಂದು ಲೋಕಾರ್ಪಣೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು “ಹೆಬ್ಬನಹಳ್ಳಿ ವಿತರಣಾ ತೊಟ್ಟಿ 4 ರಿಂದ 32 ಕಿ. ಮೀ. ದೂರದಲ್ಲಿ ಎಸ್ಕೇಪ್ ಚಾನೆಲ್ ಮಾಡಿದ್ದು, ಅಲ್ಲಿಂದ ನಾಲೆ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲಾಗುವುದು. ನವೆಂಬರ್ 1 ರ ವೇಳೆಗೆ ಸುಮಾರು 5 ಟಿಎಂಸಿ ನೀರನ್ನು ಮೇಲಕ್ಕೆ ಎತ್ತಲಾಗುವುದು. ಅರಣ್ಯ ಇಲಾಖೆಯಿಂದ 502 ಎಕರೆ ಜಮೀನು ಪಡೆಯಬೇಕಾಗಿದ್ದು, ಇದಕ್ಕೆ ಬದಲಿಯಾಗಿ ನಾವು 452 ಎಕರೆ ಜಮೀನು ನೀಡಿದ್ದೇವೆ. ಮುಂದಿನ 4 ತಿಂಗಳಲ್ಲಿ ಈ ಕೆಲಸ ಮುಗಿಯಲಿದ್ದು, ಆನಂತರ ತುಮಕೂರು ಭಾಗದ ಕೆಲಸವನ್ನು ತ್ವರಿತವಾಗಿ ಮುಗಿಸಲಾಗುವುದು” ಎಂದು ಹೇಳಿದರು.

“ಯೋಜನೆಯ ಒಟ್ಟು 24 ಟಿಎಂಸಿ ನೀರನ್ನು ಕುಡಿಯುವ ನೀರು ಹಾಗೂ ಕೆರೆಗಳನ್ನು ತುಂಬಿಸಲು ಬಳಸಿಕೊಳ್ಳಲಾಗುವುದು. ರೈತರು ತಮ್ಮ ಜಮೀನುಗಳನ್ನು ನೀಡಿ ಸಹಕಾರ ನೀಡಿದ್ದಾರೆ. ನೀರನ್ನು ಎತ್ತಲು ಸಾಧ್ಯವಿಲ್ಲ ಎಂದು ಒಂದಷ್ಟು ಜನ ಅಪಸ್ವರ ಎತ್ತಿದ್ದರು. ನಾನು ಇಲಾಖೆಯ ಜವಾಬ್ದಾರಿವಹಿಸಿಕೊಂಡ ಮೇಲೆ ಕಾರ್ಯಪ್ರವೃತ್ತವಾಗಿ ಈ ಯೋಜನೆ ಪೂರ್ಣಗೊಳಿಸಲು ಮುಂದಾದೆ. ಯೋಜನೆಯ ವಿರುದ್ಧವಾಗಿ ಒಂದಷ್ಟು ಜನ ಬ್ಲಾಕ್ ಮೇಲ್ ಮಾಡುತ್ತಿದ್ದರು ಅದನ್ನು ನಿವಾರಿಸಲಾಯಿತು. ಹಿಂದಿನ ಸರ್ಕಾರವು ಸಾಕಷ್ಟು ಪ್ರಯತ್ನ ಪಟ್ಟಿತ್ತು, ಆದರೆ ಸಹಕಾರ ಸಿಕ್ಕಿರಲಿಲ್ಲ” ಎಂದು ತಿಳಿಸಿದರು.

*12.05 ನಿಮಿಷಕ್ಕೆ ಲೋಕಾರ್ಪಣೆ*

“ಸೆ. 6 ಶುಕ್ರವಾರದಂದು 12.05 ನಿಮಿಷಕ್ಕೆ ಯೋಜನೆಯ ಪ್ರಮುಖ ಜಾಗದಲ್ಲಿ ನೀರನ್ನು ಮೇಲಕ್ಕೆ ಎತ್ತುವ ಪಂಪ್ ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡುತ್ತಾರೆ. ಒಂದಷ್ಟು ಪ್ರಮುಖ ಭಾಗಗಳಲ್ಲಿ 10.30 ಒಳಗೆ ಸಚಿವರುಗಳು ಚಾಲನೆ ನೀಡುತ್ತಾರೆ. ಗೌರಿ ಹಬ್ಬದ ಶುಭದಿನದಂದು ಗಂಗಾ ಮಾತೆಗೆ ಪೂಜೆ ಸಲ್ಲಿಸಲಾಗುವುದು” ಎಂದರು.

“ಪ್ರಾಯೋಗಿಕ ಪರೀಕ್ಷೆ ನಡೆಸುವುದಕ್ಕೆ ಮುಂಚೆ ಒಂದಷ್ಟು ಕಡೆ ನೀರು ಸೋರಿಕೆಯಾಗಿತ್ತು. ಇದನ್ನೂ ಸಹ ಸರಿಪಡಿಸಲಾಗಿದೆ. ಸಣ್ಣ, ನದಿ, ತೊರೆಗಳಿಂದ ಎತ್ತುವ ನೀರನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಧ್ಯಯನ ಮಾಡಲು ಪ್ರತ್ಯೇಕ ತಂಡ ರಚಿಸಲಾಗಿದೆ. ಅವರು ಅಧ್ಯಯನ ನಡೆಸಿ ವರದಿ ನೀಡುತ್ತಾರೆ” ಎಂದರು.

“ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರದ ಸ್ವಲ್ಪ ಭಾಗ, ತುಮಕೂರು, ಹಾಸನ, ಹಾಗೂ ಚಿಕ್ಕಮಗಳೂರು ಸೇರಿದಂತೆ ಒಟ್ಟು 7 ಜಿಲ್ಲೆಗಳ ಜನರಿಗೆ ಅನುಕೂಲವಾಗುವುದು. ಎಲ್ಲಾ ಪಕ್ಷಗಳ ಮುಖಂಡರು ಹಾಗೂ ರೈತ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಆಹ್ವಾನ ಪತ್ರಿಕೆ ಇಲ್ಲ ಎಂದು ಬೇಸರಿಸಬೇಡಿ ಮಾಧ್ಯಮಗಳ ಮೂಲಕ ಹಾಗೂ ಪತ್ರಿಕಾ ಜಾಹೀರಾತಿನ ಮೂಲಕ ವೈಯಕ್ತಿಕವಾಗಿ ಆಹ್ವಾನ ಮಾಡುತ್ತೇನೆ. ತೊರೆ ಕಾಡನಹಳ್ಳಿಯಿಂದ ಬೆಂಗಳೂರಿಗೆ ನೀರು ಸರಬರಾಜು ಆಗುತ್ತಿರುವುದಕ್ಕಿಂತ ಬೃಹತ್ ಪಂಪ್ ಗಳನ್ನು ಎತ್ತಿನಹೊಳೆ ಯೋಜನೆಯಲ್ಲಿ ಅಳವಡಿಸಲಾಗಿದೆ” ಎಂದರು.

*ತುಂಗಭದ್ರಾ ಅಣೆಕಟ್ಟಿನಲ್ಲಿ 98 ಟಿಎಂಸಿ ನೀರು ಸಂಗ್ರಹ*

“ತುಂಗಭದ್ರಾ ಅಣೆಕಟ್ಟು ಮತ್ತೆ ತುಂಬುತ್ತಿರುವುದು ಸಂತಸದ ವಿಚಾರ. 105.79 ಸಾಮರ್ಥ್ಯದ ಅಣೆಕಟ್ಟಿನಲ್ಲಿ ಪ್ರಸ್ತುತ ಸುಮಾರು 98 ಟಿಎಂಸಿ ನೀರು ಸಂಗ್ರಹಗೊಂಡಿದೆ. ನಿವೃತ್ತ ಎಂಜಿನಿಯರ್ ಕನ್ನಯ್ಯ ನಾಯ್ಡು ಅವರ ಮಾರ್ಗದರ್ಶನದಲ್ಲಿ ಸುಮಾರು 108 ಜನ ಹಗಲು ರಾತ್ರಿ ಅಧಿಕಾರಿಕಾರಿಗಳು, ಕಾರ್ಮಿಕ ವರ್ಗ ಕೆಲಸ ಮಾಡಿದ್ದಾರೆ. ಇವರಿಗೆ ಗೌರವ ಸಲ್ಲಿಸಿ ಪ್ರಶಸ್ತಿ ಪತ್ರ ನೀಡಬೇಕು ಎಂದು ಸರ್ಕಾರ ನಿರ್ಧರಿಸಿದೆ” ಎಂದರು.

“ತುಂಗಭದ್ರಾ ಕ್ರಸ್ಟ್ ಗೇಟ್ ಅವಘಡ ಸಂಭವಿಸಿದಾಗ ಸಾಕಷ್ಟು ಜನ ನೀರನ್ನು ಹೊರಗೆ ಬಿಡಬೇಡಿ ಎಂದರು. ನಾನು ತಂತ್ರಜ್ಞರ ಬಳಿ ಚರ್ಚೆ ನಡೆಸಿ ಅಣೆಕಟ್ಟಿನ ಉಳಿವಿಗಾಗಿ ಕಠಿಣ ನಿರ್ಧಾರ ತೆಗೆದುಕೊಂಡೆ. ರೈತರು ಬೆಳೆ ಹಾಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರೂ ನೀರನ್ನು ಹೊರಗೆ ಬಿಡಬೇಕಾಯಿತು. ಅವಘಡ ನಡೆದ 3 ಗಂಟೆಗಳಲ್ಲಿ ಗೇಟಿನ ವಿನ್ಯಾಸವನ್ನು ಮೂರು ಎಂಜಿನಿಯರಿಂಗ್ ಸಂಸ್ಥೆಗಳಿಗೆ ನೀಡಿ ತಯಾರಿಸಲು ಸೂಚನೆ ನೀಡಿದೆವು. ಈ ಕಾರ್ಯವನ್ನು ಇಡೀ ದೇಶವೇ ಗಮನಿಸುತ್ತಿತ್ತು. ಕೇವಲ 4 ದಿನಗಳಲ್ಲಿ ನೂತನ ಗೇಟ್ ಅನ್ನು ಅಳವಡಿಸಲಾಯಿತು. ಶೇ.50 ರಷ್ಟು ನೀರು ಪೋಲಾಯಿತು” ಎಂದು ಹೇಳಿದರು.

“ಎತ್ತಿನಹೊಳೆ ಕಾರ್ಯಕ್ರಮ ಮುಗಿದ ತಕ್ಷಣ ತುಂಗಭದ್ರಕ್ಕೂ ಬಾಗಿನ ಅರ್ಪಿಸಲಾಗುವುದು. ಆ ಭಾಗದ ರೈತರ ಪ್ರಾರ್ಥನೆಗೆ ಫಲ ಸಿಕ್ಕಿದೆ. ವಿರೋಧ ಪಕ್ಷಗಳ ನಾಯಕರು ಮಾಡಿದ ಟೀಕೆಗಳನ್ನು ಮಾಧ್ಯಮಗಳು ಜನರಿಗೆ ತಿಳಿಸಬೇಕು, ಜೊತೆಗೆ ನಮ್ಮ ಕೆಲಸವನ್ನೂ ಪ್ರಚಾರ ಮಾಡಬೇಕು” ಎಂದರು.

“ಗೇಟ್ ತುಂಡಾದ ಅವಘಡ ಸಂಭವಿಸಿದ ಮೇಲೆ ಸೆಕ್ಷನ್ 38, 39 ಅಣೆಕಟ್ಟು ಸಂರಕ್ಷಣಾ ಕಾಯ್ದೆ ಪ್ರಕಾರ, ನೂತನವಾಗಿ ಸಂರಕ್ಷಣಾ ಪರಿಶೀಲನಾ ಸಮಿತಿಯನ್ನು ಸಿಡ್ಬ್ಲೂಸಿ ಮಾಜಿ ಅಧ್ಯಕ್ಷರಾಗಿದ್ದ ಎ.ಕೆ.ಬಜಾಜ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಈಗಾಗಲೇ ಸಮಿತಿ ಕೆಲಸ ಮಾಡುತ್ತಿದೆ. ತುಂಗಭದ್ರಾ ಗೇಟುಗಳ ವಿಚಾರವಾಗಿ ಸಭೆ ನಡೆಸಲಾಗಿದೆ” ಎಂದರು.

“ಕಬಿನಿ ಅಣೆಕಟ್ಟು ಕೂಡ ಅಪಾಯದಲ್ಲಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿದ್ದವು. ಆ ನಂತರ ಈ ಸಮಿತಿ ಅಲ್ಲಿಗೂ ತೆರಳಿ ನೀರಿನ ಆಳಕ್ಕೆ ಇಳಿದು ಪರಿಶೀಲನೆ ನಡೆಸಿದೆ. ನನ್ನ ಸೂಚನೆಗಳನ್ನು ಕಾಯಬೇಡಿ, ಯಾವುದಾದರೂ ತೊಂದರೆ ಇದ್ದರೆ ಕೂಡಲೇ ಕಾರ್ಯಪ್ರವೃತ್ತರಾಗಿ ಎಂದು ಸೂಚಿಸಿದ್ದೇನೆ. ಈ ಸಮಿತಿ ವರದಿ ನೀಡುವ ತನಕ ಇದರ ಬಗ್ಗೆ ನಾನು ಮಾಹಿತಿ ನೀಡಲು ಆಗುವುದಿಲ್ಲ” ಎಂದು ಹೇಳಿದರು.

ಬಿಬಿಎಂಪಿ ವಲಯದಲ್ಲಿ ʼನಂಬಿಕೆ ನಕ್ಷೆʼ ಯೋಜನೆಗೆ ಚಾಲನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು:
“ಕಟ್ಟಡ ನಕ್ಷೆ ಮಂಜೂರಾತಿ ವಿಚಾರದಲ್ಲಿ ಬೆಂಗಳೂರು ನಗರದ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ʼನಂಬಿಕೆ ನಕ್ಷೆʼ ಯೋಜನೆ ಜಾರಿಗೆ ತರಲಾಗುತ್ತಿದೆ. ಜನರೇ ತಮ್ಮ ಕಟ್ಟಡ ನಕ್ಷೆಯನ್ನು ಅನುಮೋದಿತ ಕಟ್ಟಡ ವಿನ್ಯಾಸಕಾರರು ಅಥವಾ ಎಂಜಿನಿಯರ್ ಗಳ ಬಳಿ ಅನುಮೋದಿಸಿಕೊಂಡು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಮಂಜೂರಾತಿ ಪಡೆದುಕೊಳ್ಳುವ ಯೋಜನೆ ಇದಾಗಿದೆ. 50/80 ವಿಸ್ತೀರ್ಣದ ವರೆಗಿನ ನಿವೇಶನಗಳಿಗೆ ಈ ಯೋಜನೆ ಅನ್ವಯವಾಗಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು “ಬಿಡಿಎ, ಗೃಹನಿರ್ಮಾಣ ಸಂಘದವರು 50/80 ವಿಸ್ತೀರ್ಣದ ವರೆಗಿನ ನಿವೇಶನಗಳನ್ನೇ ಹೆಚ್ಚಾಗಿ ಅಭಿವೃದ್ಧಿಪಡಿಸಿರುತ್ತಾರೆ. ಇಷ್ಟು ವಿಸ್ತೀರ್ಣದ ನಿವೇಶನದಲ್ಲಿ ಮನೆ ನಿರ್ಮಾಣ ಹಾಗೂ ನವೀಕರಣಕ್ಕೆ ಜನರು ಯಾವುದೇ ತೊಂದರೆಯಿಲ್ಲದೇ ಮುಂದಾಗಬಹುದು. ಅನುಮೋದಿತ ಲೆಕ್ಕ ಪರಿಶೋದಕರಂತೆ ಅನುಮೋದಿತ ಎಂಜಿನಿಯರ್ ಗಳು ಹಾಗೂ ಕಟ್ಟಡ ವಿನ್ಯಾಸಕಾರರ ಮೂಲಕ ತಾತ್ಕಾಲಿಕ ಕಟ್ಟಡ ನಕ್ಷೆಗೆ ಅನುಮತಿ ನೀಡಲಾಗುವುದು. ನಂತರ ಪಾಲಿಕೆಯ ಎಂಜಿನಿಯರ್ ಗಳು ಪರಿಶೀಲನೆ ನಡೆಸುತ್ತಾರೆ” ಎಂದರು.

“ಮೊದಲು ಬಿಬಿಎಂಪಿಯ 2 ವಲಯಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಯಶಸ್ವಿಯಾಗಿ ಜಾರಿಯಾದ ಈ ಯೋಜನೆಯ ಸಾಧಕ ಭಾದಕಗಳನ್ನು ಸರಿಪಡಿಸಿ ಪ್ರಸ್ತುತ ಬಿಬಿಎಂಪಿಯ ಎಲ್ಲಾ ವಲಯಗಳಿಗೆ ವಿಸ್ತರಿಸಲಾಗುತ್ತಿದೆ. ಇದರಿಂದ ಜನರು ಪಾಲಿಕೆಗೆ ಅಲೆಯುವುದು ತಪ್ಪುತ್ತದೆ” ಎಂದು ಹೇಳಿದರು.

*ನಗರದಾದ್ಯಂತ 2,795 ರಸ್ತೆಗುಂಡಿಗಳು, ಪ್ರಮುಖ ರಸ್ತೆಗಳ ದುರಸ್ತಿಗೆ ರೂ. 660 ಕೋಟಿ*

“ಬಿಬಿಎಂಪಿ ವಲಯದಲ್ಲಿ 2,795 ರಸ್ತೆಗುಂಡಿಗಳನ್ನು ಗುರುತಿಸಲಾಗಿದೆ ಎಲ್ಲಾ ರಸ್ತೆ ಗುಂಡಿಗಳನ್ನು ಮುಂದಿನ 15 ದಿನಗಳಲ್ಲಿ ಸಂಪೂರ್ಣವಾಗಿ ಮುಚ್ಚಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ರೂ. 660 ಕೋಟಿ ವೆಚ್ಚದಲ್ಲಿ ಪ್ರಮುಖ ರಸ್ತೆಗಳನ್ನು ದುರಸ್ತಿ ಕೆಲಸ ಕೈಗೆತ್ತಿಕೊಳ್ಳಲಾಗುವುದು” ಎಂದರು.

“ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದಾಗ ಮುಖ್ಯರಸ್ತೆಗಳನ್ನು ಬಿಟ್ಟು ಒಳ ರಸ್ತೆಗಳಲ್ಲಿ ಓಡಾಡಿದೆ. ಅವರಿಗಿಂತ ನಾವೇ ಎಷ್ಟೋ ಮುಂದಿದ್ದೇವೆ. ಅವರನ್ನು ಟೀಕೆ ಮಾಡುತ್ತಿಲ್ಲ, ಅಲ್ಲಿನ ಪರಿಸ್ಥಿತಿ ಬೇರೆ ಇರಬಹುದು” ಎಂದರು.

“ಮಳೆ ಬಂದ ತಕ್ಷಣ ನಗರದಾದ್ಯಂತ ಎಲ್ಲೆಲ್ಲಿ ನೀರು ನಿಲ್ಲುತ್ತಿತ್ತು, ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಜನರಿಗೆ ತೊಂದರೆ ಉಂಟಾಗುತ್ತಿತ್ತು ಅವುಗಳನ್ನು ಭಾಗಶಃ ಸರಿ ಪಡಿಸಲಾಗಿದೆ. ಇದಕ್ಕಾಗಿ ಅಧಿಕಾರಿಗಳಿಗೆ ಅಭಿನಂದನೆಗಳು” ಎಂದು ಹೇಳಿದರು.

“ರಾಜಕಾಲುವೆಯ 50 ಮೀ. ಸುತ್ತಳತೆಯಲ್ಲಿ ಯಾವುದೇ ನಿರ್ಮಾಣ ಕಾರ್ಯಗಳನ್ನು ಮಾಡುವಂತಿಲ್ಲ ಎಂದು ಎನ್ ಜಿಟಿಯ ನಿಯಮಗಳು ಸೇರಿದಂತೆ ಒಂದಷ್ಟು ನಿಯಮಗಳಿಗೆ. ಪ್ರಸ್ತುತ 300 ಕಿ.ಮೀ ಅನ್ನು ಗುರುತಿಸಿ 30 ಅಡಿ ರಸ್ತೆ ನಿರ್ಮಾಣ ಮಾಡಲಾಗುವುದು. ಭೂಮಿ ಬಿಟ್ಟುಕೊಡುವ ಖಾಸಗಿ ಜಮೀನುಗಳ ಮಾಲೀಕರಿಗೆ ಪರಿಹಾರವಾಗಿ ಟಿಡಿಆರ್ ನೀಡಲಾಗುವುದು. ಅದನ್ನು ಅವರು ಮಾರಾಟ ಮಾಡಿಕೊಳ್ಳಬಹುದು” ಎಂದರು.

“ಹೆಬ್ಬಾಳ, ನಾಗಾವರ, ಬೆಳ್ಳಂದೂರು ಅಕ್ಕಪಕ್ಕ, ಬೆಂಗಳೂರು ದಕ್ಷಿಣ ಭಾಗದಲ್ಲಿ ಒಂದಷ್ಟು ಕಡೆ ಭೂಮಿ ಗುರುತಿಸಲಾಗಿದೆ. ಮೊದಲ ಹಂತದಲ್ಲಿ 100 ಕಿ.ಮೀ ದೂರ ಕೆಲಸ ಮಾಡಲಾಗುವುದು. ಇದಕ್ಕಾಗಿ ರೂ. 200 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಈ ವಿಚಾರವನ್ನು ಕ್ಯಾಬಿನೆಟ್, ಸಚಿವರ ಸಭೆ ಹಾಗೂ ವಿರೋಧ ಪಕ್ಷಗಳ ನಾಯಕರೊಟ್ಟಿಗೆ ನಡೆದ ಸಭೆಗಳಲ್ಲೂ ಪ್ರಾಸ್ತಪಿಸಲಾಗಿದೆ. ಈ ರಸ್ತೆಗಳಲ್ಲಿ ಬಸ್ ಓಡಾಟಕ್ಕೆ ಅವಕಾಶವಿಲ್ಲ. ಬದಲಾಗಿ ಶಾಲಾ, ನಾಗರಿಕರ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗುವುದು” ಎಂದು ಮಾಹಿತಿ ನೀಡಿದರು.

*ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ 100 ವರ್ಷ: ಶಾಲಾ ಮಕ್ಕಳಿಂದ ಸ್ವಚ್ಚತೆ ಬಗ್ಗೆ ಅರಿವು*

“ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಕರ್ನಾಟಕದಲ್ಲಿ ಅಧಿಕಾರ ವಹಿಸಿಕೊಂಡು 100 ವರ್ಷಗಳು ಸಂದಿವೆ. ಇದಕ್ಕಾಗಿ ನಗರದಾದ್ಯಂತ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಗುವುದು. ಇದೇ ವೇಳೆ ಒಂದು ಸಾವಿರ ಶಾಲಾ ಮಕ್ಕಳು ಆನ್ ಲೈನ್ ಮೂಲಕ ಪತಿಜ್ಞಾವಿಧಿ ತೆಗೆದುಕೊಳ್ಳಲಿದ್ದಾರೆ” ಎಂದರು.

“ರಸ್ತೆ ಬದಿ ಹಾಗೂ ರಸ್ತೆಗಳಲ್ಲಿ ಕಸ ಎಸೆಯುವುದರ ವಿರುದ್ಧ ಜಾಗೃತಿ ಮೂಡಿಲಾಗುವುದು. ಮಕ್ಕಳಿಂದ ಕಸ ಎಸೆಯುವವರಿಗೆ ತಿಳಿಹೇಳುವ ಕೆಲಸ ಮಾಡಲಾಗುವುದು. ಅಕ್ಟೋಬರ್ 2 ರಂದು ಈ ಕಾರ್ಯಕ್ರಮ ರೂಪಿಸಲಾಗಿದೆ” ಎಂದರು.

*ಪ್ರಶ್ನೋತ್ತರ*

*ಬೈಕ್ ಅಲ್ಲಿ ನಗರ ಪ್ರದಕ್ಷಿಣೆ ಮಾಡುವೆ*

ರಸ್ತೆಗುಂಡಿ ಸಮಸ್ಯೆ ಹೆಚ್ಚಾಗುತ್ತಿರುವ ಬಗ್ಗೆ ಕೇಳಿದಾಗ “ಸಾರ್ವಜನಿಕರಿಗಾಗಿ ʼರಸ್ತೆ ಗುಂಡಿ ಗಮನʼ ಎನ್ನುವ ಆಪ್ ಅನ್ನು ಪರಿಚಯಿಸಿದ್ದು ಅದರಲ್ಲಿ ಗುಂಡಿಗಳ ಫೋಟೋ ತೆಗೆದು ಅಪ್ ಲೋಡ್ ಮಾಡುವ ವ್ಯವಸ್ಥೆ ರೂಪಿಸಲಾಗಿದೆ. ರಸ್ತೆಗಳ ವೀಕ್ಷಣೆಗೆ ಎಂದೇ ನನ್ನ ಹಳೆಯ ಬೈಕ್ ದುರಸ್ತಿ ಮಾಡಿಸಿದ್ದೇನೆ. ಅಧಿಕಾರಿಗಳು ಮುಖ್ಯರಸ್ತೆಗಳನ್ನು ಮಾತ್ರ ತೋರಿಸುತ್ತಾರೆ, ಅದಕ್ಕೆ ಒಳ ರಸ್ತೆಗಳನ್ನು ಬೈಕ್ ಅಲ್ಲಿ ಓಡಾಡಿ ವೀಕ್ಷಿಸುತ್ತೇನೆ. ಜೊತೆಗೆ ಕಮಿಷನರ್ ಕೂರಿಸಿಕೊಂಡು ಒಂದು ಸುತ್ತು ಹೋಗುತ್ತೇನೆ” ಎಂದರು.

ಬಿಬಿಎಂಪಿ ಗುತ್ತಿಗೆದಾರರು ಬಿಲ್ ಬಾಕಿ ಬಗ್ಗೆ ಪ್ರತಿಭಟನೆ ವಿಚಾರ ಕೇಳಿದಾಗ “ಗುತ್ತಿಗೆದಾರರ ನೋವು ನನಗೂ ಅರ್ಥವಾಗುತ್ತದೆ. ಶೇ.50 ರಷ್ಟಿದ್ದ ಬಿಲ್ ಬಾಕಿಯನ್ನು ಶೇ.75 ಕ್ಕೆ ಇಳಿಸಿದ್ದೇನೆ. ಒಂದಷ್ಟು ಭಾಗ ಆಯೋಗದ ಮುಂದಿದೆ. ಇದು ಇತ್ಯರ್ಥವಾದ ನಂತರ ಕಾನೂನಾತ್ಮಕವಾಗಿ ಹೇಗೆ ಸಹಾಯ ಮಾಡಲಾಗುವುದೋ ಆ ರೀತಿ ಅವರ ನೆರವಿಗೆ ನಿಲ್ಲಲಾಗುವುದು” ಎಂದರು.

“ಗುತ್ತಿಗೆದಾರರು ಪ್ರತಿಭಟನೆ ಮಾಡುತ್ತೇನೆ. ಕೆಲಸ ಮಾಡುವುದಿಲ್ಲ ಎಂದರೆ ಮತ್ತೊಬ್ಬ ಬಂದು ಕೆಲಸ ನಿರ್ವಹಿಸುತ್ತಾನೆ. ಇವರು ಮಾಡುವುದಿಲ್ಲ ಎಂದರೆ ಮತ್ತೊಬ್ಬ. ಸರ್ಕಾರವನ್ನು ಬ್ಲಾಕ್ ಮೇಲ್ ಮಾಡಬಾರದು” ಎಂದರು.

ಕೆ.ಆರ್.ಪುರಂ ವಾರ್ಡಿನಲ್ಲಿ ನೀರಿನ ಸಮಸ್ಯೆ ಬಗೆಹರಿದಿಲ್ಲ ಎನ್ನುವುದರ ಬಗ್ಗೆ ಕೇಳಿದಾಗ “ಇನ್ನೊಂದು ವಾರದಲ್ಲಿ ಐದನೇ ಹಂತದ ನೀರು ಸರಬರಾಜು ಯೋಜನೆ ಪ್ರಾರಂಭ ಮಾಡಲಾಗುವುದು. ಇದರ ಬಗ್ಗೆ ಆ ಭಾಗದ ಶಾಸಕರು ಗಮನ ಸೆಳೆದಿದ್ದಾರೆ. ಆದಷ್ಟು ಬೇಗ ಬಗೆಹರಿಸಲಾಗುವುದು” ಎಂದರು.