ಮಾನ್ವಿ : ಯಾವತ್ತೂ ಮನೆಯಿಂದ ಆಚೆಗೆ ಬಂದು ರಾಜಕಾರಣದ ಕಡೆ ಮುಖ ಮಾಡದ, ಯಾವ ವಿಷಯಕ್ಕೂ ತಲೆ ಹಾಕದ ನನ್ನ ಪತ್ನಿಯನ್ನೂ ಅವರ ರಾಜಕಾರಣಕ್ಕೆ ಎಳೆದು ತಂದ್ರಲ್ಲಾ ಇದನ್ನು ನೀವು ಕ್ಷಮಿಸ್ತೀರಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಮಾನ್ವಿಯಲ್ಲಿ 45842.17 ಲಕ್ಷ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಶೋಷಿತ-ದಮನಿತ-ಶೂದ್ರ ಜನ ಸಮುದಾಯಗಳ ಸ್ವಾಭಿಮಾನಿ ಸಮಾವೇಷವನ್ನು ಉದ್ಘಾಟಿಸಿ ಮಾತನಾಡಿದರು.

ನಾನು ಏನು ತಪ್ಪು ಮಾಡಿದ್ದೀನಿ? ಕುರಿ ಕಾಯುವವರ ಮಗ ಎರಡನೇ ಬಾರಿ ಸಿಎಂ ಆಗಿದ್ದೇ ತಪ್ಪಾ? ಐದೈದು ಗ್ಯಾರಂಟಿಗಳನ್ನು, ಹತ್ತಾರು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇ ತಪ್ಪಾ? ನನ್ನ ಮೇಲಿನ ಹೊಟ್ಟೆಕಿಚ್ಚಿಗೆ ನನ್ನ ಪತ್ನಿಯನ್ನು ಎಳೆಯಬೇಕಿತ್ತಾ? ಅವರು ಏನು ತಾನೆ ತಪ್ಪು ಮಾಡಿದ್ದರು ಎಂದು ಭಾವನಾತ್ಮಕವಾಗಿ ಜನ ಸಾಗರವನ್ನು ಪ್ರಶ್ನಿಸಿದರು.

BJP-JDS ನ ಸುಳ್ಳು ಮತ್ತು ಕಪಟ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸಲು ಸಿದ್ದರಾಗಿ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಕರೆ ನೀಡಿದರು.

ಕೊಟ್ಟ ಕುದುರೆ ಏರಲಾರದ ಕುಮಾರಸ್ವಾಮಿ ವೀರನೂ ಅಲ್ಲ, ಶೂರನೂ ಅಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದ ಜನರಿಗೆ ಸಹಾಯ ಮಾಡುವ ಅವಕಾಶ ಇತ್ತು. ರಾಜ್ಯದ ಅಭಿವೃದ್ಧಿ ಮಾಡುವ ಅವಕಾಶವೂ ಇತ್ತು. ಅಧಿಕಾರ, ಅವಕಾಶ ಇದ್ದಾಗ ಜನಪರ ಕೆಲಸ ಮಾಡದ ಕುಮಾರಸ್ವಾಮಿ ಮತ್ತು ಬಿಜೆಪಿಯವರು ಈಗ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸುಳ್ಳು ಮತ್ತು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯದ ಬೊಕ್ಕಸ ಖಾಲಿ, ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿದಾಗಲೂ ಜನರ ಕೆಲಸ ಮಾಡಲಿಲ್ಲ. ಬಿಜೆಪಿ ಸ್ವಂತ ಶಕ್ತಿ ಮೇಲೆ ಇವತ್ತಿನವರೆಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲ. ಏನಿದ್ದರೂ ಆಪರೇಷನ್ ಕಮಲದ ಮೂಲಕ ಮಾತ್ರ ಬಿಜೆಪಿ ಅಧಿಕಾರ ಹಿಡಿದಿದೆ. ಹೀಗಾಗಿ ಅವರಿಗೆ ಜನರ ಅಭಿವೃದ್ಧಿ ಬೇಕಾಗಿಲ್ಲ. ಬೈಪಾಸ್ ಹಾದಿಯಲ್ಲೇ ಅಧಿಕಾರ ಹಿಡಿಯಲು ಕಾದು ಕುಳಿತಿದ್ದಾರೆ ಎಂದು ಟೀಕಿಸಿದರು.

ಕಾರಣವೇ ಇಲ್ಲದೆ ರಾಜೀನಾಮೆ ಕೊಡಿ, ರಾಜಿನಾಮೆ ಕೊಡಿ ಎನ್ನುತ್ತಿದ್ದಾರೆ. ನನಗೂ ಬೇಸರ ಆಗಿದೆ. ಸಾಕಾಗಿದೆ. ಆದರೆ, ನಿಮಗಾಗಿ ನಾನು ಹೋರಾಟ ಮುಂದುವರೆಸಿದ್ದೇನೆ. ನಾನು ಅವರ ಬೆದರಿಕೆಗಳಿಗೆ ಜಗ್ಗೋನೂ ಅಲ್ಲ. ಬಗ್ಗೋನೂ ಅಲ್ಲ. ಹೋರಾಟ ಮುಂದುವರೆಸ್ತೀನಿ ಎಂದರು.

ನನ್ನನ್ನು ಕೆಳಗೆ ಇಳಿಸುವ ಬಿಜೆಪಿ-ಜೆಡಿಎಸ್ ಷಡ್ಯಂತ್ರ ಸೋಲಿಸ್ತೀನಿ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ. ಬಿಜೆಪಿಗೆ ನೀವೂ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದ ಸಿದ್ದರಾಮಯ್ಯ ಅವರು ಬೃಹತ್ ಸ್ವಾಭಿಮಾನಿ ಜನ ಸಮಾವೇಷ ಸಂಘಟಿಸಿದ ಬೋಸರಾಜು ಮತ್ತು ರವಿ ಬೋಸರಾಜು ಅವರಿಗೆ ಅಭಿನಂದನೆ ಸಲ್ಲಿಸಿದರು.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಅಭಿವೃದ್ಧಿಗೆ ನಾವು ಬದ್ದರಾಗಿದ್ದೇವೆ ಎಂದರು.

ಜಾತಿಗಣತಿ ವರದಿ : ಒಳಮೀಸಲಾತಿ ಬಗ್ಗೆ ಚರ್ಚಿಸಿ ತೀರ್ಮಾನ – ಮುಖ್ಯಮಂತ್ರಿ ಸಿದ್ದರಾಮಯ್ಯ :

ರಾಯಚೂರು: ಜಾತಿಗಣತಿಗೆ ಸಂಬಂಧಿಸಿದಂತೆ , ಒಳಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಆದೇಶವಾಗಿದ್ದು, ಒಳ ಮೀಸಲಾತಿ ಬಗ್ಗೆ ಸರ್ಕಾರಕ್ಕೆ ವಿರೋಧವಿಲ್ಲ. ಆದರೆ ಇದರ ಬಗ್ಗೆಯೂ ವರಿಷ್ಠರೊಂದಿಗೆ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ರಾಯಚೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾಂತರಾಜು ಆಯೋಗದ ಜಾತಿಗಣತಿ ವರದಿಯನ್ನು ಪ್ರಕಟಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಜಾತಿ ಗಣತಿ ವರದಿಯನ್ನು ಈಗಾಗಲೇ ಸ್ವೀಕರಿಸಲಾಗಿದ್ದು, ಈ ಬಗ್ಗೆ ಸಚಿವ ಸಂಪುಟ ಸಭೇಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ವರದಿಯಲ್ಲಿ ಸಣ್ಣ ಪುಟ್ಟ ದೋಷಗಳಿದ್ದರೆ ಅದನ್ನು ಸರಿಪಡಿಸುವ ಬಗ್ಗೆಯೂ ಪರಿಶೀಲಿಸಲಾಗುವುದು ಎಂದರು.

ರಾಜ್ಯದ ಕಾಂಗ್ರೆಸ್ ನ ವಿವಿಧ ನಾಯಕರು ವರಿಷ್ಠರೊಂದಿಗೆ ಚರ್ಚೆ ಮಾಡುವುದು ಸಹಜ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಊಹಾಪೋಹಗಳು ಅಗತ್ಯವಿಲ್ಲ. ವಿರೋಧಪಕ್ಷಗಳು , ನನ್ನ ಮೇಲಿನ ಸುಳ್ಳು ಆರೋಪಗಳನ್ನು ಮಾಡಿ ರಾಜಿನಾಮೆ ಬೇಡಿದರೆ, ರಾಜಿನಾಮೆ ಕೊಡಲು ಸಾಧ್ಯವಿಲ್ಲ. ಸುಳ್ಳು ಆರೋಪಗಳನ್ನು ಮಾಡಿದರೆ, ವಸ್ತುಸ್ಥಿತಿಯನ್ನು ಜನರ ಮುಂದಿಡುವ ಕೆಲಸ ಮಾಡುತ್ತೇವೆ ಎಂದರು.

ಜೆಡಿಎಸ್ ನ ಜಿಟಿದೇವೇಗೌಡ, ಮುಖ್ಯಮಂತ್ರಿಯವರನ್ನು ಬೆಂಬಲಿಸಿ ಮಾತನಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಜೆಡಿಎಸ್ ಪಕ್ಷದ ಕೋರ್ ಕಮಿಟಿಯ ಅಧ್ಯಕ್ಷ ಸ್ಥಾನದಲ್ಲಿದ್ದು, ಮುಡಾದ ಸದಸ್ಯರೂ ಆಗಿದ್ದಾರೆ. ಅವರು ಸತ್ಯ ಹೇಳಿರುವುದರಲ್ಲಿ ತಪ್ಪಿಲ್ಲ. ಈ ಪ್ರಕರಣದ ವಿರುದ್ದ , ವಿರೋಧಪಕ್ಷದವರ ಪಾದಯಾತ್ರೆಯನ್ನು ನಡೆಸುವುದು ಬೇಡ ಎಂದವರಲ್ಲಿ ಜಿ ಟಿ ದೇವೇಗೌಡರು ಒಬ್ಬರು ಎಂದರು.

ವಿರೋಧಪಕ್ಷದ ನಾಯಕ ಆರ್ ಅಶೋಕ್ ಅವರ ಮೇಲೆ ಎಫ್ ಐ ಆರ್ ಆಗಿರುವುದರಿಂದ , ತಾನು ರಾಜಿನಾಮೆ ನೀಡಲು ಸಿದ್ದ, ಸಿಎಂ ಅವರೂ ರಾಜಿನಾಮೆ ನೀಡಲಿ ಎಂದು ಹೇಳಿರುವ ಬಗ್ಗೆ ಉತ್ತರಿಸಿ, ಅವರು ಮೊದಲು ರಾಜಿನಾಮೆ ನೀಡಲಿ, ಜಮೀನು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಮೊದಲು ರಾಜಿನಾಮೆ ನೀಡಲಿ ಎಂದರು.

ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. 1973 ರಲ್ಲಿ ಮೈಸೂರು ರಾಜ್ಯಕ್ಕೆ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ , ಕರ್ನಾಟಕ ಎಂದು ನಾಮಕರಣ ಮಾಡಿದ್ದಕ್ಕೆ 50 ವರ್ಷಗಳ ಸಂದಿರುವ ಸುಸಂದರ್ಭದಲ್ಲಿ ಕರ್ನಾಟಕ ಸಂಭ್ರಮವನ್ನು ಇಂದು ಆಚರಿಸಲಾಗುತ್ತಿದೆ. ಈ ಪ್ರಯುಕ್ತ ವಿಧಾನಸೌಧದಲ್ಲಿ ಭುವನೇಶ್ವರಿ ಪ್ರತಿಮೆಯನ್ನೂ ಸಹ ಪ್ರತಿಷ್ಠಾಪಿಸಲಾಗುತ್ತಿದೆ.ಗೋಕಾಕ್ ಚಳವಳಿ ಮತ್ತು ಕನ್ನಡ ಸಂಭ್ರಮಕ್ಕೆ ಸಂಬಂಧಪಟ್ಟಂತೆ ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಮಾಡುತ್ತಿರುವ ಕಾರ್ಯಕ್ರಮವಾಗಿದೆ ಎಂದರು.

ಸ್ವಾಭಿಮಾನಿ ಸಮಾವೇಶ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹಿಂದುಳಿದ ವರ್ಗದವರು, ದೀನದಲಿತರ, ಅಲ್ಪಸಂಖ್ಯಾತರ ವರ್ಗದವರ ಸ್ವಾಭಿಮಾನಿ ಸಮಾವೇಶ ಇದಾಗಿದೆ.
ತುಂಗಭದ್ರಾ ಜಲಾಶಯ ಹಾಗೂ ನವಲೆ ಜಲಾಶಯದ ಬಗ್ಗೆ ಶಾಶ್ವತ ಪರಿಹಾರ ಒದಗಿಸುವ ಕುರಿತು ಪತ್ರಕರ್ತರ ಪ್ರಶ್ನೆಗೆ ಬಗ್ಗೆ ಉತ್ತರಿಸಿ, ಜಲಾಶಯದಲ್ಲಿ 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು, ಪ್ರಸ್ತುತ 102 ಟಿಎಂಸಿ ನೀರು ಸಂಗ್ರಹವಿದೆ. ಸುಮಾರು 30 ಟಿಎಂಸಿ ನೀರಿಗೆ ಆಗುವಷ್ಟು ಹೂಳು ತುಂಬಿರುವುದರಿಂದ ಕೆಳಭಾಗದ ರೈತರಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ. 19 ನೇ ಗೇಟ್ ದುರಸ್ತಿಯನ್ನು ಐದು ದಿನಗಳೊಳಗೆ ದುರಸ್ತಿ ಮಾಡಿ ಬಾಗಿನ ಅರ್ಪಿಸಲಾಗಿದೆ. ಸರ್ಕಾರ ಕೆಳಭಾಗದ ರೈತರಿಗೆ ನೀರು ಒದಗಿಸಲು ಅನುಕೂಲವಾಗುವಂತಹ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದರು.

ಇಲ್ಲಿ ನೆಲೆಸಿರುವ ಎಲ್ಲರೂ ಕನ್ನಡಿಗರೇ. ಮನೆ ಭಾಷೆ ಯಾವುದೇ ಇದ್ದರೂ ವ್ಯಾವಹಾರಿಕ ಭಾಷೆ ಕನ್ನಡವಾಗಲಿ: ಸಿಎಂ ಕರೆ :

ಡಾ.ರಾಜ್ ಕುಮಾರ್ ಅವರು ಕನ್ನಡ ಚಳವಳಿಗೆ ಧುಮುಕಿದಾಗ ಗೋಕಾಕ್ ಚಳವಳಿಗೆ ವೇಗ ಹೆಚ್ಚಾಯ್ತು: ಸಿಎಂ

 

ರಾಯಚೂರು:
ಕರ್ನಾಟಕ ಸಂಪೂರ್ಣ ಕನ್ನಡಮಯವಾಗಲಿ. ಕನ್ನಡ ನೆಲ, ಜಲ, ಸಂಸ್ಕೃತಿ, ಭಾಷೆ, ಭೂಮಿ ಎಲ್ಲವೂ ಕನ್ನಡಮಯವಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ “ಕನ್ನಡ ಸಂಭ್ರಮ 50ರ ಅಂಗವಾಗಿ ಆಯೋಜಿಸಿದ್ದ ಗೋಕಾಕ್ ಚಳವಳಿ: ಹಿನ್ನೋಟ-ಮುನ್ನೋಟ” ಬೃಹತ್ ಸಮಾವೇಷವನ್ನು ಉದ್ಘಾಟಿಸಿ ಮಾತನಾಡಿದರು.

ಇಲ್ಲಿ ನೆಲೆಸಿರುವ ಎಲ್ಲರೂ ಕನ್ನಡಿಗರೇ. ಮನೆ ಭಾಷೆ ಯಾವುದೇ ಇದ್ದರೂ ವ್ಯಾವಹಾರಿಕ ಭಾಷೆ ಕನ್ನಡವಾಗಲಿ. ಕನ್ನಡ ಅಗ್ರ ಭಾಷೆಯಾಗಲಿ, ಕನ್ನಡ ಮೊದಲ ಭಾಷೆಯಾಗಲಿ ಎಂದು ಸಿಎಂ ಕರೆ ನೀಡಿದರು.

ಗೋಕಾಕ್ ಚಳವಳಿಯ ಪರಿಣಾಮ ರಾಜ್ಯದಲ್ಲಿ ಕನ್ನಡದ ವಾತಾವರಣ ವಿಸ್ತರಿಸಲು ಕನ್ನಡ ಕಾವಲು ಸಮಿತಿಯನ್ನು ರಚಿಸಲಾಯಿತು. ಬಳಿಕ ಇದೇ ಸಮಿತಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯಿತು ಎಂದರು.

ಪ್ರತಿಯೊಂದು ಭಾಷೆಯನ್ನೂ ಕಲಿಯಿರಿ, ಆದರೆ ಆಡಳಿತ ಭಾಷೆ ಕನ್ನಡ ಆಗಿರಲಿ ಎಂದರು.

ಕನ್ನಡ ನೆಲದಲ್ಲಿ ನಡೆದ ಕನ್ನಡ ಭಾಷಾ ಚಳವಳಿ ಅತ್ಯಂತ ಚರಿತ್ರಿಕವಾದದ್ದು. ನಾನು ಕಾವಲು ಸಮಿತಿ ಅಧ್ಯಕ್ಷನಾಗಿದ್ದಾಗ ಇಂಗ್ಲಿಷ್ ಟೈಮ್ ರೈಟರ್ ಗಳನ್ನು ಕಿತ್ತುಕೊಂಡು ಕನ್ನಡ ಟೈಪ್ ರೈಟರ್ ಗಳನ್ನು ಕೊಡ್ತಿದ್ದೆ ಎಂದು ತಮ್ಮ ಅವಧಿಯ ಕನ್ನಡ ಕಟ್ಟುವ ಕೆಲಸವನ್ನು ಸ್ಮರಿಸಿದರು.

ಎಲ್ಲಾ ಭಾಷೆಗಳ ಬಗ್ಗೆ ಗೌರವ ಇರಲಿ, ಎಷ್ಟು ಭಾಷೆಗಳನ್ನಾದರೂ ಕಲಿಯಿರಿ ಆದರೆ ಈ ನೆಲದ ಭಾಷೆ ಕನ್ನಡವನ್ನು ಬಿಟ್ಟು ಕೊಡುವಷ್ಟು ದಾರಾಳತನ ಬೇಡ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಕನ್ನಡ ಚಳವಳಿಗಾರರನ್ನು, ಗೋಕಾಕ್ ಹೋರಾಟಗಾರರನ್ನು ಮುಖ್ಯಮಂತ್ರಿಗಳು ಸನ್ಮಾನಿಸಿದರು.

ಸಚಿವರಾದ ಶಿವರಾಜ್ ತಂಗಡಗಿ, ಹೆಚ್.ಸಿ.ಮಹದೇವಪ್ಪ, ಶರಣ ಪ್ರಕಾಶ್ ಪಾಟೀಲ್, ಬೋಸರಾಜು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಸೇರಿ ಜಿಲ್ಲೆಯ ಶಾಸಕರುಗಳು, ಮಾಜಿ ಶಾಸಕರು, ಕನ್ನಡ ಚಳವಳಿಗಾರರು, ಹೋರಾಟಗಾರರು, ಕನ್ನಡದ ಕಾರ್ಯಕರ್ತರು ಉಪಸ್ಥಿತರಿದ್ದರು.‌