ಮಂಗಳೂರು: ಲೋಕಸಭಾ ಅಧಿವೇಶನದಲ್ಲಿ ಹಿಂದುತ್ವದ ಅವಹೇಳನ ಮಾಡಿದ್ದಾರೆ ಎಂದು ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು, ಹಿಂದುಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದವು. ಇದರ ಬೆನ್ನಲ್ಲೇ ಜಿಲ್ಲೆಯ ಬಂಟ್ವಾಳ ತಾಲೂಕಿನ ಪವರ್ ಫುಲ್ ದೇವಿಗೆ ರಾಹುಲ್ ಗಾಂಧಿ ವಿರುದ್ಧ ವಿಶ್ವ ಹಿಂದು ಪರಿಷತ್ ಮುಖಂಡರು ದೂರು ನೀಡಿರುವುದು ಕಂಡುಬಂದಿದೆ. ದೇವರ ನಿಂದನೆ, ಧರ್ಮವಿರೋಧಿ ಹೇಳಿಕೆ ಕೊಟ್ಟು ರಾಷ್ಟ್ರೀಯತೆಗೆ ಅವಮಾನ ಮಾಡಿದ್ದಾರೆ ಎಂದು ತುಳುನಾಡಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶ್ರೀಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಿಗೆ ದೂರು ನೀಡಲಾಗಿದೆ.ಶ್ರೀ ಕ್ಷೇತ್ರ ಪೊಳಲಿಯಲ್ಲಿ ಪ್ರಧಾನ ಅರ್ಚಕರಾದ ಪದ್ಮನಾಭ ಭಟ್ ಮೂಲಕ ವಿಶ್ವ ಹಿಂದು ಪರಿಷತ್ ಮುಖಂಡರು ದೇವಿಗೆ ದೂರು ಕೊಟ್ಟು, ರಾಹುಲ್ ಗಾಂಧಿಗೆ ಒಳ್ಳೆ ಬುದ್ಧಿಕೊಟ್ಟು, ಈ ಹೇಳಿಕೆಗೆ ತಕ್ಕ ಶಿಕ್ಷೆ ನೀಡಲು ಪ್ರಾರ್ಥನೆ ಮಾಡಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದೇನು?
“ಹಿಂದು ಧರ್ಮ ಹಾಗೂ ನಮ್ಮ ಅನೇಕ ಹಿಂದೂ ಮಹಾಪುರುಷರು ಅಹಿಂಸೆಯನ್ನು ಪ್ರತಿಪಾದಿಸುತ್ತಾರೆ. ಜೀಸಸ್ ಕ್ರೈಸ್ಟ್ ಕೂಡ ಅಹಿಂಸೆಯನ್ನೇ ಪ್ರತಿಪಾದಿಸುತ್ತಾನೆ. ಸ್ವತಃ ಕೈಯಲ್ಲಿ ತ್ರಿಶೂಲ ಹಿಡಿದಿರುವ ಮಹಾಶಿವನೂ ಅಹಿಂಸೆಯನ್ನೇ ಹೇಳುತ್ತಾನೆ. ಆದರೆ ದಿನದ 24 ಗಂಟೆ ಹಿಂದುಗಳೆಂದು ಹೇಳುತ್ತಾ ತಿರುಗಾಡುವವರು ಹಿಂಸೆ, ಶತ್ರುತ್ವ, ಅಸತ್ಯವನ್ನೇ ಹೇಳುತ್ತಿದ್ದಾರೆ. ನೀವು ಹಿಂದುಗಳೇ ಅಲ್ಲ” ಎಂದು ರಾಹುಲ್ ಗಾಂಧಿ ಸಂಸತ್‌ನಲ್ಲಿ ಜುಲೈ 1ರಂದು ಹೇಳಿದ್ದರು.