ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ಇತರ ಕೆಲವರನ್ನು ಹೆಸರಿಸುವಂತೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳ ವಿರುದ್ಧ ರಾಜ್ಯದ ಹಿರಿಯ ಅಧಿಕಾರಿಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.
ಜಾರಿ ನಿರ್ದೇನಾಲಯ ಇಬ್ಬರು ಅಧಿಕಾರಿಗಳಾದ ಮಿತ್ತಲ್ ಹಾಗೂ ಕಣ್ಣನ್ ವಿರುದ್ಧ ನಗರದ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಿಂದಿನ ಜಂಟಿ ನಿರ್ದೇಶಕ ಕಲ್ಲೇಶ ಅವರು ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶೇಷಾದ್ರಿಪುರಂ ಠಾಣೆಯಲ್ಲಿ ಎನ್ಸಿಆರ್ (NCR) ದಾಖಲಾಗಿದ್ದು, ವಿಲ್ಸನ್ ಗಾರ್ಡನ್ ಠಾಣೆಗೆ ವರ್ಗಾವಣೆ ಬಳಿಕ ಎಫ್ಐಆರ್ (FIR) ದಾಖಲಾಗಿದೆ.ವಾಲ್ಮೀಕಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಜುಲೈ 16 ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಕಲ್ಲೇಶ್ ಬಿ. ಅವರಿಗೆ ಸೂಚಿಸಲಾಯಿತು. ನಂತರ ಜುಲೈ 18 ರಂದು ಕೆಲವು ಕಡತಗಳ ಸಮೇತ ಮತ್ತೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಯಿತು. ಅಲ್ಲದೆ, ಖಜಾನೆಯ ಮೂಲಕ ನಿಗಮದ ಎಂಜಿ ರಸ್ತೆ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ನಾಗೇಂದ್ರ, ಆರ್ಥಿಕ ಇಲಾಖೆ ಸೂಚನೆಯಿತ್ತು ಎಂದು ಬರೆದುಕೊಡುವಂತೆ ನನ್ನ ಮೇಲೆ ಒತ್ತಡ ಹೇರಿದ್ದರ,” ಎಂದು ಕಲ್ಲೇಶ ದೂರಿನಲ್ಲಿ ಆರೋಪಿಸಿದ್ದಾರೆ.
ಅಧಿಕಾರಿಗಳು ತನ್ನನ್ನು ನಿಂದಿಸಿದ್ದಾರೆ ಮತ್ತು ಮುಖ್ಯಮಂತ್ರಿ, ನಾಗೇಂದ್ರ ಮತ್ತು ಎಫ್‌ಡಿ ಸೂಚನೆ ಇತ್ತು ಎಂದು ಬರೆದುಕೊಟ್ಟರೆ ಮಾತ್ರ ಪ್ರಕರಣದಲ್ಲಿ ಬಚಾವ್ ಮಾಡುತ್ತೇವೆ. ಇಲ್ಲದಿದ್ದರೆ ಬಂಧಿಸುತ್ತೇವೆ. ಎರಡು ವರ್ಷ ಜಾಮೀನು ಸಿಗಲ್ಲ ಎಂದು ಬೆದರಿಕೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವ ಅವರು, ಇ.ಡಿ. ಅಧಿಕಾರಿಗಳಾದ ಮುರಳಿ ಕಣ್ಣನ್ ಮತ್ತು ಮಿತ್ತಲ್ ಎಂಬ ಅಧಿಕಾರಿಗಳನ್ನು ಹೆಸರಿಸಿದ್ದಾರೆ. ಮುರಳಿ ಕಣ್ಣನ್ ಅವರು, ಮಾಜಿ ಸಚಿವ ಬಿ ನಾಗೇಂದ್ರ, “ಉನ್ನತ ಅಧಿಕಾರ” (ಸಿಎಂ ಸಿದ್ದರಾಮಯ್ಯ ಅವರನ್ನು ಉಲ್ಲೇಖಿಸಿ) ಮತ್ತು ಹಣಕಾಸು ಇಲಾಖೆಯನ್ನು ಹೆಸರಿಸಲು ಸೂಚಿಸಿದರು ಎಂದು ಅವರು ಆರೋಪಿಸಿದ್ದಾರೆ.ಆರೋಪಗಳು ಕಳೆದ ವಾರ ಸಚಿವರ ಗುಂಪು ಮಾಧ್ಯಮಗಳ ಮುಂದೆ ಮಾಡಿದ ಆರೋಪಕ್ಕೆ ಅನುಗುಣವಾಗಿದೆ. ವಾಲ್ಮೀಕಿ ಹಗರಣದಲ್ಲಿ ಬಂಧಿತರಾಗಿರುವ ಜನರನ್ನು ಮುಖ್ಯಮಂತ್ರಿ ಮತ್ತು ಅವರ ನಾಯಕರನ್ನು ಹೆಸರಿಸಲು ಇ.ಡಿ. ಒತ್ತಾಯಿಸುತ್ತಿದೆ ಎಂದು ರಾಜ್ಯದ ಐವರು ಸಚಿವರು ಗುರುವಾರ ಆರೋಪಿಸಿದ್ದರು. ರಾಜ್ಯದ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವುದೇ ಇದರ ಉದ್ದೇಶ ಎಂದು ಅವರು ಆರೋಪಿಸಿದ್ದರು.
ಮೇ 21 ರಂದು ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಪಿ ಶವವಾಗಿ ಪತ್ತೆಯಾದ ನಂತರ ಆಪಾದಿತ ಹಗರಣ ಪತ್ತೆಯಾಗಿದೆ. ಅವರು ನಿಗಮದಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ಹಣವನ್ನು ವರ್ಗಾಯಿಸಲಾಗಿದೆ ಎಂದು ಆರೋಪಿಸಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಕರ್ನಾಟಕ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವಲ್ಲದೆ, ಸಿಬಿಐ ಕೂಡ ₹ 187 ಕೋಟಿ ಅವ್ಯವಹಾರದ ಬಗ್ಗೆ ತನಿಖೆ ನಡೆಸುತ್ತಿದೆ. ಅಕ್ರಮ ಹಣ ವರ್ಗಾವಣೆ ಕೋನದ ಬಗ್ಗೆ ತನಿಖೆ ನಡೆಸಲು ಸಿಬಿಐ ಜಾರಿ ನಿರ್ದೇಶನಾಲಯವನ್ನು ಸಂಪರ್ಕಿಸಿದೆ.
ಮಾಜಿ ಸಚಿವ ನಾಗೇಂದ್ರ ಮತ್ತು ವಾಲ್ಮೀಕಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ದಡ್ಡಲ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಇ.ಡಿ. ಶೋಧ ನಡೆಸಿದೆ. ಈ ಪ್ರಕರಣದ ಸಂಬಂಧ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಬಿ ನಾಗೇಂದ್ರ ಅವರನ್ನು ಇ.ಡಿ. ಬಂಧಿಸಿದೆ.