ಮಾಗಡಿ: ಹೈನುಗಾರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಾಲಿನ ದರ ಹೆಚ್ಚಳ ಮಾಡಲು ನಿರ್ಧರಿಸಿದ್ದು, ಹೆಚ್ಚಳ ಮಾಡಿದ ದರವನ್ನೆಲ್ಲ ರೈತರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ನೀವು (ರೈತರು) ನಮ್ಮ ಪರ ಮಾತನಾಡುತ್ತೀರಾ ಅನ್ನುವುದಾದರೆ ಹಾಲಿನ ದರ ಹೆಚ್ಚಳ ಮಾಡುತ್ತೇನೆಂದು ಹೇಳಿದರು. ಇದಕ್ಕೆ ಸಭಿಕರ ಸಾಲಿನಲ್ಲಿದ್ದ ರೈತರು ಚಪ್ಪಾಳೆ ತಟ್ಟಿದಾಗ ಹಾಲಿನ ದರ ಹೆಚ್ಚಳ ಮಾಡುತ್ತೇನೆ. ಹೆಚ್ಚಳ ಮಾಡಿದ ಹಣವನ್ನೆಲ್ಲ ಹೈನುಗಾರರಿಗೆ ಕೊಡುತ್ತೇವೆ ಎಂದರು.
ಹಾಲಿನ ದರ ಹೆಚ್ಚಳ ಮಾಡುವ ಜೊತೆಗೆ ಡೇರಿಗಳಿಗೆ ಪ್ರತಿ ಲೀಟರ್ ಹಾಲಿಗೆ 20 ಪೈಸೆ ಕೊಡಬೇಕೆಂದು ಹಾಲು ಒಕ್ಕೂಟದವರು ಕೇಳುತ್ತಿದ್ದಾರೆ. ಕೆಎಂಎಫ್ ಹಾಗೂ ಹಾಲು ಒಕ್ಕೂಟಗಳ ಅಧ್ಯಕ್ಷರ ಸಭೆ ಕರೆದು ಚರ್ಚಿಸಿ ತೀರ್ಮಾನ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಈ ಹಿಂದೆ ಸಹಕಾರ ಸಚಿವ ರಾಜಣ್ಣರವರು ಹಾಲಿನ ದರ ಹೆಚ್ಚಳ ಮಾಡುವಂತೆ ಹೇಳಿದ್ದರು. ಇದಕ್ಕೆ ವಿಪಕ್ಷಗಳು ಲಬಲಬ ಅಂತ ಬಾಯಿ ಬಡಿದುಕೊಂಡರು. ಇದನ್ನು ನೀವು ಜೋರಾಗಿ ಪ್ರಶ್ನೆ ಮಾಡಬೇಕಿತ್ತಲ್ಲವೇ. ಅಷ್ಟಕ್ಕೂ
ಹಾಲಿಗೆ 5 ರುಪಾಯಿ ಪ್ರೋತ್ಸಾಹ ಧನ ಹೆಚ್ಚಳ ಮಾಡಿದ್ದು ಯಾರು. ಕುಮಾರಸ್ವಾಮಿನಾ, ಬೊಮ್ಮಾಯಿನಾ.?
ಪ್ರೋತ್ಸಾಹ ಹಣ ಹೆಚ್ಚಳ ಮಾಡಿದ್ದು ನಾನು. ಸರ್ಕಾರಿ ಶಾಲೆ ಮಕ್ಕಳಿಗೆ ಹಾಲು ಕೊಡಲು ಕ್ಷೀರ ಭಾಗ್ಯ ಕಾರ್ಯಕ್ರಮ ಘೋಷಣೆ ಮಾಡಿದೆ. ಇದರಿಂದ ಹೈನುಗಾರರಿಗೆ ಅನುಕೂಲ ಆಯಿತು. ಹಿಂದಿನ ಸರ್ಕಾರ ಈ ಕೆಲಸ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.ಮಣ್ಣಿನ ಮಕ್ಕಳು, ರೈತರ ಮಕ್ಕಳು ಈ ಕೆಲಸ ಮಾಡಲಿಲ್ಲ. ನಾವು ಕುರಿಕಾಯುವವರು, ಎಮ್ಮೆ ಕಾಯುವವರು, ಆಹಾರ ಉತ್ಪಾದನೆ ಮಾಡುವವರ ಮಕ್ಕಳು. ಇವರು ಮಾತೆತ್ತಿದರೆ ನಾವು ಮಣ್ಣಿನ ಮಕ್ಕಳು, ಮಣ್ಣಿನ ಮಕ್ಕಳು ಅಂತಾರೆ, ರೈತರಿಗಾಗಿ ಏನು ಮಾಡಿದ್ದಾರೆ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.