ಬೆಳಗಾವಿ: ಮುಡಾ ಹಗರಣ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ವೇಳೆ ಹುದ್ದೆಯಿಂದ ಕೆಳಗಿಳಿಯಬೇಕಾಗಿ ಬಂದರೆ ಅವರ ಸ್ಥಾನಕ್ಕೆ ತಮ್ಮನ್ನು ಪರಿಗಣಿಸಬೇಕು ಎಂಬ ಒತ್ತಾಯ ಕಾಂಗ್ರೆಸ್ ನಾಯಕರಿಂದ ದಿನದಿಂದ ದಿನಕ್ಕೆ ವ್ಯಕ್ತವಾಗುತ್ತಿದೆ. ಬುಧವಾರದಂದು ಈ ಪಟ್ಟಿಗೆ ಮತ್ತೆ ಮೂವರ ಹೆಸರು ಸೇರ್ಪಡೆಗೊಂಡಿದೆ. ಕೆಲವರು ತಾವೇ ಹುರಿಯಾಳು ಎಂದು ಬಿಂಬಿಸಿಕೊಂಡಿದ್ದರೆ, ಇನ್ನು ಕೆಲವರ ಬೆಂಬಲಿಗರು ತಮ್ಮ ನಾಯಕರನ್ನೇ ಮುಖ್ಯಮಂತ್ರಿಯ ಹುದ್ದೆಗೆ ಪರಿಗಣಿಸಬೇಕು ಎಂದು ಒತ್ತಡ ಹೇರುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ರಾಜ್ಯದ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.

ಸಿದ್ದರಾಮಯ್ಯ ಉತ್ತಮ ಆಡಳಿತ ನಡೆಸುತ್ತಿದ್ದು ಒಂದು ವೇಳೆ ಅವರನ್ನು ಬದಲಾವಣೆ ಮಾಡುವ ಪ್ರಸಂಗ ಉದ್ಭವಿಸಿದರೆ ನಾವು ಲಿಂಗಾಯತರು ಸಡ್ಡು ಹೊಡೆಯುತ್ತೇವೆ. ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುವೆ. ಸದ್ಯ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಹೈಕಮಾಂಡ್ ಆಶೀರ್ವಾದ ಇರುವವರಿಗೆ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಪಕ್ಷ ಯಾರ ಬಗ್ಗೆ ಒಲವು ತೋರುತ್ತದೋ ಅವರಿಗೆ ಅದೃಷ್ಟ ಒಲಿಯುತ್ತದೆ. ಅವಕಾಶ ಸಿಕ್ಕರೆ ಲಿಂಗಾಯತರು ಸಿದ್ದರಿದ್ದೇವೆ ಎಂದು ಶಾಸಕ ಹಾಗೂ ಹಿರಿಯ ಲಿಂಗಾಯತ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಇನ್ನೊಂದೆಡೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನೇ ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಬೇಕು ಎಂದು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿದ್ದಾರೆ. ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ, ಎಂ.ಬಿ.ಪಾಟೀಲ, ಸತೀಶ ಜಾರಕಿಹೊಳಿ, ಡಾ. ಪರಮೇಶ್ವರ್, ಬಸವರಾಜ ರಾಯರೆಡ್ಡಿ, ಶರಣಬಸವ ದರ್ಶನಾಪುರ ಅವರು ಈಗಾಗಲೇ ತಾವು ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಗಳು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.