ಮಂಗಳೂರು : ಕೊಂಕಣ ರೈಲ್ವೆಯನ್ನು ರೈಲ್ವೆ ಇಲಾಖೆ ಜೊತೆ ವಿಲೀನ ಮಾಡಬೇಕು ಮತ್ತು ಮಂಗಳೂರು ಪ್ರತ್ಯೇಕ ರೈಲ್ವೆ ವಿಭಾಗ ಮಾಡಲು ಸಚಿವ ಸೋಮಣ್ಣ ಒಪ್ಪಿಗೆ ಸೂಚಿಸಿದರು. ಆದರೆ, ಇದನ್ನು ಯಾವ ರೀತಿಯಲ್ಲಿ ಮಾಡಬೇಕು ಎಂಬ ಬಗ್ಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಜುಲೈ 20ರಂದು ರೈಲ್ವೆ ಅಧಿಕಾರಿಗಳು ಮತ್ತು ಶಾಸಕರು ಚರ್ಚಿಸುವಂತೆ ಅವರು ಸಲಹೆ ನೀಡಿದ್ದಾರೆ.

ಸಚಿವ ಸೋಮಣ್ಣ ಅವರು ಬುಧವಾರ ಮಂಗಳೂರಿನಲ್ಲಿ ಸಂಸದರು ಹಾಗೂ ಶಾಸಕರ ಜೊತೆ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಮಹತ್ವದ ಸಭೆ ನಡೆಸಿ ಮಾತನಾಡಿದರು.ರಾಜ್ಯದ ಪ್ರಮುಖ ವಾಣಿಜ್ಯ ನಗರವಾಗಿರುವ ಮಂಗಳೂರು ರೈಲ್ವೆ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಮಂಗಳೂರಿನಲ್ಲಿ ರೈಲ್ವೆ ಪರಿಸ್ಥಿತಿ ಹೀನಾಯವಾಗಿದೆ. ಮಂಗಳೂರು ರೈಲ್ವೆ ಈಗ ಪಾಲಕ್ಕಾಡ್, ಕೊಂಕಣ ಮತ್ತು ನೈರುತ್ಯ ರೈಲ್ವೆ ವಲಯಗಳಿಂದ ಹರಿದು ಹಂಚಿ ಹೋಗಿದೆ. ಅಭಿವೃದ್ಧಿ ಕುಂಠಿತಗೊಂಡಿದೆ. ಆದ್ದರಿಂದ ಮಂಗಳೂರು ಪ್ರತ್ಯೇಕ ರೈಲ್ವೆ ವಿಭಾಗದ ರಚನೆ ಮಾಡಬೇಕು ಎನ್ನುವುದು ಈ ಭಾಗದ ಜನತೆಯ ಬಹುಕಾಲದ ಬೇಡಿಕೆಯಾಗಿದೆ.ಈ ಬಗ್ಗೆ ಕರಾವಳಿ ಜಿಲ್ಲೆಗಳ ರೈಲ್ವೆ ಬೆಳಕೆದಾರರು ಅಭಿಯಾನ ನಡೆಸಿದ್ದು ಸಹಿ ಅಭಿಯಾನ ಮೂಲಕ ರೈಲ್ವೆ ಇಲಾಖೆಯ ಗಮನ ಸೆಳೆದಿದ್ದಾರೆ.

ಸೋಮಣ್ಣ ಅವರು ಸಂಸದ ಬ್ರಿಜೇಶ್ ಚೌಟ ಮತ್ತು ಶಾಸಕ ವೇದವ್ಯಾಸ್ ಕಾಮತ್ ಅವರು ನೀಡಿರುವ ಅಭಿಪ್ರಾಯವನ್ನು ಆಲಿಸಿ ಅವರು ಹೇಳಿರುವ ವಿಷಯಗಳನ್ನು ಕಾರ್ಯಗತ ಮಾಡಬೇಕು. ಇದು ನನ್ನ ಸೂಚನೆ ಎಂದು ಸ್ಥಳದಲ್ಲಿ ಉಪಸ್ಥಿತರಿದ್ದ ಮೂರು ರೈಲ್ವೆ ಮಂಡಳಿಯ ಮುಖ್ಯಸ್ಥರಿಗೆ ಸೂಚನೆ ನೀಡಿದರು.ಮಂಗಳೂರು-ಬೆಂಗಳೂರು ಸಾಗುವ ರೈಲಿಗೆ ಯಶವಂತಪುರ ಕುಣಿಗಲ್ ನಲ್ಲಿ ಸ್ಟಾಫ್ ಕೊಟ್ಟಿದ್ದಾರೆ. ಇದರಿಂದ ರೈಲು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಸಂಸದ ಬ್ರಿಜೇಶ ಚೌಟ ಹೇಳಿದರು. ಇದನ್ನು 154 ದಿನದಲ್ಲಿ ಸರಿಪಡಿಸುತ್ತೇವೆ ಎಂದು ಅಧಿಕಾರಿಗಳು ಉತ್ತರ ನೀಡಿದರು. ಆದರೆ, ಸಚಿವ ಸೋಮಣ್ಣ ಅವರು ಅಷ್ಟು ದಿನ ಯಾಕೆ ? ವಿಳಂಬವಾಗುತ್ತದೆ. ಈ ಕೂಡಲೇ ಸರಿಪಡಿಸಿ ಎಂದು ಸೂಚನೆ ನೀಡಿದರು.

ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಮಂಗಳೂರು-ಚೆನ್ನೈ ರೈಲನ್ನು ಕೊಯಮತ್ತೂರು ಬದಲು ಬೆಂಗಳೂರು ಮೂಲಕ ಸಂಚರಿಸುವಂತೆ ಮಾಡಿದರೆ ಸುಮಾರು 200 ಕಿಲೋಮೀಟರು ಉಳಿತಾಯವಾಗುತ್ತದೆ. ಜಪಾನಿನಲ್ಲಿ ರೈಲು ಒಂದು ಗಂಟೆಯಲ್ಲಿ 300 ಕಿಲೋಮೀಟರ್ ಸಂಚಾರ ಮಾಡುತ್ತದೆ. ಆದರೆ, ನಮ್ಮಲ್ಲಿ ಬೆಂಗಳೂರು-ಮಂಗಳೂರು ನಡುವೆ 350 ಕಿಲೋಮೀಟರ್ ಕ್ರಮಿಸಲು 11 ಗಂಟೆ ಬೇಕಾಗುತ್ತದೆ. ತಾಳಗುಪ್ಪ ರೈಲು ನಿಲ್ದಾಣವನ್ನು ಭಟ್ಕಳಕ್ಕೆ ಸಂಪರ್ಕ ಕಲ್ಪಿಸಿದರೆ ಅನುಕೂಲವಾಗುತ್ತದೆ. ಇದರಿಂದ ಮುಂಬೈಗೆ ಸಂಪರ್ಕ ಸುಲಭವಾಗಿದೆ ಎಂದು ತಿಳಿಸಿದರು.

ಶಾಸಕ ವೇದವ್ಯಾಸ್ ಕಾಮತ್ ಅವರು ಪಾಂಡೇಶ್ವರದಲ್ಲಿ ಕಾರ್ಯಾಚರಣೆ ಇಲ್ಲದಿದ್ದರೂ ಅಲ್ಲಿನ ರೈಲ್ವೆ ಗೇಟ್ ಜನರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು.ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಕರಾವಳಿಯಲ್ಲಿ ಟೆಂಪಲ್ ಟೂರಿಸ್ಟ್ ಬೆಳಸಬೇಕು. ಧರ್ಮಸ್ಥಳ-ಕುಕ್ಕೆ ಸುಬ್ರಮಣ್ಯ- ಕಾರ್ಕಳ ಮೂಲಕ ಕೊಲ್ಲೂರಿಗೆ ಪ್ರತ್ಯೇಕ ರೈಲ್ವೆ ಹಳಿ ನಿರ್ಮಾಣ ಮಾಡಬೇಕು. ಇದರಿಂದ ಪ್ರಸಿದ್ಧ ದೇವಸ್ಥಾನಗಳಿಗೆ ಒಂದಕ್ಕೊಂದು ಸಂಪರ್ಕ ಆಗುತ್ತದೆ. ಭಕ್ತರಿಗೆ ಅನುಕೂಲವಾಗುತ್ತದೆ. ಜೊತೆಗೆ ಅಂಕೋಲಾ ಭಾಗದಲ್ಲಿ ಹುಬ್ಬಳ್ಳಿ ಕಡೆ ರೈಲು ಹಳಿ ನಿರ್ಮಾಣ ಮಾಡಲು ಅರಣ್ಯ ಇಲಾಖೆ ತಕರಾರು ಇದೆ. ಎತ್ತಿನಹೊಳೆಗೆ 100 ಹೆಕ್ಟರ್ ಅರಣ್ಯ ನೀಡಿರುವ ರೀತಿಯಲ್ಲೇ ರೈಲ್ವೆ ಹಳಿ ಹಾಕುವ ವ್ಯವಸ್ಥೆ ಮಾಡಲು ಅವರು ಸಲಹೆ ನೀಡಿದರು.ಕೊಂಕಣ ರೈಲ್ವೆ ನಿಗಮದ ಸಿಎಂ ಡಿ ಸಂತೋಷ್ ಕುಮಾರ್ ಜಾ ಮಾತನಾಡಿ, ಅಮೃತ ಭಾರತ ಯೋಜನೆ ಅಡಿ ಕಾರವಾರ ಮತ್ತು ಉಡುಪಿ ರೈಲ್ವೆ ನಿಲ್ದಾಣ ಅಭಿವೃದ್ಧಿಯಾಗಲಿದೆ. ಸುರತ್ಕಲ್ ರೈಲ್ವೆ ನಿಲ್ದಾಣವನ್ನು ತೋಕೂರಿಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ.ಆದರೆ ತೋಕೂರಿನಲ್ಲಿ ಭೂಸ್ವಾಧೀನ ಸಮಸ್ಯೆಯಾಗಿದೆ ಎಂದು ಹೇಳಿದರು.